ಬೆಂಗಳೂರು: ನಾಗರಬಾವಿಯಲ್ಲಿರುವ ಶಾಲೆಯೊಂದು ಸಿಬಿಎಸ್‌ಇ ಮಾನ್ಯತೆ (School affiliation) ಇದೆ ಎಂದು ಸುಳ್ಳು ಹೇಳಿ ಮೋಸ ಮಾಡಿದೆ ಎಂದು ಮಕ್ಕಳ ಪೋಷಕರು ರಸ್ತೆಯಲ್ಲಿ ನಿಂತು ಗಲಾಟೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ನಾಗರಬಾವಿಯ ಆರ್ಕಿಡ್ ಸ್ಕೂಲ್ ಸಿಬಿಎಸ್‌ಇ ಮಾನ್ಯತೆ ಪಡೆದಿದೆ ಎಂದು ಹೇಳಿ ಲಕ್ಷ ಲಕ್ಷ ಶುಲ್ಕ ವಸೂಲಿ ಮಾಡಿದ್ದಾರೆ. ಆದರೆ ಈಗ ಶಾಲೆಗೆ ಮಾನ್ಯತೆಯೇ ಇಲ್ಲ ಎಂದು ತಿಳಿದುಬಂದಿದೆ. ಶಿಕ್ಷಣ ಇಲಾಖೆಯೇ ಈ ವಿಚಾರವನ್ನು ಲಿಖಿತವಾಗಿ ತಿಳಿಸಿದೆ. ಇದರಿಂದ ಸಿಟ್ಟಿಗೆದ್ದಿರುವ ಪೋಷಕರು ಶಾಲೆಯ ಮುಂದೆ ಬಂದು ಪ್ರತಿಭಟನೆ ನಡೆಸಿದರು.
ಸಾಲ ಸೋಲ ಮಾಡಿ ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಮಕ್ಕಳನ್ನು ಸೇರಿಸಿದ್ದ ಪೋಷಕರು ತಮಗೆ ಆಡಳಿತ ಮಂಡಳಿ ಮೋಸ ಮಾಡಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಇದು ಸಿಬಿಎಸ್‌ಇ ಮಾನ್ಯತೆ ಪಡೆದಿರುವ ಸ್ಕೂಲ್ ಎಂದು ಆಡಳಿತ ಮಂಡಳಿ ಹೇಳಿತ್ತು. ಇದೇ ನಂಬಿಕೆಯಲ್ಲಿ ತಾವು ಲಕ್ಷ ಲಕ್ಷ ರೂ. ಶುಲ್ಕ ಕಟ್ಟಿದ್ದಾಗಿ ಹೇಳಿಕೊಂಡ ಪೋಷಕರು ಈಗ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿದ್ದಾರೆ.
ಸಿಬಿಎಸ್‌ಇ ಮಾನ್ಯತೆ ಪಡೆಯದಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಶುಲ್ಕ ಯಾಕೆ ವಸೂಲಿ ಮಾಡಬೇಕಾಗಿತ್ತು ಎಂದು ಅವರು ಪ್ರಶ್ನಿಸಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗೊತ್ತಾಗಿದ್ದು ಹೇಗೆ?
ಕಳೆದ ಹಲವಾರು ವರ್ಷಗಳಿಂದ ಈ ಶಾಲೆ ನಡೆಯುತ್ತಿದೆ. ಈಗ ಎಂಟನೇ ತರಗತಿ ಪಬ್ಲಿಕ್ ಪರೀಕ್ಷೆ ಎದುರಾದಾಗ ಇದು ಸಿಬಿಎಸ್‌ಇ ಶಿಕ್ಷಣ ಮಾಧ್ಯಮದ ಶಾಲೆ ಅಲ್ಲ ಎನ್ನುವುದು ಬಯಲಾಗಿದೆ. ನಿಜವೆಂದರೆ, ಈ ಶಾಲೆ ಸಿಬಿಎಸ್‌ಇ ಮಾನ್ಯತೆಗೆ ಅರ್ಜಿ ಸಲ್ಲಿಸಿದ್ದೇ ಕಳೆದ ೨೦೨೨ರ ಸೆಪ್ಟೆಂಬರ್ ೧೯ರಂದು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಿ ಅವಕಾಶ ಕೋರಿದೆ. ಹಾಗಿದ್ದರೆ ಇಷ್ಟರವರೆಗೆ ಮಾಡಿದ್ದೇನು ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ತಾವು ಕಳೆದ ಇಷ್ಟೂ ವರ್ಷಗಳಿಂದ ವರ್ಷಕ್ಕೆ ಲಕ್ಷ ಲಕ್ಷ ರೂ. ಫೀಸು ಕಟ್ಟುತ್ತಿದ್ದೇವೆ. ಮೋಸ ಮಾಡಿರುವ ಸಂಸ್ಥೆ ತಮ್ಮ ಹಣವನ್ನು ವಾಪಾಸ್ ಕೊಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: KR Market Flyover : ಕೆ.ಆರ್. ಮಾರ್ಕೆಟ್ ಬಳಿ ದುಡ್ಡಿನ ಮಳೆಗರೆದ ಅರುಣ್ ಯಾರು?; ಇಲ್ಲಿದೆ ಅವನ ಫುಲ್ ಡಿಟೇಲ್ಸ್!