ಬೆಂಗಳೂರು: ಪೀಣ್ಯ ಮೇಲ್ಸೇತುವೆ ಮೇಲೆ ಮಲ್ಟಿಆಕ್ಸಲ್ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ 20 ದಿನಗಳೊಳಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
7 ತಿಂಗಳ ಹಿಂದೆ 102, 103 ಪಿಲ್ಲರ್‌ಗಳ ನಡುವಿನ ಕೇಬಲ್ ಬಾಗಿದ್ದರಿಂದ ಬ್ರಿಡ್ಜ್ ಮೇಲೆ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿತ್ತು. ತಜ್ಞರು ಪರಿಶೀಲನೆ ನಡೆಸಿದ ಕೆಲ ದಿನಗಳ ಬಳಿಕ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಉನ್ನತ ಅಧಿಕಾರಿಗಳ ತಂಡ, ಮತ್ತೊಮ್ಮೆ ಮೇಲ್ಸೇತುವೆಯನ್ನು ಪರಿಶೀಲಿಸಿ, ಸಾಧಕ-ಬಾಧಕಗಳನ್ನು ಚರ್ಚಿಸಿ ವರದಿಯನ್ನು ನೀಡಲು ತ್ರಿಸದಸ್ಯ ಸಮಿತಿಯನ್ನು ನೇಮಿಸಿದೆ.
ಇದನ್ನೂ ಓದಿ | ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ: ಶಾಲಾ ಬಸ್ ಗುದ್ದಿ ಬಾಲಕಿ ದುರ್ಮರಣ
ಎನ್ಎಚ್ಎಐ ನೇಮಿಸಿರುವ ತ್ರಿಸದಸ್ಯ ಸಮಿತಿಯಲ್ಲಿ ಎನ್ಐಎಸ್ಸಿಯ ತಜ್ಞ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಮಹೇಶ್ ಟೆಂಡನ್, ದೆಹಲಿ ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿವೃತ್ತ ಎಂಜಿನಿಯರ್ ಡಾ. ಶರ್ಮಾ ಇದ್ದು, ಜೂನ್ ಮೊದಲ ವಾರದಲ್ಲಿ ಸಭೆ ನಡೆಸಿ ಶಿಫಾರಸುಗಳುಳ್ಳ ವರದಿಯನ್ನು ಸಲ್ಲಿಸುವುವಂತೆ ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 15ರ ಬಳಿಕ ತ್ರಿಸದಸ್ಯ ವರದಿ ಸಲ್ಲಿಕೆ ನಂತರ ಬಸ್,ಲಾರಿಗಳ ಓಡಾಟಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಭಾರಿ ಮಲ್ಟಿ ಆಕ್ಸಲ್ ಸಂಚಾರ ನಿರ್ಬಂಧ ಮುಂದುವರಿಯಲಿದೆ. ಏಕೆಂದರೆ ಮೇಲ್ಸೇತುವೆ ಸಾಮಾರ್ಥ್ಯದ ಬಗ್ಗೆ ವಿಸ್ತೃತ ಪರಿಶೀಲನೆಗೆ 6 ರಿಂದ 9 ತಿಂಗಳು ಬೇಕಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು ರಸ್ತೆಯಲ್ಲಿ 4.5 ಕಿ.ಮೀ ಉದ್ದದ ಮೇಲ್ಸೇತುವೆಯನ್ನು 775.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪಿಲ್ಲರ್‌ಗಳ ನಡುವೆ ಕೇಬಲ್ ಬಾಗಿದ್ದರಿಂದ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಬೃಹತ್ ವಾಹನಗಳಿಗೆ ನಿಷೇಧ ಹೇರಲಾಗಿತ್ತು. ಉದ್ಘಾಟನೆಗೊಂಡ 12 ವರ್ಷಗಳಲ್ಲೇ ಮೇಲ್ಸೇತುವೆ ಶಿಥಿಲಗೊಂಡಿದ್ದರಿಂದ ಇತರ ಮೇಲ್ಸೇತುವೆಗಳ ಗುಣಮಟ್ಟ ಮತ್ತು ಕ್ಷಮತೆ ಬಗ್ಗೆ ಅನುಮಾನಗಳು ಮೂಡಿದ್ದವು. ಇದೀಗ ಪೀಣ್ಯ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರೆ ಬೃಹತ್ ವಾಹನಗಳನ್ನು ಗುರುತಿಸುವುದೇ ಸವಾಲಾಗಿದೆ.
ಇದನ್ನೂ ಓದಿ | Floating bridge: ಉದ್ಘಾಟನೆಗೊಂಡ ಮೂರನೇ ದಿನಕ್ಕೇ ಮುರಿದು ಬಿತ್ತು ಮಲ್ಪೆ ತೇಲು ಸೇತುವೆ