ಬೆಂಗಳೂರು: ಸ್ಪೇನ್(Spain)ಗೆ ಹೊರಡಲು ರೆಡಿಯಾಗಿದ್ದ ಐದು ವರ್ಷದ ಸಾಕು ಬೆಕ್ಕು (Pet Cat Missing) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಕಾಣೆಯಾಗಿರುವ ಘಟನೆ ನಡೆದಿದೆ. ಬೆಕ್ಕು ‘ಫ್ರೀಡಾ’ ಇನ್ನುಳಿದ ಎರಡು ಸಾಕು ನಾಯಿ ಜತೆಗೆ ವಿಮಾನದಲ್ಲಿ ಪ್ರಯಾಣಿಸಲಿದ್ದವು. ಆದರೆ, ಇನ್ನೇನು ಫ್ಲೈಟ್ ಹೊರಡಲು ರೆಡಿಯಾಗುತ್ತಿದ್ದಾಗ ಬೆಕ್ಕು ಕಾಣೆಯಾಗಿರುವುದು ತಿಳಿದು ಬಂದಿದೆ. ಈ ಬೆಕ್ಕು ಸ್ಪೇನ್ ಮೂಲಕ ಪೋರ್ಚುಗಲ್‌ನಲ್ಲಿರುವ ತನ್ನ ಮಾಲೀಕರಾದ ಪೌಲ್- ಹಾರ್ವರ್ಡ್ ಜೇಮ್ಸ್ ಸ್ಕಾಟ್ ದಂಪತಿ ಬಳಿಗೆ ಹೊರಟಿತ್ತು.
ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬೆಕ್ಕು ಫ್ರೀಡಾ ಮತ್ತು ಜೋಯಬೀ ಮತ್ತು ಸಿಂಬಾ ಎಂಬೆರಡು ನಾಯಿಗಳೊಂದಿಗೆ ಕತಾರ್ ಏರ್‌ವೇಯ್ಸ್ ಮೂಲಕ ದೋಹಾಕ್ಕೆ ತೆರಳಿ, ಅಲ್ಲಿಂದ ಮ್ಯಾಡ್ರಿಡ್‌ಗೆ ಹೋಗುವುದಿತ್ತು. ಅಲ್ಲಿಂದ ಬೆಕ್ಕಿನ ಮಾಲೀಕರು ಅದನ್ನು ಪೋರ್ಚುಗಲ್‌ಗೆ ತೆಗೆದುಕೊಂಡು ಹೋಗುವವರಿದ್ದರು. ಫ್ರೀಡಾ ಬೆಕ್ಕಿನ ಮಾಲೀಕರಾದ ಬ್ರಿಟಿಷ್ ದಂಪತಿ ಕಳೆದ 15 ವರ್ಷಗಳಿಂದ ಬೆಂಗಳೂರಲ್ಲಿ ವಾಸವಾಗಿದ್ದರು. ಈ ಬೆಕ್ಕು ಮರಿಯಾಗಿದ್ದಾಗ ಬಿಲ್ಡಿಂಗ್‌ನಿಂದ ಬಿದ್ದು ಗಾಯಗೊಂಡಿತ್ತು. ಆಗ ಈ ದಂಪತಿ ಅದನ್ನು ರಕ್ಷಿಸಿ ಸಾಕಿಕೊಂಡಿದ್ದರು. ಎರಡು ತಿಂಗಳ ಹಿಂದೆ ಈ ದಂಪತಿ ಪೋರ್ಚುಗಲ್‌ಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ್ದರು. ಹಾಗಾಗಿ, ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಸ್ಥಳೀಯ ಅಂಗಡಿ ಮಾಲೀಕ ಕೆಲ್ಲಿ ಜಾನ್ಸನ್ ಎಂಬಾಕೆ ಸುಪರ್ದಿಗೆ ಒಪ್ಪಿಸಿದ್ದರು.
ಈ ಕೆಲ್ಲಿ ಜಾನ್ಸನ್, ವಿಮಾನನಿಲ್ದಾಣದ ಸಿಬ್ಬಂದಿಗೆ ಬೆಕ್ಕು ಒಪ್ಪಿಸಿದ್ದರು. ಆದರೆ, ವಿಮಾನ ಏರುವ ಮುಂಚೆ ಬೆಕ್ಕು ಕಾಣೆಯಾಗಿರುವುದನ್ನು ಅವರು ಗಮನಿಸಿದ್ದಾರೆ. ಈ ಸುದ್ದಿ ಕೇಳಿ ಬೆಕ್ಕಿನ ಮಾಲೀಕರಾಗಿದ್ದ ಬ್ರಿಟಿಷ್ ದಂಪತಿಯು ತೀವ್ರ ದುಃಖದಲ್ಲಿದ್ದಾರೆ. ಬೆಂಗಳೂರಿಂದ ಬೆಕ್ಕನ್ನು ಮ್ಯಾಡ್ರಿಡ್‌ಗೆ ಕರೆ ತರುವಲ್ಲಿ ಅವರು 3.3 ಲಕ್ಷ ರೂ. ಹಣವನ್ನು ವಿಮಾನ ಸಂಸ್ಥೆಗೆ ಪಾವತಿಸಿದ್ದರು.
ಇದನ್ನೂ ಓದಿ | Bengaluru airport | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ 3 ಫುಲ್ ಬಾಡಿ ಸ್ಕ್ಯಾನರ್ ಅಳವಡಿಕೆ