Site icon Vistara News

Pet Planet | ಅನಾಥ ಪ್ರಾಣಿಗಳಿಗೆ ಆಶ್ರಯ ನೀಡುವ ಪಶುವೈದ್ಯ; ಆಕರ್ಷಿಸುತ್ತಿದೆ ಹಲವು ಜೀವ ವೈವಿಧ್ಯಗಳ ಪೆಟ್ ಪ್ಲ್ಯಾನೆಟ್

Pet Planet sirsi Veterinarian

ಭಾಸ್ಕರ್ ಆರ್. ಗೆಂಡ್ಲ ವಿಸ್ತಾರ‌ ನ್ಯೂಸ್. ಶಿರಸಿ
ನಿಧಾನವಾಗಿ ಹರಿದಾಡ್ತಿರೋ ಉಡಗಳು.. ಈಗಷ್ಟೇ ಪೊರೆ ಕಳಚಿದ ಉರಗ.. ಗಿಳಿಗಳ ಕೂಗು, ಹಸಿರು ಹುಲ್ಲು ತಿನ್ನುತ್ತಿರುವ ಮೊಲ, ಮುಂಗುಸಿ, ಕುದುರೆ ಇನ್ನೂ ಹತ್ತು ಹಲವು ಪ್ರಾಣಿ, ಪಕ್ಷಿಗಳ ಜೀವ ವೈವಿಧ್ಯ ನೋಡಲು ಸಿಗುವುದು ಯಾವುದೋ ಝೂನಲ್ಲಿ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದೊಂದು ಪೆಟ್ ಪ್ಲ್ಯಾನೆಟ್ (Pet Planet ). ಬೀದಿಯಲ್ಲಿ ಬಿದ್ದಿರೋ ಪ್ರಾಣಿಗಳನ್ನು ಈ ದಂಪತಿ ಸಂರಕ್ಷಿಸಿ ಕಾಪಾಡೋ ಈ ತಾಣ ಜನರ ಆಕರ್ಷಣೆಯ ಕೇಂದ್ರವಾಗಿದೆ.

ಇದು ಪ್ರಾಣಿ ಪ್ರಿಯ ಪಶು ವೈದ್ಯ ರಾಜೇಂದ್ರ ಶಿರಸಿಕರ್ ಹಾಗೂ ಅವರ ಪತ್ನಿ ಪೂಜಾ ನಡೆಸುತ್ತಿರುವ ಅಮೇಜಿಂಗ್ ಪೆಟ್ ಪ್ಲ್ಯಾನೆಟ್ ಕಥೆ. ಅಮೇಜಿಂಗ್ ಪೆಟ್ ಪ್ಲ್ಯಾನೆಟ್ ಹೆಸರಿಗೆ ತಕ್ಕಂತೆ ಇಲ್ಲಿರೋ ಪ್ರಾಣಿ, ಪಕ್ಷಿಗಳೆಲ್ಲ ನೋಡುಗರಿಗೆ ಪೆಟ್ ಎನಿಸೋದ್ರಲ್ಲಿ ಸಂಶಯವೇ ಇಲ್ಲ. ಬಹುತೇಕ ಪ್ರಾಣಿಗಳು ಹಾದಿಬೀದಿಲಿ ಗಾಯ ಮಾಡ್ಕೊಂಡಿದ್ದವು. ಇವನ್ನು ಚಿಕಿತ್ಸೆಗಾಗಿ ತಂದ ಮೇಲೆ ಈಗ ಅವೆಲ್ಲ ಈ ಪ್ಲ್ಯಾನೆಟ್ ಸದಸ್ಯರಾಗಿ ಬಿಟ್ಟಿವೆ. ಪಶುವೈದ್ಯ ರಾಜೇಂದ್ರ ಶಿರಸಿಕರ್​ ಅವರ 5 ವರ್ಷಗಳ ಪ್ರಯತ್ನದ ಫಲವಾಗಿ ಈ ಪ್ಲ್ಯಾನೆಟ್ ಹಲವು ಜೀವ ವೈವಿಧ್ಯತೆಗಳ ತಾಣವಾಗಿದೆ. ಈಗ ಅವರ ಪತ್ನಿ‌ ಪೂಜಾ ಕೂಡ ಇದರಲ್ಲಿ ತೊಡಗಿಕೊಂಡು ಆದರ್ಶ ದಂಪತಿಗಳಾಗಿದ್ದಾರೆ.

ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ನೂತನವಾಗಿ ಈ ಅಮೇಜಿಂಗ್ ಪೆಟ್ ಪ್ಲ್ಯಾನೆಟ್ ತಲೆ ಎತ್ತಿದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಅನಾಥ ಪ್ರಾಣಿಗಳು, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ರಾಣಿಗಳು ಈ ಪ್ಲ್ಯಾನೆಟ್ ಆಶ್ರಯ ಪಡೆದಿವೆ. ಯಾವುದೇ ಪ್ರಾಣಿ ಸಂಕಷ್ಟದಲ್ಲಿದೆ ಎನ್ನೋ ಸುದ್ದಿ ತಿಳಿದರೂ, ತಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಹಾಗೂ ಪತ್ನಿ ಪೂಜಾ ಅವುಗಳಿಗೊಂದು ನೆಲೆ ಒದಗಿಸುವ ಕೆಲಸ ಮಾಡುತ್ತಾರೆ. ತಮ್ಮ ಜಾಗವನ್ನೇ ಉದ್ಯಾನವನವನ್ನಾಗಿ ಪರಿವರ್ತಿಸಿದ್ದಾರೆ.

ಮೊದಲು ಹವ್ಯಾಸಕ್ಕೆ ಆರಂಭವಾದ ಕಾಯಕಕ್ಕೆ ಈಗ ಪದ್ಮ ಸೇವಾ ಟ್ರಸ್ಟ್ ಅಡಿಯಲ್ಲಿ ಪುನರ್ವಸತಿ ಕೇಂದ್ರದ ಸ್ವರೂಪ ನೀಡಿದ್ದಾರೆ. ಅಲ್ಲಿ ಕುದುರೆ, ಬೆಕ್ಕು, ಆಡು, ಗಿಳಿ, ಕೋಳಿ, ಮೊಲ ಸೇರಿದಂತೆ ಹಲವು ಜೀವಿಗಳು ಚಿಕಿತ್ಸೆ ಪಡೆಯುತ್ತಿವೆ. ಹಲವಾರು ಪ್ರಾಣಿ, ಪಕ್ಷಿಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿವೆ. ಹಲವು ಪ್ರಾಣಿ ಪಕ್ಷಿಗಳನ್ನು ಹೊರ ರಾಜ್ಯ, ವಿದೇಶಗಳಿಂದಲೂ ತಂದು ನೋಡುಗರ ವಿಶೇಷ ಸಂತಸಕ್ಕೆ ಕಾರಣರಾಗಿದ್ದಾರೆ ಈ ಪಶುವೈದ್ಯರ ಫ್ಯಾಮಿಲಿ. ಈ ಪ್ಲ್ಯಾನೆಟ್‌ನಲ್ಲಿ ಆಫ್ರಿಕಾದ ಹೆಬ್ಬಾವು, ವಿವಿಧ ಜಾತಿಯ ಹಾವು, ವಿವಿಧ ಗಿಳಿಗಳು, ಬಾತುಕೋಳಿ, ವಿದೇಶದ ಕೋಳಿಗಳು, ನವಿಲು, ಯುರೋಪಿನ ಮುಂಗುಸಿ, ಮೊಲ, ಉಡ, ಸೈಬೀರಿಯಾದ ಮುಂಗುಸಿ ಮೊದಲಾದ 50ಕ್ಕೂ ಹೆಚ್ಚು ಬಗೆಯ ಪ್ರಾಣಿ, ಪಕ್ಷಿಗಳಿವೆ. ಇಲ್ಲಿರುವ ಎಲ್ಲವೂ ಸಾಕು ಪ್ರಾಣಿಗಳು. ಇವ್ಯಾವವೂ ಅರಣ್ಯ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ.

ಇದನ್ನೂ ಓದಿ | Indian Army | ಇದೇ ಮೊದಲನೇ ಬಾರಿಗೆ ಕರ್ನಲ್‌ ಆಗುತ್ತಿದ್ದಾರೆ 108 ಮಹಿಳಾ ಯೋಧರು!

ಒಂದು ದಶಕದಿಂದ ಅನಾಥ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 1600ಕ್ಕೂ ಹೆಚ್ಚು ಆಕಳು, ನಾಯಿ, ಕುದುರೆ, ಕಾಡುಬೆಕ್ಕು, ಪಾರಿವಾಳ, ಗೂಬೆ, ಎಲ್ಲವನ್ನೂ ಆರೈಕೆ ಮಾಡಿದ್ದಾರೆ. ನಿರ್ದಿಷ್ಟ ಜಾಗವಿಲ್ಲದ ಕಾರಣ ಗಾಯಗೊಂಡ ಪ್ರಾಣಿಗಳಿಗೆ ರಸ್ತೆಯ ಮೇಲೆಯೇ ಚಿಕಿತ್ಸೆ ನೀಡುತ್ತಿದ್ದರು. ಈ ಕೊರತೆ ನೀಗಿಸಲು, ಪ್ಲ್ಯಾನೆಟ್ ಪ್ರಾರಂಭಿಸಿದ್ದಾರೆ. ಚಿಕಿತ್ಸೆ ಪಡೆಯುವ ಪ್ರಾಣಿಗಳು ಗುಣಮುಖವಾದ ಮೇಲೆ ಪುನಾ ಅವುಗಳನ್ನು ನಿಸರ್ಗದ ಮಡಿಲಿಗೆ ಸೇರಿಸಲಾಗುತ್ತದೆ. ಪ್ರಾಣಿಗಳ ಸೇವೆ ನೆರವು ನೀಡುವವರು ಕಡಿಮೆ. ಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟ. ಹೀಗಾಗಿ, ಉದ್ಯಾನದ ಇಂತಿಷ್ಟು‌ ಅಂತ ದರ ನಿಗದಿಪಡಿಸಿದ್ದು, ಈ ಹಣವನ್ನು ಪ್ರಾಣಿಗಳ ಚಿಕಿತ್ಸೆಗೆ ಬಳಸುತ್ತಿದ್ದಾರೆ.

ಇದನ್ನೂ ಓದಿ | ಮಾಜಿ ಸಚಿವ ವಿಶ್ವನಾಥ್‌ ಕಾಂಗ್ರೆಸ್‌ ಸೇರುವುದು ಖಚಿತ: ತಾಂತ್ರಿಕವಾಗಷ್ಟೇ ಬಿಜೆಪಿಯಲ್ಲಿ ಉಳಿದ ʼಹಳ್ಳಿ ಹಕ್ಕಿʼ

ಇಲ್ಲಿ ಮಕ್ಕಳು, ದೊಡ್ಡವರನ್ನು ಸೆಳೆಯುವ ಅನೇಕ ಪ್ರಾಣಿಗಳಿವೆ. ಇವುಗಳ ಜೀವನ ಕ್ರಮ, ಆಹಾರ, ಮೊಟ್ಟೆಯಿಡುವ, ಮರಿ ಮಾಡುವ ವಿಧಾನ, ಪಕ್ಷಿ ಸಂಕುಲ ರಕ್ಷಣೆ ಎಲ್ಲವನ್ನೂ ಇಲ್ಲಿಗೆ ಭೇಟಿ ನೀಡುವವರಿಗೆ ವಿವರಿಸಲಾಗುತ್ತದೆ. ಇನ್ನು ಅಷ್ಟೇ ಅಲ್ಲ ಶಾಲಾ ಮಕ್ಕಳಿಗೂ ಪ್ರಾಣಿಗಳ ವಿಶೇಷತೆಯನ್ನ ಪರಿಚಯ‌ ಮಾಡ್ತಾರೆ. ಅತಿ ಸಮೀಪದಿಂದ ಪ್ರಾಣಿಗಳನ್ನು ನೋಡಿದ ಖುಷಿಯೂ ಅವರಿಗೆ ಸಿಗುತ್ತದೆ ಎಂದು ವೀಕ್ಷಣಗೆ ಬಂದವರು ಹೇಳ್ತಾರೆ.

ಒಟ್ಟಾರೆ ಪ್ರಾಣಿ ಪ್ರಿಯ ದಂಪತಿ ಹವ್ಯಾಸದಿಂದ ಆರಂಭವಾದ ಪ್ರಾಣಿ ಸಂರಕ್ಷಣಾ ಕಾಯಕ ಪೆಟ್ ಅಮೇಜಿಂಗ್ ಪ್ಲ್ಯಾನೆಟ್ ಆಗಿ ಬದಲಾಗಿದೆ. ಪ್ರಾಣಿ ಪ್ರಿಯರ ಪಾಲಿನ ಝೂ ಆಗಿಯೂ ಮುದ ನೀಡುತ್ತಿದೆ. ಇದರ ರೂವಾರಿಯಾದ ಈ ದಂಪತಿ ಪ್ರಯತ್ನ ಇತರರಿಗೂ ಮಾದರಿಯಾಗಿದೆ.

ಇದನ್ನೂ ಓದಿ | Karnataka Election | ಬಿಜೆಪಿಯಲ್ಲಿ ಸೈಡ್‌ಲೈನ್‌ ಆದ ಸಚಿವ ಶ್ರೀರಾಮುಲು, ಮೋದಿ ಕಾರ್ಯಕ್ರಮಕ್ಕೂ ಆಹ್ವಾನವಿಲ್ಲ!

Exit mobile version