Site icon Vistara News

Petrol Price | ವೈದ್ಯರ ಲೆಟರ್‌ ಟ್ರೀಟ್ಮೆಂಟ್‌ಗೆ ಕೇಂದ್ರ ಸ್ಪಂದನೆ; ಶಿರಸಿ ಪೆಟ್ರೋಲ್‌ ದರದಲ್ಲಿ ಭಾರಿ ಇಳಿಕೆ!

ಶಿರಸಿ: ಚಿಕ್ಕ ಚಿಕ್ಕ ಬದಲಾವಣೆಗಳು ದೊಡ್ಡ ದೊಡ್ಡ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂಬುದಕ್ಕೆ ಈ ಸಂಗತಿಯೇ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ರಾಜ್ಯದಲ್ಲಿಯೇ ಅತಿ ಹೆಚ್ಚು ಪೆಟ್ರೋಲ್‌ ದರವನ್ನು ಹೊಂದಿದೆ. ಆದರೆ, ಇದನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಸಕಾರಣ ಸಹಿತ ವೈದ್ಯರೊಬ್ಬರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈಗ ಪೆಟ್ರೋಲ್‌, ಡೀಸೆಲ್‌ (Petrol Price) ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲು ಕಾರಣರಾಗಿದ್ದಾರೆ.

ಶಿರಸಿಯ ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿಕಿರಣ ಪಟವರ್ಧನ ಅವರ ಸಮಾಜಮುಖಿ ಚಿಂತನೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಪೆಟ್ರೋಲ್‌ ದರ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಈ ಮೂಲಕ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 1.1೮ ರೂಪಾಯಿ ಮತ್ತು ಡೀಸೆಲ್ ದರ 1.01 ರೂಪಾಯಿ ಕಡಿಮೆಯಾಗಿದೆ.

ಡಾ.ರವಿಕಿರಣ ಪಟವರ್ಧನ

ಸದಾ ಜನಪರ, ಸಮಾಜಮುಖಿ ಚಿಂತನೆಗಳಿಂದ ಗುರುತಿಸಿಕೊಂಡಿರುವ ಡಾ.ರವಿಕಿರಣ ಪಟವರ್ಧನ ಅವರು, ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶಿರಸಿಯಲ್ಲಿನ ಅತಿ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು. ಜತೆಗೆ ದರವನ್ನು ಕಡಿಮೆ ಮಾಡಲು ಇರುವ ಮಾರ್ಗದ ಮಾಹಿತಿಯನ್ನೂ ನೀಡಿದ್ದರು. ಆ ಕುರಿತಾಗಿ ಸದರಿ ವಿಷಯವನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂಬ ಉತ್ತರ ಹಣಕಾಸು ಸಚಿವಾಲಯದಿಂದ ಬಂದಿತ್ತು.

ಇದನ್ನೂ ಓದಿ | Rain tourism | ಮಹಾರಾಷ್ಟ್ರದ ಈ ಕೋಟೆಗಳನ್ನು ನೀವು ಮಳೆಗಾಲದಲ್ಲೇ ನೋಡಬೇಕು!

ಪ್ರಸ್ತುತ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗೆ ಡಾ. ಪಟವರ್ಧನ್ ಬರೆದ ಪತ್ರದ ಸಾರಾಂಶವನ್ನು ಉಲ್ಲೇಖಿಸಲಾಗಿದೆ. ಅವರು ಉಲ್ಲೇಖಿಸಿದಂತೆ ಮಂಗಳೂರಿನಿಂದ ಶಿರಸಿಗೆ ಸರಬರಾಜು ಮಾಡಲಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಸಾರಿಗೆ ವೆಚ್ಚ ಕಡಿಮೆಯಾಗುವುದರಿಂದ ಶಿರಸಿಯಲ್ಲಿ ಅಂದಾಜು ಪೆಟ್ರೋಲ್ ಪ್ರತಿ ಲೀಟರ್‌ಗೆ 1.1೮ ರೂ. ಮತ್ತು ಡೀಸೆಲ್ 1.01 ರೂ.ಗಳಷ್ಟು ಕಡಿಮೆಯಾಗಿದೆ.

ಶಿರಸಿಗೆ 260 ಕಿ.ಮೀ ದೂರದ ಮಂಗಳೂರಿನಿಂದ ಪೆಟ್ರೋಲ್‌, ಡೀಸೆಲ್‌ ಸರಬರಾಜು ಆಗುತ್ತಿದೆ. ಆದರೆ, ಅದರ ಬದಲಾಗಿ 103 ಕಿ.ಮೀ. ದೂರದಲ್ಲಿರುವ ಹುಬ್ಬಳ್ಳಿಯಿಂದ ಇಂಧನ ಪೂರೈಸಿದರೆ ಸಾರಿಗೆ ವೆಚ್ಚ ಕಡಿಮೆಯಾಗಲಿದೆ ಎಂದು ಡಾ. ಪಟವರ್ಧನ್, ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಸಲಹೆ ನೀಡಿದ್ದರು. ಅದರಂತೆ ಇಂಡಿಯನ್‌ ಆಯಿಲ್‌ ಕಂಪನಿಯಿಂದ ಪ್ರತ್ಯುತ್ತರ ಬಂದಿದ್ದು, ಮಂಗಳೂರಿನಿಂದ ಇಂಧನ ಪೂರೈಕೆ ಬದಲಾಗಿ ಹುಬ್ಬಳ್ಳಿಯಿಂದ ಶಿರಸಿಗೆ ಇಂಧನ ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದೆ ಶಿರಸಿಯಲ್ಲಿ ಪೆಟ್ರೋಲ್‌ 104.೧೯ ರೂಪಾಯಿ ಮತ್ತು ಡೀಸೆಲ್‌ ೮೯.೮೧ ರೂಪಾಯಿ ಇತ್ತು, ಆಗಸ್ಟ್‌ 26ರಿಂದ ಪೆಟ್ರೋಲ್‌ ದರ ೧.೧೮ ರೂಪಾಯಿ ಕಡಿಮೆಯಾಗಿ ಪ್ರಸ್ತುತ ೧೦೩.೦೧ ರೂಪಾಯಿ ಇದೆ. ಡೀಸೆಲ್‌ ದರ ೧.01 ರೂಪಾಯಿ ಕಡಿಮೆಯಾಗಿ ಪ್ರಸ್ತುತ ೮೮.೮೦ ರೂಪಾಯಿ ಆಗಿದೆ. ಮಂಗಳೂರಿಗೆ ಬದಲಾಗಿ ಹುಬ್ಬಳ್ಳಿ ವಲಯದಿಂದ ದರ ನಿಗದಿ ಆಗಲಿರುವುದರಿಂದ ಹಿನ್ನೆಲೆಯಲ್ಲಿ ಚಿಲ್ಲರೆ ಮಾರಾಟ ದರ ಕಡಿಮೆಯಾಗಿದೆ ಎಂದು ಪೆಟ್ರೋಲ್‌ ಡೀಲರ್ಸ್‌ ಅಸೋಸಿಯೇಷನ್‌ ಮುಖಂಡ ಅಶ್ವತ್ಥ್‌ ಹೆಗಡೆ ತಿಳಿಸಿದ್ದಾರೆ.

ಜನಪರ ಕಾಳಜಿಯ ಡಾಕ್ಟರ್
ಡಾಕ್ಟರ್ ರವಿಕಿರಣ ಪಟವರ್ಧನ್ ಅವರು ತಮ್ಮ ಜನಪರ, ಸಮಾಜಮುಖಿ ಕಾರ್ಯಗಳಿಂದ ನಾಡಿನ ಜನರ ಮನಗೆದ್ದಿದ್ದಾರೆ. ಸರ್ಕಾರದ ಯೋಜನೆಗಳ ಮಾಹಿತಿ, ಸರ್ಕಾರದಿಂದ ಜನರಿಗೆ ಲಭ್ಯವಿರುವ ಇನ್ಶ್ಯುರೆನ್ಸ್ ಮಾಹಿತಿ, ರಕ್ತದಾನಿಗಳ ಮಾಹಿತಿ ಸೇರಿದಂತೆ ಸಾಕಷ್ಟು ಜನಪರ ಕಾರ್ಯವನ್ನು ಮಾಡುತ್ತಿದ್ದು, ಗೋಕರ್ಣದ ಕೋಟಿತೀರ್ಥದ ಶುದ್ಧೀಕರಣಕ್ಕೆ ಸಂಬಂಧಿಸಿ ಸಹ ಕೇಂದ್ರ ಸರ್ಕಾರಕ್ಕೆ ಪತ್ರ‌ ಮುಖೇನ ಆಗ್ರಹಿಸಿ, ಉತ್ತರವನ್ನು ಪಡೆದಿದ್ದರು. ಈಗ ಎಲ್ಲರ ಸಹಕಾರದಿಂದ ಕೋಟಿತೀರ್ಥ ಸಹ ಶುದ್ಧವಾಗಿದೆ. ಜನರ ಆರೋಗ್ಯದ ಜತೆಗೆ ಸಮಾಜದ ಆರೋಗ್ಯದ ಬಗ್ಗೆಯೂ ಕಾಳಜಿ ಮಾಡುವ ಈ ವೈದ್ಯರ ಕಾರ್ಯಕ್ಕೆ ಸಾರ್ವಜನಿಕವಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | Ghulam Nabi Azad‌ | ಅಪ್ರಬುದ್ಧತೆಯಿಂದ ಸಿಡುಕಿನವರೆಗೆ… ರಾಹುಲ್‌ ಗಾಂಧಿ ವಿರುದ್ಧ ಗುಲಾಂ ನಬಿ ಮಾಡಿದ 10 ಟೀಕೆಗಳು!

Exit mobile version