Site icon Vistara News

PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

PGCET 2024

ಬೆಂಗಳೂರು: 2024 -25 ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (PGCET 2024)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ. ಈ ಹಿಂದೆ ಜುಲೈ 13 ರಂದು ಎಂಇ, ಎಂ ಟೆಕ್, ಎಂ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಹಾಗೂ ಜುಲೈ 14ರಂದು ಎಂಸಿಎ ಮತ್ತು ಎಂಬಿಎ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನಿಗದಿಯಾಗಿತ್ತು. ಆದರೆ, ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಜುಲೈ 5 ಮತ್ತು 10ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪಿಜಿಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದ್ದು, ಶೀಘ್ರವೇ ಪರೀಕ್ಷೆಯ ಹೊಸ ದಿನಾಂಕ ಪ್ರಕಟಿಸಲಾಗುವುದು. ಪರೀಕ್ಷೆಗಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದ್ದು, ಜುಲೈ 7ರವರೆಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಜುಲೈ 9ರ ಸಂಜೆ 6 ಗಂಟೆಯೊಳಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ https://kea.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಯುಜಿಸಿಇಟಿಗೆ ಜೂನ್ 29ರವರೆಗೆ ಆಫ್‌ಲೈನ್ ವೆರಿಫಿಕೇಶನ್‌; ಈ ಅಭ್ಯರ್ಥಿಗಳು ಮಾತ್ರ ಹಾಜರಾಗಬೇಕಿಲ್ಲ!

ಬೆಂಗಳೂರು: ಯುಜಿಸಿಇಟಿ-2024ರ (UGCET 2024) ಆನ್‌ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ. ಎನ್, ಜೆಡ್- ಈ ಕ್ಲಾಸ್‌ಗಳನ್ನು ಕ್ಲೇಮ್‌ ಮಾಡಿರುವ ಹಾಗೂ ರ‍್ಯಾಂಕ್‌ ಪಡೆದಿರುವ ಅಭ್ಯರ್ಥಿಗಳಿಗೆ ಆಫ್ ಲೈನ್ ದಾಖಲಾತಿ ಪರಿಶೀಲನೆಯು ಜೂನ್ 25ರಿಂದ 29 ರವರೆಗೆ ಬೆಂಗಳೂರಿನ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ. ಈ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ದಾಖಲಾತಿ ಪರಿಶೀಲನೆಗೆ ಸಂಬಂಧಿಸಿದ ಅಭ್ಯರ್ಥಿಗಳಿಗೆ ಖುದ್ದು ಹಾಜರಾಗಲು ಸೂಚಿಸಿದ್ದಾರೆ. ಇನ್ನೂ “ವೈ” ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಎಂದೂ ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, [ಬಿ.ಎಸ್ಸಿ (ಆನರ್ಸ್) ಕೃಷಿ, ಬಿ.ಎಸ್ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದವು], ಬಿ.ಎಸ್ಸಿ (ನರ್ಸಿಂಗ್), ಬಿ.ಫಾರ್ಮಾ, 2ನೇ ವರ್ಷದ ಬಿ-ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ
ಇದು ಅನ್ವಯವಾಗುತ್ತದೆ.

ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್‌ ಆಧರಿಸಿ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತಾ ಕಂಡಿಕೆಗೆ ಅನುಸಾರವಾಗಿ ಅವಶ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು.

ಇದನ್ನೂ ಓದಿ: PGCET 2024 : ಪಿಜಿಸಿಇಟಿ ಅಪ್‌ಡೇಟ್ಸ್‌ ; ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ.24 ಕೊನೆ ದಿನ

ಅರ್ಹತಾ ಕಂಡಿಕೆ “ಎ”, “ಇ”, “ಎಫ್”, “ಜಿ”, “ಹೆಚ್”, “ಓ” ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಯುಜಿಸಿಇಟಿ-2024ರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಈ ಬಗ್ಗೆ ವಿವರ ಮಾಹಿತಿ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಸೂಚನೆಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version