ಬೆಂಗಳೂರು: ವಚನ ಪಿತಾಮಹರೆಂದೇ ಖ್ಯಾತರಾದ ರಾವ್ ಬಹದ್ದೂರ್ ಫ.ಗು. ಹಳಕಟ್ಟಿ (Pha.gu. Halakatti) ಅವರ ಸ್ಮರಣಾರ್ಥ ನೀಡಲಾಗುವ ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿಯ (National award) ಪ್ರದಾನ ಸಮಾರಂಭ ಅವರ ಜನ್ಮ ದಿನವಾದ ಜುಲೈ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (Bangalore Townhall) ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಡಾ. ಫ.ಗು. ಹಳಕಟ್ಟಿ ಫೌಂಡೇಷನ್‌ನ (Pha.gu. Halakatti Foundation) ಸಲಹಾ ಟ್ರಸ್ಟಿ ಆಗಿರುವ ನಾಡೋಜ ಡಾ. ಮನು ಬಳಿಗಾರ್ ಮತ್ತು ಕಾರ್ಯ ನಿರ್ವಾಹಕ ಟ್ರಸ್ಟಿ ಆಗಿರುವ ಪವಿತ್ರಾ ಹಳಕಟ್ಟಿ ತಿಳಿಸಿದ್ದಾರೆ.
ಸಾಹಿತ್ಯ, ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಮೂವರಿಗೆ ಈ ಬಾರಿಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ (Pro. SG Siddaramaiah), ಶಿಕ್ಷಣ ಕ್ಷೇತ್ರದಲ್ಲಿ ಡಾ. ವಿ.ಪಿ. ನಿರಂಜನಾರಾಧ್ಯ (Dr. VP Niranjanaradhya), ಸಮಾಜ ಸೇವಾ ಕ್ಷೇತ್ರದಲ್ಲಿ ಎಸ್.ಜಿ. ಸುಶೀಲಮ್ಮ (SG Susheelamma) ಅವರು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬೇಲಿ ಮಠದ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿಗಳು ಉಪಸ್ಥಿತರಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಬಳಿಕ ಪ್ರಶಸ್ತಿ ಪ್ರದಾನ ಮಾಡುವರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಫ.ಗು. ಹಳಕಟ್ಟಿ ಫೌಂಡೇಷನ್‌ನ ಟ್ರಸ್ಟಿ ಶೀಲಾ ಹಳಕಟ್ಟಿ ಅವರು ಉಪಸ್ಥಿತರಿರುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ, ನಾಡೋಜ ಡಾ. ಮನು ಬಳಿಗಾರ್ ಅವರು ಆಶಯ ಭಾಷಣ ಮಾಡಲಿದ್ದಾರೆ.
ಪ್ರಶಸ್ತಿ ಸ್ಥಾಪನೆಯ ಉದ್ದೇಶ
ಫ.ಗು. ಹಳಕಟ್ಟಿ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಹಕಾರ, ಕೃಷಿ, ಸಣ್ಣ ಕೈಗಾರಿಕೆ, ವಾಣಿಜ್ಯ, ಪತ್ರಿಕಾ ರಂಗ ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದವರು. ಮೇಲಾಗಿ ಅವರು ಕರ್ನಾಟಕ ಏಕೀಕರಣದ ಪ್ರಮುಖ ರೂವಾರಿಗಳು.
ಶತಮಾನಗಳ ಕಾಲ ಕಾಲ ಗರ್ಭದಲ್ಲಿ ಹೂತು ಹೋಗಿದ್ದ ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಪಾದಿಸಿ, ಪರಿಷ್ಕರಿಸಿ, ಪ್ರಕಟಿಸಿ, ಲೋಕವೇ ಬೆರಗುಗೊಳ್ಳುವಂತೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಅವರು. ಇವರ ಸ್ಮರಣೆಗಾಗಿ ಅವರ ಮಕ್ಕಳಾದ ಶೀಲಾ ಮತ್ತು ಪವಿತ್ರ ಹಳಕಟ್ಟಿ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಫೌಂಡೇಷನ್ ಸ್ಥಾಪಿಸಿ ಸೇವಾ ಕೆಲಸಗಳನ್ನು ಮಾಡುತ್ತಿದ್ದಾರೆ.
ಈಗಾಗಲೇ ಬಡವಿದ್ಯಾರ್ಥಿಗಳಿಗೆ, ಕುಶಲ ಕರ್ಮಿಗಳಿಗೆ, ನೇಕಾರ ಮಹಿಳೆಯರನ್ನು ಗುರುತಿಸಿ ಧನಸಹಾಯ, ಆಶ್ರಯ ನೀಡಲಾಗಿದೆ. ಪ್ರತಿ ವರ್ಷವೂ ಫ.ಗು. ಹಳಕಟ್ಟಿ ಅವರ ಹೆಸರಿನಲ್ಲಿ ಸಾಹಿತ್ಯ, ಶಿಕ್ಷಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ನಾಡಿನ ಹಿರಿಯ ಚೇತನಗಳಿಗೆ ವಚನ ಪಿತಾಮಹ ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯ ಮೊತ್ತ 1 ಲಕ್ಷ ರೂ. ಆಗಿರುತ್ತದೆ.
ಇದನ್ನೂ ಓದಿ: Datti Awards: ಕನ್ನಡ ಸಾಹಿತ್ಯ ಪರಿಷತ್ತಿನ ʻಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿʼ ಪ್ರಶಸ್ತಿ ಪ್ರಕಟ