ಚಾಮರಾಜನಗರ: ರಾಜ್ಯದಲ್ಲಿ ಬಿಜೆಪಿ ಅಲ್ಲಲ್ಲಿ ಹಾಕಿರುವ ಬಿಜೆಪಿಯೇ ಭರವಸೆ ಎಂಬ ಪೋಸ್ಟರ್‌ಗಳ ಮೇಲೆ ೪೦% ಕಮಿಷನ್ ಎಂದು ಷರಾ ಬರೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಈಗ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರ ಚಿತ್ರಕ್ಕೆ ಸೆಗಣಿಯನ್ನೂ ಹಾಕಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಾಸಕರಾಗಿರುವ ಎನ್ ಮಹೇಶ್ (MLA N Mahesh) ಭಾವಚಿತ್ರಕ್ಕೆ ಸೆಗಣಿ ಹಚ್ಚಿರುವ ಚಿತ್ರಗಳು ವೈರಲ್ ಆಗಿದೆ. ಜತೆಗೆ ಪೋಸ್ಟರ್‌ಗೆ ಚಪ್ಪಲಿ ಏಟೂ ನೀಡಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಹಾಕಿದ್ದ ʻಮತ್ತೊಮ್ಮೆ ಬಿಜೆಪಿʼ ಎಂಬ ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ ಎನ್ ಮಹೇಶ್ ಭಾವಚಿತ್ರ ದ ಮೇಲೆ 40% ಎಂದು ಬರೆದಿರುವುದು ಪತ್ತೆಯಾಗಿದೆ.
ಲಿಂಗಣಾಪುರದ ರಸ್ತೆ ಬದಿಯಲ್ಲಿ ಹಾಕಿರುವ ಪೋಸ್ಟರ್‌ನಲ್ಲಿ ಎನ್ ಮಹೇಶ್ ಭಾವಚಿತ್ರದ ಮೇಲೆ 40% ಎಂದು ಬರೆದು ಅವಹೇಳನ ಮಾಡಲಾಗಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ʻಪೇ ಸಿಎಂʼ ಮಾದರಿಯಲ್ಲಿ ʻಪೇ ಎಂಎಲ್‌ಎʼ ಎಂಬ ಪ್ರಚಾರವನ್ನೂ ನಡೆಸುತ್ತಿದ್ದಾರೆ. ಇದು ಕೂಡಾ ಬಿಜೆಪಿಯಲ್ಲಿ ಭಾರಿ ಆಕ್ರೋಶವನ್ನು ಮೂಡಿಸಿದೆ. ನಿಮ್ಮ ಪ್ರಚಾರವನ್ನು ನೀವು ಮಾಡಿ ನಮ್ಮ ಪ್ರಚಾರ ಸಾಮಗ್ರಿಗಳ ಮೇಲೆ ನಿಮ್ಮ ಆಟಾಟೋಪ ತೋರಿಸಬೇಡಿ ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಶುರುವಾಯ್ತು ಪೇಎಂಎಲ್ಎ, ಪೇ ಎಕ್ಸ್ ಎಂಎಲ್ಎ ಅಭಿಯಾನ