Site icon Vistara News

Karnataka Election : ಯಡಿಯೂರಪ್ಪ ಮಾರ್ಗದರ್ಶನದಲ್ಲೇ ಚುನಾವಣೆ; ಪಿಯೂಷ್‌ ಗೋಯೆಲ್‌ ಘೋಷಣೆ

Piyush goel

#image_title

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಪರಮೋಚ್ಚ ನಾಯಕರಲ್ಲಿ ಒಬ್ಬರು. ರಾಜ್ಯದಲ್ಲಿ ಈ ಬಾರಿ ಅವರ ಮಾರ್ಗದರ್ಶನದಲ್ಲೇ ಪಕ್ಷ ಚುನಾವಣೆಯನ್ನು (Karnataka Election) ಎದುರಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.

ಅತ್ಯಂತ ಹಿರಿಯ ನಾಯಕರಾಗಿದ್ದು ಬಿಜೆಪಿಯ ಎಲ್ಲ ನಿರ್ಧಾರಗಳಲ್ಲೂ ಅವರು ಪ್ರಮುಖರಾಗಿರುತ್ತಾರೆ. ಅವರನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಯಡಿಯೂರಪ್ಪ ಅವರು ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿ ಸದಸ್ಯರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಪಿಯೂಷ್ ಗೋಯಲ್ ತಿಳಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಜನರು ಮೋದಿಜಿ ಮತ್ತು ಬಿಜೆಪಿ ಜೊತೆಗಿದ್ದಾರೆ. ರಾಜ್ಯದ ಜನರು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನಿಶ್ಚಿತ ಎಂದರು.

ಕಾಂಗ್ರೆಸ್ ಪಕ್ಷವು ಸುಳ್ಳು ಆಶ್ವಾಸನೆಗಳನ್ನಷ್ಟೇ ನೀಡುತ್ತದೆ. ಅದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಗುಜರಾತ್ ರಾಜ್ಯದಲ್ಲೂ ಇದು ಫಲಿತಾಂಶದ ವೇಳೆ ವ್ಯಕ್ತವಾಗಿದೆ. ಗರಿಷ್ಠ ಬಹುಮತದೊಂದಿಗೆ ನಾವು ಗೆದ್ದಿದ್ದೇವೆ. ಕರ್ನಾಟಕದಲ್ಲೂ ಪ್ರಧಾನಿ ಮೋದಿಜಿ ಮತ್ತು ಅವರ ತಂಡವನ್ನು ಬಿಜೆಪಿ ರೂಪದಲ್ಲಿ ಜನರು ಬಯಸುತ್ತಾರೆ ಎಂದು ತಿಳಿಸಿದರು.

ಅಮೃತ ಕಾಲದ ಮಹತ್ವಪೂರ್ಣ ಬಜೆಟ್‌

ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ನೋಡಲು ಪೂರಕ ಕೇಂದ್ರ ಬಜೆಟ್ ಮಂಡಿಸಲಾಗಿದೆ. ತಂತ್ರ್ಯೋತ್ತರ ಅಮೃತ ಕಾಲಘಟ್ಟಕ್ಕೆ ನಾವು ಕಾಲಿಟ್ಟಿದ್ದೇವೆ. ವಿಶ್ವದ ಪ್ರಮುಖ ಹಣಕಾಸು ವ್ಯವಸ್ಥೆ ಹೊಂದಿದ 3 ದೇಶಗಳಲ್ಲಿ ಒಂದಾಗಿ ಭಾರತವು ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಚಿವ ಪಿಯೂಷ್ ಗೋಯಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಐಟಿ ಕ್ಷೇತ್ರದ ಕೊಡುಗೆ ಶ್ಲಾಘನೀಯ ಎಂದ ಅವರು, ಉತ್ತಮ ಗುಣಮಟ್ಟದ ಜೀವನ ನಿರೀಕ್ಷೆಯು ಮುಂದೆ ಈಡೇರಲಿದೆ ಎಂದರು. ವೈಯಕ್ತಿಕ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಿದ್ದು ಮಧ್ಯಮ ವರ್ಗಕ್ಕೆ ಮಹತ್ವದ ಕೊಡುಗೆ ಎಂದು ಮೆಚ್ಚುಗೆ ಸೂಚಿಸಿದರು. ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆಗೆ ಕರ್ನಾಟಕದ ಕೊಡುಗೆ ದೊಡ್ಡದು. ರೈಲ್ವೆ ಮೂಲಕ ಕರ್ನಾಟಕಕ್ಕೆ 7,561 ಕೋಟಿ ಅನುದಾನ ಸಿಗುತ್ತಿದೆ. ಬೆಂಗಳೂರು ಸಬರ್ಬನ್ ರೈಲು ವ್ಯವಸ್ಥೆಗೆ ಹೆಚ್ಚಿನ ಹಣ ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಸಿಗಲಿದ್ದು, ನೆನೆಗುದಿಗೆ ಬಿದ್ದಿದ್ದ ಯೋಜನೆ ಜಾರಿಗೆ ನೆರವಾಗಲಿದೆ ಎಂದು ವಿವರಿಸಿದರು.

ಮೈಸೂರಿನಿಂದ ಬೆಂಗಳೂರಿಗೆ ೯೦ ನಿಮಿಷ
ಮೈಸೂರು- ಬೆಂಗಳೂರು ಹೈಸ್ಪೀಡ್ ಹೈವೇ ಮೂಲಕ ಒಂದೂವರೆ ಗಂಟೆಗೂ ಕಡಿಮೆ ಅವಧಿಯಲ್ಲಿ ತಲುಪುವ ಅವಕಾಶವಾಗಲಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಕೈಗಾರಿಕೀಕರಣಕ್ಕೆ ನೆರವಾಗಲಿದ್ದು, ಐಟಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚು ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ವೃದ್ಧಿಯಿಂದ ಹೆಚ್ಚು ಉದ್ಯೋಗ ಲಭಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನ ಸಿಗುತ್ತದೆ. ವ್ಯವಹಾರ ಸರಳೀಕರಣ, ಡಿಜಿಲಾಕರ್, ಇಲೆಕ್ಟ್ರಾನಿಕ್ ಫೋಕಸ್ ಮೂಲಕ ಕ್ರಾಂತಿಕಾರಿ ಪ್ರಗತಿ ಖಚಿತ. ಇದು ಯುವಶಕ್ತಿಗೆ ಪ್ರೋತ್ಸಾಹಕ ಎಂದರು.

ವಿಶ್ವದ 10ನೇ ದೊಡ್ಡ ಆರ್ಥಿಕ ಶಕ್ತಿಯಿಂದ ಈಗಾಗಲೇ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತವು ಹೊರಹೊಮ್ಮಿದೆ. ಅದು ಕೆಲವೇ ವರ್ಷಗಳಲ್ಲಿ 3ನೇ ಬೃಹತ್ ಆರ್ಥಿಕ ಶಕ್ತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : BJP Karnataka: ಈ ಸಾರಿ ಜೆಡಿಎಸ್ ಜತೆ ಬಿಲ್ಕುಲ್ ಒಳ ಒಪ್ಪಂದ ಇಲ್ಲ; ಪಕ್ಕಾ ಫೈಟ್: ಬಿಜೆಪಿ ಪಾಳೆಯದಲ್ಲಿ ಖಡಕ್ ಮಾತು

Exit mobile version