ಹಾವೇರಿ: ರಾಜ್ಯ ಸರ್ಕಾರ 4000 ಅಂಗನವಾಡಿ(Anganwadi)ಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದ್ದು, ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಥಳ ಲಭ್ಯವಿರುವ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಇನ್ನು ಆರು ತಿಂಗಳಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗುರುವಾರ ವೇದಾಂತ ಸಂಸ್ಥೆಯ ವತಿಯಿಂದ ಸವಣೂರಿನ ಹಾವಣಗಿ ಪ್ಲಾಟ್ ಬಳಿ ಆಯೋಜಿಸಿರುವ ಅಂಗನವಾಡಿ ನೂತನ ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಗಣಿ ಮತ್ತು ಕಲ್ಲಿದ್ದಲು , ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರ ಮುತುವರ್ಜಿಯಿಂದ ಈ ಕ್ಷೇತ್ರದಲ್ಲಿ 50 ಕ್ಕಿಂತ ಹೆಚ್ಚು ಅಂಗನವಾಡಿಗಳನ್ನು ನಿರ್ಮಿಸುತ್ತಿದ್ದಾರೆ. ಶಿಗ್ಗಾಂವ್, ಸವಣೂರು, ಬಂಕಾಪುರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಬೇಕೆಂದು ಕೇಂದ್ರ ಸಚಿವರನ್ನು ಕೋರಲಾಗಿದೆ. ಬಡವರಿರುವ ಈ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 20 ಕೋಟಿ ರೂ.ಗಳನ್ನು ಈಗಾಗಲೇ ನೀಡಲಾಗಿದ್ದು, ಮೂಲಸೌಕರ್ಯಗಳ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ವಿದ್ಯಾಭಾರತಿ ಸಂಸ್ಥೆಗೆ 1.50 ಕೋಟಿ ರೂ.
ಸವಣೂರಿನ ವಿದ್ಯಾಭಾರತಿ ಸಂಸ್ಥೆಗೆ 1.50 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಲಯನ್ಸ್ ಕ್ಲಬ್, ಸವಣೂರು ಆಯೋಜಸಿದ್ದ ವಿದ್ಯಾಭಾರತಿ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮತನಾಡುತ್ತಿದ್ದರು.
ಈ ಸಂಸ್ಥೆಗೆ ಹಣ ಒದಗಿಸುವ ಮೂಲಕ ಸವಣೂರಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡಿಸಲು ಈ ತೀರ್ಮಾನವನ್ನು ಮಾಡಲಾಗಿದೆ ಎಂದರು. ಸವಣೂರಿನ ಸಮಗ್ರ ಅಭಿವೃದ್ಧಿಯ ಕಲ್ಪನೆಯಿಂದ ಈ ಕೆಲಸ ಮಾಡಲಾಗುತ್ತಿದೆ. ಸವಣೂರಿಗೆ ಹೊಸ ಆಯುರ್ವೇದ ಕಾಲೇಜು ಮಂಜೂರು ಮಾಡಲಾಗಿದ್ದು, 2-3 ವಾರಗಳಲ್ಲಿ ಅಡಿಗಲ್ಲನ್ನು ಹಾಕಲಾಗುವುದು ಎಂದರು.
ಶಿಗ್ಗಾಂವಿ ಮತ್ತು ಸವಣೂರು ಅಭಿವೃದ್ಧಿ
ಸವಣೂರುನಲ್ಲಿ ಐಟಿಐಯನ್ನು ಆಧುನಿಕ ಐಟಿಐಯನ್ನಾಗಿ ಮೇಲ್ದರ್ಜೆಗೇರಿಸಲು 30 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಅಭಿವೃದ್ಧಿ ನಿರಂತರವಾದ ಪ್ರಕ್ರಿಯೆ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ದುಡಿಯುವ ಗುರುತರವಾದ ಜವಾಬ್ದಾರಿ ನನ್ನದು. ಶಿಗ್ಗಾಂವಿ ಮತ್ತು ಸವಣೂರು ತಾಲ್ಲೂಕಿನ ಕೆರೆಕಟ್ಟೆ, ರಸ್ತೆ, ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಹಿರಿಯ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳನ್ನು ಹಾಗೂ 8000 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪಾಲಿಟೆಕ್ನಿಕ್, ಐಟಿಐ, ಜಿಟಿಟಿಸಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ವಿದ್ಯಾಭಾರತಿ ಸಂಸ್ಥೆಯ ಅಧ್ಯಕ್ಷ ಮೋಹನ್ ಮೆಣಸಿನಕಾಯಿ, ಸಚಿವ ಶಿವರಾಮ್ ಹೆಬ್ಬಾರ್, ಲಯನ್ಸ್ ಸಂಸ್ಥೆಯ ರಾಜ್ಯಪಾಲೆ ಸುಗುಣಾ ಯಲಮಳ್ಳಿ ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರುಣ್ ಕುಮಾರ್, ಬೆಳ್ಲಾರಿ, ಪ್ರದೀಪ್ ಕುಮಾರ್, ಮಹಂತೇಶ್ ಕೌಜಲಗಿಮಠ, ಸಂಸ್ಥೆಯ ಕಾರ್ಯದರ್ಶಿ ಗುಂಜಾಳ್, ಸಿಂಧೂರ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | ಕಲ್ಯಾಣ ಕರ್ನಾಟಕದಲ್ಲಿ 2100 ಶಾಲಾ ಕೊಠಡಿ, 2500 ಅಂಗನವಾಡಿ ಕೇಂದ್ರ ಆರಂಭ: ಸಿಎಂ ಬೊಮ್ಮಾಯಿ