ಬೆಂಗಳೂರು: ಬಸವನಗುಡಿ ಕ್ಷೇತ್ರದ ಶ್ರೀನಗರ ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ಮದ್ದೂರಮ್ಮ ಗ್ರೌಂಡ್ ಅಥವಾ ವಿಜಯ ಗ್ರೌಂಡ್ ಎಂದು ಕರೆಯಲ್ಪಡುವ ಆಟದ ಮೈದಾನವನ್ನು ಸ್ಥಳೀಯರ ಆಶಯಕ್ಕೆ ವಿರುದ್ಧವಾಗಿ ಶಾಲೆ ಅಥವಾ ಕಾಲೇಜು ಕಟ್ಟಡದ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಹಿಂದೆ ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಬೇಕೆಂದು ತೀರ್ಮಾನ ಕೈಗೊಂಡಿದ್ದರು. ಆದರೆ ಈಗ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಇದ್ಯಾವುದನ್ನೂ ಲೆಕ್ಕಿಸದೇ, ಸ್ಥಳೀಯ ಸಾರ್ವಜನಿಕರ ಆಶಯಗಳನ್ನು ಗಣನೆಗೆ ತೆಗೆದುಕೊಳ್ಳದೆ, ಅಲ್ಲಿಯ ಅಗತ್ಯತೆಗಳನ್ನು ಕಡೆಗಣಿಸಿ ಏಕಾಏಕಿ ಈ ತೀರ್ಮಾನಕ್ಕೆ ಬಂದಿರುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೈದಾನವು ಮುಂಚೆ ಪ್ರಳಯಕಾಲ ರುದ್ರಭೂಮಿಯವರಿಗೆ ಸೇರಿತ್ತು. ಆ ಕುರಿತು ನಾರಾಯಣಪ್ಪ ಮತ್ತು ಮುಜರಾಯಿ ಇಲಾಖೆ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದರ ನಡುವೆ ಬಿಬಿಎಂಪಿ 1991ರಲ್ಲಿ ಇದನ್ನು ವಶಕ್ಕೆ ಪಡೆಯಿತು. ಅಂದು ಅದಕ್ಕೊಂದು ಮೊತ್ತವನ್ನು ನಿಗದಿ ಮಾಡಿ ಸರ್ಕಾರಿ ಖಜಾನೆಯಲ್ಲಿ ಇರಿಸಲಾಗಿತ್ತು. ಮುಂದೆ ನ್ಯಾಯಾಲಯದ ತೀರ್ಮಾನ ಬಂದ ಮೇಲೆ ತೀರ್ಪಿನ ಅನುಸಾರ ಆ ಹಣ ಅವರಿಗೆ ಸಿಗುತ್ತದೆ. ಹೀಗೆ ಅದು ಬಿಬಿಎಂಪಿ ಸುಪರ್ದಿಯಲ್ಲಿ ಇರುವುದರಿಂದ ಅದು ಹಾಗೆಯೇ ಆಟದ ಮೈದಾನವಾಗಿಯೇ ಇರಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪುಟ್ಟಣ್ಣ ಕಣಗಾಲ್: ಡಾ. ಮಹೇಶ ಜೋಶಿ ಬಣ್ಣನೆ
ಈಗಾಗಲೇ ಈ ಮೈದಾನದಲ್ಲಿ ಉಚಿತ ಕ್ರಿಕೆಟ್ ತರಬೇತಿ ಹಾಗೂ ಕ್ರೀಡೆಗಳ ಅಭ್ಯಾಸ ನಡೆಯುತ್ತಿದೆ. ಅಲ್ಲದೇ ಅಲ್ಲಿನ ಸ್ಥಳೀಯರಿಗೆ ಸುತ್ತಮುತ್ತಲೂ ಬೇರೆ ಯಾವ ಮೈದಾನವೂ ಇಲ್ಲದಿರುವುದರಿಂದ ಅಲ್ಲಿನ ಕ್ರೀಡಾಪಟುಗಳು, ಸ್ಥಳೀಯರು ಇದೇ ಆಟದ ಮೈದಾನವನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚೆಗೆ ಸಾರ್ವಜನಿಕರಿಂದ ಈ ಮೈದಾನವನ್ನು ದೂರ ಮಾಡಬೇಕು ಎಂಬ ಉದ್ದೇಶದಿಂದಲೋ ಎಂಬಂತೆ ಅಲ್ಲಿ ಯಾವುದೇ ನಿರ್ವಹಣೆಗಳು ಆಗುತ್ತಿಲ್ಲ, ಅಲ್ಲಲ್ಲಿ ಕಸದ ರಾಶಿಗಳು, ಅನುಪಯುಕ್ತ ವಸ್ತುಗಳನ್ನು ತುಂಬಲಾಗಿದೆ. ಹೀಗೆ ಮಾಡಿ ಸಾರ್ವಜನಿಕರು ಈ ಮೈದಾನ ಬಳಸಲಾಗದೆ ತಾವಾಗಿಯೇ ಬಿಟ್ಟು ಹೋಗಲಿ ಎಂಬ ದುರುದ್ದೇಶ ಹೊಂದಿದಂತೆ ಕಾಣುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕರಾಗಲೀ, ಸಂಸದರಾಗಲೀ ಅಲ್ಲಿ ಏನೇ ಮಾಡುವ ಮೊದಲು, ಸ್ಥಳೀಯರ ಅವಶ್ಯಕತೆ ಏನು? ಅವರ ಆಶಯಗಳು ಏನು? ಎಂಬುದರ ಕುರಿತು ಸಾರ್ವಜನಿಕರ ಬಳಿ ಚರ್ಚಿಸಬೇಕಿತ್ತು. ಶಾಲೆ ಅಥವಾ ಕಾಲೇಜು ಕಟ್ಟಲು ನಮ್ಮ ಅಭ್ಯಂತರವಿಲ್ಲ. ಆ ಕೆಲಸಕ್ಕೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ. ಆದರೆ ಹೊಸದಾಗಿ ಶಾಲೆಯನ್ನು ನಿರ್ಮಾಣ ಮಾಡುವ ಮೊದಲು ಬಸವನಗುಡಿ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಶಾಲೆಗಳ ಗುಣಮಟ್ಟವನ್ನು ಸುಧಾರಿಸಬೇಕಾಗಿದೆ. ಶಾಲೆಗಳಿಗೆ ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಗಮನಿಸಬೇಕು ಮತ್ತು ಶಾಲೆಯನ್ನು ಮಕ್ಕಳು ಬಿಟ್ಟು ಬೇರೆಡೆಗೆ ಹೋಗದಂತೆ ತಡೆಯಬೇಕು. ಹೀಗೆ ಈಗಾಗಲೇ ಇರುವ ಶಾಲೆಗಳನ್ನು ಸರಿಪಡಿಸಬೇಕು. ಅದಲ್ಲದೆ ಹೊಸದಾಗಿ ಶಾಲೆಯನ್ನು ನಿರ್ಮಾಣ ಮಾಡಲೇಬೇಕೆಂದರೆ ಅದಕ್ಕಾಗಿ ಜಾಗವನ್ನು ಖರೀದಿಸಿ ಶಾಲೆಯನ್ನು ನಿರ್ಮಾಣ ಮಾಡಬಹುದು. ಆದರೆ, ನಗರದ ಮಧ್ಯ ಭಾಗದಲ್ಲಿ ಆಟದ ಮೈದಾನವನ್ನು ನಿರ್ಮಿಸುವುದು ತುಂಬಾ ಕಷ್ಟ. ಆದ್ದರಿಂದ ಇರುವ ಈ ಆಟದ ಮೈದಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. 40 ಪರ್ಸೆಂಟ್ ಆಸೆಗಾಗಿ ಎಲ್ಲಾದರೂ ಒಂದು ಕಡೆ ಕಾಮಗಾರಿ ಪ್ರಾರಂಭಿಸಲೇಬೇಕು ಎಂಬ ದುರುದ್ದೇಶ ಸಲ್ಲದು ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.
ಮೈದಾನ ಉಳಿಸಿಕೊಳ್ಳಲು ಹೋರಾಟಕ್ಕೂ ಸಿದ್ಧ
ಈ ಬಗ್ಗೆ ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಪ್ರತಿಕ್ರಿಯಿಸಿ, ಬಸವನಗುಡಿಯಲ್ಲಿ ಒಂದೊಂದೇ ಆಟದ ಮೈದಾನಗಳು ಮಾಯವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿವೆ. ಇದು ಹೀಗೆಯೇ ಮುಂದುವರಿಯಲು ನಾವು ಬಿಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾದರೆ ಅವರಿಗೆ ಸಿಗಬೇಕಾದ ಸೌಕರ್ಯ ಸಿಗದೇ ಹೋದಲ್ಲಿ ಅವರ ಜತೆ ನಿಲ್ಲಲು ನಾವು ಸದಾ ಸಿದ್ಧ. ಈ ಕುರಿತು ಶಾಸಕರು, ಸಂಸದರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಎಲ್ಲಿ ಹೋಯ್ತು ಚಿರತೆ? -ಅರಣ್ಯ ಇಲಾಖೆಯ ಮೂರು ತಂಡಗಳಿಂದ ಮುಂದುವರಿದ ಶೋಧ