ಬೆಂಗಳೂರು: 63ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai Birthday)ಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯೆಲ್ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಶುಭಕೋರಿದ್ದಾರೆ (Happy Birthday Basavaraj Bommai).
ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರು ಇನ್ನಷ್ಟು ದೀರ್ಘಾವಧಿಗೆ ಜನಸೇವೆ ಮಾಡಲಿ ಮತ್ತು ಆರೋಗ್ಯಕರ ಜೀವನ ಅವರದ್ದಾಗಲಿ’ ಎಂದು ಆಶಿಸಿದರು.
ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರಿದ ಗೃಹ ಸಚಿವ ಅಮಿತ್ ಶಾ ಅವರು ‘ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಶುಭಾಶಯಗಳು. ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ನಿಮ್ಮ ಪರಿಶ್ರಮ ಹೀಗೆಯೇ ಮುಂದುವರಿಯಲಿ. ಸುದೀರ್ಘ ಮತ್ತು ಆರೋಗ್ಯಪೂರ್ಣ ಜೀವನ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಟ್ವೀಟ್ ಮೂಲಕ ಬಸವರಾಜ ಬೊಮ್ಮಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ‘ಕರ್ನಾಟಕದ ಡೈನಾಮಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ಕರ್ನಾಟಕವನ್ನು ಇನ್ನಷ್ಟು ಅಭಿವೃದ್ಧಿ ಮತ್ತು ಸಮೃದ್ಧಿಯತ್ತ ಕೊಂಡೊಯ್ಯಲಿ. ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ’ ಎಂದು ಯೋಗಿ ಆದಿತ್ಯನಾಥ್ ಹಾರೈಸಿದ್ದಾರೆ.
ಕೇಂದ್ರ ಸಚಿವ ಪಿಯುಷ್ ಗೋಯೆಲ್ ಟ್ವೀಟ್ ಮಾಡಿ ‘ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ವಿಧೇಯತೆ ಮತ್ತು ತಳಮಟ್ಟದವರನ್ನೂ ಸಂಪರ್ಕಿಸುವ ರೀತಿ ಪ್ರತಿಯೊಬ್ಬರಿಗೂ ಮಾದರಿ-ಸ್ಫೂರ್ತಿ. ನೀವು ಇನ್ನಷ್ಟು ಕಾಲ ಕರ್ನಾಟಕದ ಜನರಿಗೆ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದ್ದಾರೆ.
ಹಾಗೇ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ಆತ್ಮೀಯರಾದ ಬಸವರಾಜ ಬೊಮ್ಮಾಯಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ‘ಜನಪ್ರಿಯ ಮುಖ್ಯಮಂತ್ರಿ, ಆತ್ಮೀಯರೂ ಆಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ. ಹಾಗೇ, ತಾವು ಸಿಎಂ ಬಸವರಾಜ ಬೊಮ್ಮಾಯಿಗೆ ಹೂಗುಚ್ಛ ಕೊಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಧನ್ಯವಾದ ಸಲ್ಲಿಸಿದ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ವೀಟ್ ಮೂಲಕವೇ ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಟ್ವೀಟ್ಗಳನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ.
‘ನನ್ನ ಜನ್ಮದಿನಕ್ಕಾಗಿ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು. ಕರ್ನಾಟಕದ ಅಭಿವೃದ್ಧಿಗಾಗಿ ನಾನು ಕೆಲಸ ಮಾಡಲು ನೀವೇ ನನಗೆ ಸ್ಫೂರ್ತಿ. ಬಡವರು, ದೀನ-ದಲಿತರು, ಮಹಿಳೆಯರು ಮತ್ತು ಯುವಕರ ಉನ್ನತಿಗಾಗಿ ನೀವು ನಡೆಸುತ್ತಿರುವ ಹೋರಾಟ ನನಗೆ ಸದಾ ಮಾದರಿ’ ಎಂದು ಸಿಎಂ ಬೊಮ್ಮಾಯಿ ಅವರು ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಾಗೇ, ಗೃಹ ಸಚಿವ ಅಮಿತ್ ಶಾ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡ ಅವರು, ‘ನನ್ನ ಜನ್ಮದಿನಕ್ಕೆ ಶುಭಕೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅನಂತ ಧನ್ಯವಾದಗಳು, ನಮ್ಮ ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಲಹೆ ಹಾಗೂ ಸಹಕಾರ ಸದಾ ಹೀಗೇ ಇರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರ ಪಿಯುಷ್ ಗೋಯೆಲ್ ಬರ್ತ್ ಡೇ ವಿಶ್ಗೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿ, ‘ನಿಮ್ಮ ಮಾತುಗಳು ನನ್ನ ಹೃದಯವನ್ನು ಸ್ಪರ್ಶಿಸಿದವು. ಜನಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರೇಪಿಸಿದವು’ ಎಂದು ಟ್ವೀಟ್ ಮಾಡಿದ್ದಾರೆ.