ಶಿವಮೊಗ್ಗ: ವರ್ಷದಿಂದ ವರ್ಷಕ್ಕೆ ಉತ್ತುಂಗಕ್ಕೆ ಏರುತ್ತಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟ (ಶಿಮುಲ್) ಮತ್ತೊಂದು ಅಭೂತಪೂರ್ವ ಯೋಜನೆ ಮಾಡಿದೆ. ಶಿವಮೊಗ್ಗದ ಮುಖ್ಯ ಡೇರಿಯಲ್ಲಿ ಮೂಲಭೂತ ಸೌಕರ್ಯದ ಅಭಿವೃದ್ಧಿಯಡಿಯಲ್ಲಿ ಸುಸಜ್ಜಿತ 2 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಮತ್ತು ಮೊಸರು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕವನ್ನು 45 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದು, ಫೆ. 27ರಂದು ಶಿವಮೊಗ್ಗಕ್ಕೆ ಆಗಮಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘಟಕವನ್ನು ಉದ್ಘಾಟಿಸಲಿದ್ದಾರೆ.
ಶಿಮುಲ್, ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆ 1959ರ ಅಡಿ ನೋಂದಣಿಯಾಗಿದ್ದು, ಒಕ್ಕೂಟವು ಅಮುಲ್ ಮಾದರಿಯ ಸಹಕಾರ ಸಂಘಗಳನ್ನು ಸ್ಥಾಪಿಸುವುದರೊಂದಿಗೆ 3 ಜಿಲ್ಲೆಗಳ ಹಾಲು ಉತ್ಪಾದಕ ರೈತರ ಸಾಮಾಜಿಕ ನ್ಯಾಯ, ಆರ್ಥಿಕವಾಗಿ ಸಬಲರನ್ನಾಗಿಸುವ ಸಲುವಾಗಿ 1988ರ ಮಾರ್ಚ್ 16ರಿಂದ ಹಾಲು ಶೇಖರಣೆಯನ್ನು ಪ್ರಾರಂಭಿಸಿತು.
ಪ್ರಸ್ತುತ ಒಕ್ಕೂಟವು ಶಿವಮೊಗ್ಗ ಡೇರಿಯಲ್ಲಿ ಪ್ರತಿ ದಿನ 2 ಲಕ್ಷ ಲೀಟರ್ ಪ್ಯಾಕಿಂಗ್ ಸಾಮರ್ಥ್ಯದ ಡೇರಿ, ದಾವಣಗೆರೆ ಡೇರಿಯಲ್ಲಿ ದಿನಪ್ರತಿ 80 ಸಾವಿರ ಲೀಟರ್ ಸಾಮರ್ಥ್ಯದ ಡೇರಿ ಹಾಗೂ 3 ಜಿಲ್ಲಾ ವ್ಯಾಪ್ತಿಯ ಆಯ್ದ ಮಿಲ್ಕ್ ಶೆಡ್ ಪ್ರದೇಶಗಳಲ್ಲಿ 6 ಶೀತಲೀಕರಣ ಕೇಂದ್ರಗಳನ್ನು ಸ್ಥಾಪಿಸಿದೆ. 3 ಜಿಲ್ಲೆಗಳ ವ್ಯಾಪ್ತಿಯಲ್ಲಿ 1225 ಹಾಲು ಉತ್ಪಾದಕರ ಸಹಕಾರ ಸಂಘಗಳೊಂದಿಗೆ ಮತ್ತು 144 ಬಿ.ಎಂ.ಸಿ ಗಳಿಂದ ಪ್ರತಿ ದಿನ ಸರಾಸರಿ 6.26 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದ್ದು, ಇದರಿಂದ ಸರಿಸುಮಾರು 1.50 ಲಕ್ಷ ರೈತ ಕುಂಟುಂಬಗಳು ಈ ಹೈನುಗಾರಿಕೆಯಿಂದ ಜೀವನೋಪಾಯವನ್ನು ಕಲ್ಪಿಸಿಕೊಂಡಿದ್ದಾರೆ.
ಇದನ್ನೂ ಓದಿ | Shivamogga Airport: ನಾಳೆ ಶಿವಮೊಗ್ಗದಲ್ಲಿ ರಾಜ್ಯದ 2ನೇ ಅತಿದೊಡ್ಡ ಏರ್‌ಪೋರ್ಟ್ ಲೋಕಾರ್ಪಣೆ; ಮೋದಿ ಕಾರ್ಯಕ್ರಮದ ವಿವರ ಏನು?
ಒಕ್ಕೂಟದ ವ್ಯಾಪ್ತಿಯ 3 ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ದಿನ ಸರಾಸರಿ 3.25 ಲಕ್ಷ ಲೀಟರ್ ಹಾಲು ಮತ್ತು ಮೊಸರನ್ನು ಮಾರಾಟ ಮಾಡುತ್ತಿದ್ದು, ಉಳಿದ ಹೆಚ್ಚುವರಿ ಹಾಲನ್ನು ಕರ್ನಾಟಕ ಹಾಲು ಮಹಾಮಂಡಳಿಯ ವಿವಿಧ ಒಕ್ಕೂಟಗಳು, ಘಟಕ ಹಾಗೂ ಅಂತರ ರಾಜ್ಯ ಸಹಕಾರ ಹಾಲು ಮಹಾಮಂಡಳಗಳಿಗೆ ಪೂರೈಕೆ ಮಾಡುತ್ತಿದೆ. ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ ಹಾಲು ಖರೀದಿಗೆ ನ್ಯಾಯಸಮ್ಮತ ದರವನ್ನು ನೀಡುವುದರ ಜತೆಯಲ್ಲಿ ವಿವಿಧ ತಾಂತ್ರಿಕ ಸೌಲಭ್ಯಗಳಾದ ಪಶುವೈದ್ಯಕೀಯ ಶಿಬಿರ, ತುರ್ತು ಪಶುವೈದ್ಯಕೀಯ ಸೇವೆ, ಮೇವು ಮತ್ತು ಪಶು ಆಹಾರ ಸರಬರಾಜು, ಕೃತಕ ಗರ್ಭಧಾರಣೆ ಹಾಗೂ ಇತರೆ ತಾಂತ್ರಿಕ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸಕಾಲಕ್ಕೆ ಹಾಲು ಉತ್ಪಾದಕರಿಗೆ ಪೂರೈಕೆ ಮಾಡುತ್ತಿದೆ.
ಅದೇ ರೀತಿ ಒಕ್ಕೂಟದ ವ್ಯಾಪ್ತಿಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ‘ನಂದಿನಿ’ ಬ್ರ್ಯಾಂಡ್ʼ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಆಯ್ದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಂಚೈಸಿ ಪಾರ್ಲರ್‌ಗಳನ್ನು ಹಾಗೂ ಡೀಲರ್‌ಗಳನ್ನು ನೇಮಕ ಮಾಡಿ ಮಾರಾಟ ಮಾಡುತ್ತಿದೆ.
ನಂದಿನಿ ಸಿಹಿ ಉತ್ಸವ
ಗ್ರಾಹಕರನ್ನು ಆಕರ್ಷಿಸುವ ಮತ್ತು ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಸಲುವಾಗಿ ಪ್ರತಿವರ್ಷ ‘ನಂದಿನಿ ಸಿಹಿ ಉತ್ಸವ’ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡು ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ನಗರಪಟ್ಟಣ ಪ್ರದೇಶಗಳಲ್ಲದೆ, ಗ್ರಾಮೀಣ ಮಟ್ಟದಲ್ಲಿಯೂ ಕೂಡ ಡೇಕೌಂಟರ್ ವಾಹನಗಳ ಮೂಲಕ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಗುಣಮಟ್ಟದಲ್ಲಿ ಅಗ್ರಸ್ಥಾನ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಶಿವಮೊಗ್ಗ ಡೇರಿ ಮತ್ತು ದಾವಣಗೆರೆ ಡೇರಿ ಘಟಕಗಳು ISO ಮಾನ್ಯತೆ ಪಡೆದ ನೋಂದಾಯಿತ ಸಂಸ್ಥೆಗಳಾಗಿದ್ದು, ಇತ್ತೀಚೆಗೆ ಒಕ್ಕೂಟವು ಆಹಾರ ಸಂಸ್ಕರಣೆ, ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳಿಗೆ ನೀಡುವ ಅಂತಾರಾಷ್ಟ್ರೀಯ ದೃಢೀಕರಣ ಪತ್ರವಾಗಿರುವ FSSC:22000:V5.1 ದೃಢೀಕರಣ ಪತ್ರ ಪಡೆದುಕೊಂಡಿದ್ದು, ಹಾಲಿನ ಗುಣಮಟ್ಟದಲ್ಲಿ ರಾಜ್ಯದ 16 ಹಾಲು ಒಕ್ಕೂಟಗಳಲ್ಲೇ ಆಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಅಧ್ಯಕ್ಷ ಶ್ರೀಪಾದರಾವ್ ನಿಸರಾಣಿ ನೇತೃತ್ವದ ಒಕ್ಕೂಟವು 2021-22 ನೇ ಆರ್ಥಿಕ ಸಾಲಿನಲ್ಲಿ 2241.11 ಲಕ್ಷ ಕೆ.ಜಿ. ಹಾಲನ್ನು 3 ಜಿಲ್ಲಾ ವ್ಯಾಪ್ತಿಯ ಹಾಲು ಉತ್ಪಾದಕ ರೈತರಿಂದ ಖರೀದಿಸಿ ಒಟ್ಟಾರೆ ರೂ. 629.77 ಕೋಟಿ ರೂ.ಗಳನ್ನು ಸಂಘಗಳ ಮುಖಾಂತರ ನೇರವಾಗಿ ಹಾಲು ಉತ್ಪಾದಕರ ಖಾತೆಗಳಿಗೆ ಪಾವತಿಸಿದೆ.
ಇದನ್ನೂ ಓದಿ | PM Modi: ನಾಳೆ ರಾಜ್ಯಕ್ಕೆ ಮೋದಿ; ಎಲ್ಲೆಲ್ಲಿ, ಏನೇನು ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ “ಕ್ಷೀರ ಭಾಗ್ಯ” ಯೋಜನೆಯಡಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಉಚಿತವಾಗಿ ಕೆನೆಭರಿತ ಹಾಲನ್ನು ನೀಡುವ ಸಲುವಾಗಿ 2021-22 ನೇ ಆರ್ಥಿಕ ಸಾಲಿನಲ್ಲಿ 3063.74 ಸಾವಿರ ಕೆ.ಜಿ. ಕೆನೆಭರಿತ ಹಾಲಿನ ಪುಡಿಯನ್ನು ಒಕ್ಕೂಟದಿಂದ ಖರೀದಿಸಿ ಅದರ ಮೊತ್ತ ರೂ 85.05 ಕೋಟಿಗಳಷ್ಟು ಮೊತ್ತವನ್ನು ಒಕ್ಕೂಟಕ್ಕೆ ರಾಜ್ಯ ಸರ್ಕಾರವು ಪಾವತಿಸಿದೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟವು 2021-22 ನೇ ಆರ್ಥಿಕ ಸಾಲಿನಲ್ಲಿ ಸುಮಾರು 1000 ಕೋಟಿ ವಾರ್ಷಿಕ ವಹಿವಾಟು ನೆಡೆಸಿ 4.92 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದ್ದು, ಅಧ್ಯಕ್ಷ ಶ್ರೀಪಾದರಾವ್ ನಿಸರಾಣಿ, ಆಡಳಿತ ಮಂಡಳಿಯ ನಿರ್ದೇಶಕರ ಶ್ರಮ ಮತ್ತು ಒಕ್ಕೂಟದ ಅಧಿಕಾರಿಗಳ ವರ್ಗ ಸಹಕಾರವೇ ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಲ್ಲ.