ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನೋಟಿಸ್ ನೀಡಿದೆ.
ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಎನ್‌ಸಿಪಿಸಿಆರ್, ಒಂಬತ್ತು ಪ್ರಶ್ನೆ ಕೇಳಿ 7 ದಿನದಲ್ಲಿ ಉತ್ತರಿಸಲು ಎಸ್‌ಪಿಗೆ ನೋಟಿಸ್ ಜಾರಿ ಮಾಡಿದೆ.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಬಂಧನ ಭೀತಿ ಎದುರಿಸುತ್ತಿದ್ದು, ನಿರೀಕ್ಷಣಾ ಜಾಮೀನು ಕೋರಿ ಮುರುಘಾಶ್ರೀಗಳ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 1ರಂದು ನಡೆಯಲಿದೆ. ಗುರುವಾರ ತನಿಖಾಧಿಕಾರಿ ಸಿಆರ್‌ಪಿಸಿ 164 ಸೆಕ್ಷನ್ ಅಡಿ ಸಂತ್ರಸ್ತೆಯರ ಹೇಳಿಕೆ ದಾಖಲಿಸಿದ ಸೀಲ್ಡ್ ಕವರ್ ಅನ್ನು ನ್ಯಾಯಾಧೀಶರಿಗೆ ನೀಡಲಿದ್ದಾರೆ.
ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಗುರುವಾರ ಮುರುಘಾಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಂತ್ರಸ್ತ ಬಾಲಕಿಯರ ಮೆಡಿಕಲ್ ವರದಿ ಸಹ ತನಿಖಾಧಿಕಾರಿ ಕೈ ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುರುಘಾ ಮಠದ ಮುಖ್ಯ ದ್ವಾರದ ಗೇಟ್ ಬಂದ್ ಮಾಡಿ, ಪೊಲೀಸ್ ಕಣ್ಗಾವಲು ಇಡಲಾಗಿದೆ. ದ್ವಾರದ ಬಳಿ ವಜ್ರ ಪೊಲೀಸ್ ವಾಹನ ನಿಲ್ಲಿಸಿದ್ದು, ಮಠದ ಸುತ್ತ ಪೊಲೀಸ್ ಪಹರೆ ಇದೆ. ರಾತ್ರಿ ಮುರುಘಾ ಮಠಕ್ಕೆ ಎಎಸ್‌ಪಿ ಕುಮಾರಸ್ವಾಮಿ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮಠದ ಸಿಬ್ಬಂದಿ ಜತೆ ಶ್ರೀಗಳ ಸಮಾಲೋಚನೆ, ನಾಳೆ ಏನಾದೀತು?