ಬಾಗಲಕೋಟೆ: ವಿಷಕಾರಿ ಹಣ್ಣು (Poisonous Fruit) ಸೇವಿಸಿ ಐವರು ಮಕ್ಕಳು ಅಸ್ವಸ್ಥಗೊಂಡಿದ್ದು, ಜಮಖಂಡಿ ತಾಲ್ಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತೇರದಾಳ ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯದ 8ನೇ ತರಗತಿ ವಿದ್ಯಾರ್ಥಿಗಳು ಆಸ್ಪತ್ರೆ ಪಾಲಾಗಿದ್ದಾರೆ. ಆಕಾಶ ಮಾದರ, ಮಲ್ಲು ಮಾದರ, ಮಹಾಂತೇಶ ಮಾದರ, ಮುತ್ತು ಮಾದರ ಹಾಗೂ ಅಪ್ಪಾಜಿ ಮಾದರ ಅಸ್ವಸ್ಥಗೊಂಡವರು.
ಈ ಐವರು ಆಟಕ್ಕೆಂದು ಸಮೀಪದ ಹಳಿಂಗಳಿ ಬೆಟ್ಟಕ್ಕೆ ತೆರಳಿದ್ದಾರೆ. ಈ ವೇಳೆ ಗಿಡದಲ್ಲಿದ್ದ ಹಣ್ಣುಗಳನ್ನು ಕಂಡು ಬಾದಾಮಿ ಹಣ್ಣು ಇರಬಹುದೆಂದು ಸೇವಿಸಿದ್ದಾರೆ. ಆದರೆ ಆಟ ಮುಗಿಸಿ ವಾಪಸ್ ವಸತಿ ನಿಲಯಕ್ಕೆ ಬಂದಾಗ ಎಲ್ಲರಿಗೂ ಆರೋಗ್ಯದಲ್ಲಿ ವ್ಯತ್ಯಾಸಗೊಂಡಿದೆ.
ಅಸ್ವಸ್ಥಗೊಂಡು ಒದ್ದಾಡುತ್ತಿದ್ದ ಮಕ್ಕಳನ್ನು ಕೂಡಲೇ ರಬಕವಿ ಬನಹಟ್ಟಿ ಸಮುದಾಯ ಆಸ್ಪತ್ರೆಗೆ ಸೇರಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿ ತಾಲೂಕು ಆಸ್ಪತೆಗೆ ದಾಖಲು ಮಾಡಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ವಾರ್ಡನ್ ವಸಂತ ಹಿರೇಮಠ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Road Accident : ನಿಂತಿದ್ದ ಟ್ರಕ್‌ಗೆ ಕ್ಯಾಂಟರ್ ಡಿಕ್ಕಿ; ಒದ್ದಾಡಿ ಪ್ರಾಣ ಬಿಟ್ಟ ಚಾಲಕ!
ಪೊಲೀಸ್ ಇನ್‌ಫಾರ್ಮರ್ ಎಂದು ಪೊಲೀಸರಿಗೇ ವಂಚಿಸಿದ ಖತರ್ನಾಕ್
ಬೆಂಗಳೂರು: ತಾನು ಪೊಲೀಸ್ ಇನ್‌ಫಾರ್ಮಮರ್ ಎಂದು ಹೇಳಿಕೊಂಡು ಪೊಲೀಸರಿಗೇ ವಂಚಿಸಿ (Fraud Case) ಅವರ ದುಡ್ಡಿನಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಈ ಖತರ್ನಾಕ್ ಕಿಲಾಡಿಯ ಹೆಸರು ವಸೀಂ. ಕಳೆದ ನಾಲ್ಕು ವರ್ಷಗಳಿಂದ ಈತ ಹೀಗೆ ಪೊಲೀಸರಿಗೆ ವಂಚಿಸಿ ಪಬ್ ಬಾರ್‌ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ.
ಇಲ್ಲೊಂದು ದಂಧೆ ನಡೆಯುತ್ತಿದೆ, ನಾನು ಅಲ್ಲಿಗೆ ಹೋಗಿ ಲೊಕೇಷನ್ ಕಳಿಸುತ್ತೇನೆ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡುತ್ತೇನೆ ಎಂದೆಲ್ಲಾ ಪೊಲೀಸರೇ ನಂಬುವಂತೆ ರೈಲು ಬಿಡುತ್ತಿದ್ದ. ಪೊಲೀಸರು, ಈಗ್ಲೇ ಬರುತ್ತೇವೆ ಅಂದರೆ, ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಷನ್ ಕಳಿಸುತ್ತೇನೆ ಎನ್ನುತ್ತಿದ್ದ. ನಂತರ ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ, ಮನೆಯಲ್ಲಿ ಸಮಸ್ಯೆ ಎಂದೆಲ್ಲ ನಂಬಿಸಿ ಎರಡು ಮೂರು ಸಾವಿರ ಪೋನ್ ಪೇ ಮಾಡಲು ಹೇಳುತ್ತಿದ್ದ.
ಸರಿ ಎಂದು ಹಣ ಪೋನ್ ಪೇ ಮಾಡಿದರೆ, ಹಣ ಬಂದ ಕೆಲವೇ ಕ್ಷಣಗಳಲ್ಲಿ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ. ಹೀಗೆ ಹಲವು ಸಿಸಿಬಿ ಹಾಗು ಲಾ ಆಂಡ್ ಆರ್ಡರ್ ಪೊಲೀಸರಿಗೇ ಯಾಮಾರಿಸಿದ್ದ ವಸೀಂ. ಸದ್ಯ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಸರಿಯಾದ ವಿಚಾರಣೆಗೆ ಒಳಪಡಿಸಿದ್ದಾರೆ.
ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ದರೋಡೆಗೆ ಯತ್ನ
ಕೊಡಗು: ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದ ಸಮಯ ನೋಡಿಕೊಂಡು ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಘಟನೆ ಮಡಿಕೇರಿಯ ಕಾಲೇಜು ರಸ್ತೆಯ IDBI ಬ್ಯಾಂಕ್ ಎದುರು ನಡೆದಿದೆ.
ಮನೆಯಲ್ಲಿ ಮಹಿಳೆ ಒಬ್ಬರೇ ಇರುವಾಗ ಮನೆಗೆ ನುಗ್ಗಿದ ಖದೀಮ ಮಹಿಳೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾನೆ. ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ ಪ್ರಭಾಕರ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿ ಪ್ರಭಾಕರ್ ಪತ್ನಿ ಸಾಕಮ್ಮ ಒಬ್ಬರೇ ಇದ್ದಾಗ ಘಟನೆ ನಡೆದಿದೆ. ಮಹಿಳೆ ಮೇಲೆ ದರೋಡೆ ಕೋರ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ