Site icon Vistara News

Police Cheating: ರಿಕವರಿ ಹಣವೇ ಮಾಯ; ಇದು ಇನ್‌ಸ್ಪೆಕ್ಟರ್‌ ಕಳ್ಳನಾದ ಕಥೆ!

Police Cheating Inspector Shankar Nayak misappropriates recovery money

ಬೆಂಗಳೂರು: ಅಪರಾಧಿ ಕೃತ್ಯಗಳನ್ನು ಮಟ್ಟ ಹಾಕಿ, ಕಾನೂನನ್ನು ರಕ್ಷಣೆ ಮಾಡಬೇಕಾದ ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಕಳ್ಳಕಾಕರನ್ನು ಹಿಡಿದು ಜೈಲಿಗೆ ತಳ್ಳಬೇಕಾದವರೇ ಅಪರಾಧಿಗಳೊಂದಿಗೆ ಕೈ ಜೋಡಿಸಿ ಸಿಕ್ಕಿಬೀಳುತ್ತಿದ್ದಾರೆ. ಸದ್ಯ ಹಣದಾಸೆಗೆ ಬಿದ್ದ ಇನ್‌ಸ್ಪೆಕ್ಟರ್‌ ವಿರುದ್ಧ ಎಸಿಪಿ (ACP) ಯಿಂದಲೇ (Police Cheating) ದೂರು ದಾಖಲಾಗಿದೆ.

ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್‌.ಎಸ್. ರೆಡ್ಡಿ ಅವರು ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಏನಿದು ಪ್ರಕರಣ?

ಶಂಕರ್ ನಾಯ್ಕ್ 2022ರಲ್ಲಿ‌ ಬ್ಯಾಟರಾಯನಪುರದ ಇನ್​ಸ್ಪೆಕ್ಟರ್ ಆಗಿದ್ದರು. ಈ ವೇಳೆ ಹರೀಶ್ ಎಂಬುವವರ 75 ಲಕ್ಷ ರೂ. ಹಣವನ್ನು ಅವರದ್ದೆ ಕಾರು ಚಾಲಕ ಸಂತೋಷ್‌ ಎಂಬಾತ ಹಣವನ್ನು ಕಳವು ಮಾಡಿದ್ದ. ಈ ವಿಚಾರವಾಗಿ ಹಣವನ್ನು ಪತ್ತೆ ಮಾಡಿಕೊಡುತ್ತೇನೆ ಎಂದು ಮಧ್ಯವರ್ತಿ ಲೋಕನಾಥ್ ಎಂಬಾತ ಹರೀಶ್‌ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಲೋಕನಾಥ್‌ ಈ ವಿಷಯವನ್ನು ಶಂಕರ್‌ ನಾಯ್ಕ್‌ಗೆ ತಿಳಿಸಿದ್ದ. ದುರಾಸೆಗೆ ಬಿದ್ದ ಶಂಕರ್‌ ನಾಯ್ಕ್‌ 20 ಲಕ್ಷ ರೂ. ನೀಡಿದರೆ ರಿಕವರಿ ಮಾಡಿ ಕೊಡುವುದಾಗಿ ಹೇಳಿದ್ದಾನೆ.

ಮಾತ್ರವಲ್ಲ ತನ್ನ ವ್ಯಾಪ್ತಿಗೆ ಬರದ ಪ್ರಕರಣಕ್ಕೆ ತಾನೇ ಕಂಪ್ಲೆಂಟ್ ಕಾಪಿಯನ್ನು ರೆಡಿ ಮಾಡಿ, ಕನ್ನಡವೆ ಬಾರದ ಜಾನ್ ಎಂಬಾತನಿಂದ ನಕಲಿ‌ ಸಹಿ ಹಾಕಿಸಿ ಎಫ್‌ಐಆರ್‌ ದಾಖಲಿಸಿದ್ದ. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದ ಶಂಕರ್‌ ನಾಯ್ಕ್‌ 72 ಲಕ್ಷ ರೂ. ಹಣವನ್ನು ರಿಕವರಿ‌ ಮಾಡಿದರು.

ಈ ಕಾರ್ಯಾಚರಣೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಣಣ್ ನಿಂಬರಗಿರ ಗಮನಕ್ಕೆ ಬಂದಾಗ, ಈ ಕೇಸ್ ಅನ್ನು ಆಗೀನ ಎಸಿಪಿ ಕೋದಂಡರಾಮರಿಗೆ ವಹಿಸಿದ್ದರು. ಈ ವೇಳೆ ಸುರಕ್ಷತೆ ದೃಷ್ಟಿಯಿಂದ 75 ಲಕ್ಷ ರೂ. ಹಣವನ್ನು ಸರ್ಕಾರಿ ಖಜಾನೆಯಲ್ಲಿ ಇಡಲು ಸೂಚಿಸಿದ್ದರು. ಆದರೆ ಹಣವನ್ನು ಖಜಾನೆಯಲ್ಲಿ ಇಡದೆ ಇನ್‌ಸ್ಪೆಕ್ಟರ್‌ ಶಂಕರ್‌ ನಾಯ್ಕ್‌ ತನ್ನ ಸ್ವಂತಕ್ಕೆ‌ ಬಳಸಿಕೊಂಡಿದ್ದ.

ಚೀಲದೊಂದಿಗೆ ಹಣ ಹಿಂದಿರುಗಿಸಿದ

ಈ ನಡುವೆ ಶಂಕರ್‌ ನಾಯ್ಕ್‌ 2023ರ ಜನವರಿ 27ರಂದು ಬ್ಯಾಟರಾಯನಪುರ ಠಾಣೆಯಿಂದ ಬಿಡದಿ‌ ಠಾಣೆಗೆ ವರ್ಗಾವಣೆಗೊಂಡರು. ಅವರ ಜಾಗಕ್ಕೆ ನಿಂಗನಗೌಡ ಪಾಟೀನ್ ಎಂಬುವವರು ಇನ್‌ಸ್ಪೆಕರ್‌ ಆಗಿ ಬಂದಿದ್ದರು. ಆಗಲೂ ರಿಕವರಿ ಆಗಿದ್ದ 75 ಲಕ್ಷ ರೂ. ಹಣವನ್ನು ಕೊಡದೆ ಹಾಗೆಯೇ ಶಂಕರ್‌ ತೆರಳಿದ್ದರು. ಈ ಸಂಬಂಧ ಶಂಕರ್ ನಾಯ್ಕ್‌ಗೆ ನೋಟಿಸ್ ಜಾರಿ ಮಾಡಿದಾಗ ಫೆ.26ರಂದು ಚೀಲದಲ್ಲಿ ಹಣ ತುಂಬಿಸಿ ತಂದಿದ್ದರು.

ಸದ್ಯ ಪ್ರಕರಣ ಸಂಬಂಧ ನ್ಯಾಯಾಲಯವು ರಿಕವರಿ ಹಣವನ್ನು ತೆರಿಗೆ ಇಲಾಖೆಯ ವಶಕ್ಕೆ ನೀಡಲು ತಿಳಿಸಿದೆ. ತೆರಿಗೆ ಇಲಾಖೆಯು ಪಂಚನಾಮೆ ಮಾಡಿ ಹಣವನ್ನು ವಶಕ್ಕೆ ಪಡೆದಿದೆ. ಈ ಸಂಬಂಧ ಇನ್‌ಸ್ಪೆಕ್ಟರ್‌ ಶಂಕರ್ ನಾಯ್ಕ್ ಮತ್ತು ಮಧ್ಯವರ್ತಿ ಲೋಕನಾಥ್ ವಿರುದ್ಧ ಸೆಕ್ಷನ್ 201, 409,110, 465 ಮತ್ತು ಭ್ರಷ್ಟಾಚಾರ ನಿಷೇಧ ಕಾಯ್ದೆ ಅಡಿ ದೂರು ದಾಖಲಾಗಿದೆ. ಸರ್ಕಾರಿ ಕರ್ತವ್ಯದಲ್ಲಿ ನಂಬಿಕೆ ದ್ರೋಹ, ಅಧಿಕಾರ ದುರ್ಬಳಕೆ, ನಕಲಿ ಸಹಿ ಮಾಡಿಸಿಕೊಂಡು ಸಾಕ್ಷಿ ನಾಶ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version