ರಾಯಚೂರು/ಯಾದಗಿರಿ: ಕಳೆದ ಅಕ್ಟೋಬರ್‌ನಲ್ಲಿ ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಕೆಇಎ ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳು ಸಿಕ್ಕಿ ಬಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಡಿ.10ರಂದು ಕಾನ್ಸ್‌ಟೇಬಲ್ (Police Constable) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುತ್ತಿರುವುದರಿಂದ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಇಎನ್‌ಟಿ ವೈದ್ಯರಿಂದಲೇ ಪರೀಕ್ಷಾರ್ಥಿಗಳ ಕಿವಿಗಳ ತಪಾಸಣೆ ಮಾಡಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ (Karnataka Police Department) ಖಾಲಿ ಇರುವ 454 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (Police Constable) ಹುದ್ದೆಗಳ ನೇಮಕಾತಿಗೆ ಡಿ.10ರಂದು ಲಿಖಿತ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯಿಂದ 12.30ರವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ.
ಇತ್ತ ರಾಯಚೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ತೀವ್ರ ತಪಾಸಣೆ ಮಾಡಲಾಗುತ್ತಿದೆ. ರಾಯಚೂರು ರಿಮ್ಸ್ ಆಸ್ಪತ್ರೆಯ ಇಎನ್‌ಟಿ ವೈದ್ಯರಿಂದಲೇ ಪರೀಕ್ಷಾರ್ಥಿಗಳ ಕಿವಿಗಳ ತಪಾಸಣೆ ಮಾಡಲಾಗುತ್ತಿದೆ. ಸುಮಾರು 16 ಪರೀಕ್ಷಾ ಕೇಂದ್ರಗಳಲ್ಲಿ ರಿಮ್ಸ್ ವೈದ್ಯರ ನೇಮಕ ಮಾಡಲಾಗಿದೆ. ಪರೀಕ್ಷಾ ಕೊಠಡಿಗೆ ತೆರಳುವ ಮುಂಚಿತವಾಗಿ ಕಿವಿಯಲ್ಲಿ Otoscope ಮೂಲಕ ತೀವ್ರ ತಪಾಸಣೆ ಮಾಡಲಾಗಿದೆ. ಇನ್ನು ಮಹಿಳೆಯರ ಬ್ಯಾಂಗಲ್, ಕಾಲಗೆಜ್ಜೆಯನ್ನು ಪೊಲೀಸರು ತೆಗೆಸಿದ್ದಾರೆ.
ಇದನ್ನೂ ಓದಿ: PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್: ಗೃಹ ಸಚಿವರ ಘೋಷಣೆ
ಮೆಟಲ್ ಡಿಟೆಕ್ಟರ್ ಅಳವಡಿಕೆ
ಯಾದಗಿರಿ ಪರೀಕ್ಷಾ ಕೇಂದ್ರದ ಎದುರು ಪೊಲೀಸರು ಕಟ್ಟೆಚ್ಚರವನ್ನು ವಹಿಸಿದ್ದರು. ಬ್ಲೂಟ್ಯೂತ್ ಬಳಸಿ ಕೆಇಎ ಪರೀಕ್ಷಾ ಅಕ್ರಮದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಯಾದಗಿರಿ ನಗರದ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರತಿ ಕೇಂದ್ರಕ್ಕೆ ಓರ್ವ ಡಿವೈಎಸ್ಪಿ, ಸಿಪಿಐ, ಪಿಎಸ್ಐ ನೇಮಕ ಮಾಡಲಾಗಿದೆ. ಜತೆಗೆ ಪ್ರತಿಯೊಂದು ಕೇಂದ್ರದಲ್ಲೂ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದ ಹೊರಗೆ ಅಭ್ಯರ್ಥಿಗಳನ್ನು ಮೆಟಲ್ ಡಿಟೆಕ್ಟರ್ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸರಿಗೂ ಮೊಬೈಲ್ ಬಳಕೆಗೆ ಅವಕಾಶ ನೀಡಿಲ್ಲ. ಅಭ್ಯರ್ಥಿಗಳ ಕಿವಿ, ಪ್ಯಾಂಟ್, ಶರ್ಟ್ ಕಾಲರ್‌ನಲ್ಲೂ ಪರಿಶೀಲನೆ ಮಾಡಲಾಗುತ್ತಿದೆ.
ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?
ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೀದರ್, ಕಲಬುರಗಿ ನಗರ, ಕಲಬುರಗಿ ಜಿಲ್ಲೆ , ಯಾದಗಿರಿ ಜಿಲ್ಲೆ, ರಾಯಚೂರು ಜಿಲ್ಲೆ , ಕೊಪ್ಪಳ ಜಿಲ್ಲೆ ,ಬಳ್ಳಾರಿ ಜಿಲ್ಲೆ , ವಿಜಯನಗರ ಜಿಲ್ಲೆಗಳ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದೆ.
ಡಿಸೆಂಬರ್ 23ಕ್ಕೆ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ (PSI Scam) ಮರು ಪರೀಕ್ಷೆಗೆ ಆದೇಶಿಸಿ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ (State Government) ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ (Karnataka High court) ಈಚೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ಡಿ. 23ರಂದು ಮರು ಪರೀಕ್ಷೆ ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆಯನ್ನು ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಿಎಸ್ಐ ಮರು ಪರೀಕ್ಷೆ ನಡೆಸುತ್ತಿದ್ದು, ಈ ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು ಪರೀಕ್ಷೆಗೂ ಅರ್ಹತೆ ಪಡೆಯುತ್ತಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2021ರ ಜನವರಿ 21ರಂದು ಪೊಲೀಸ್ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಟಿಸಿತ್ತು. ಅದೇ ವರ್ಷದ ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ