ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ಸಾಹೀಪುರ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ದಾಳಿ ನಡೆಸಿರುವ ಪೊಲೀಸರು 84 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ ಕೋಲಾರದ ಇನ್ಸ್‌ಪೆಕ್ಟರ್ ಸೇರಿ 7 ಮಂದಿ ಬಂಧನಕ್ಕೊಳಗಾಗಿದ್ದಾರೆ.
ಕೋಲಾರದ ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಆಂಜಿನಪ್ಪ, ಕೆಎಎಸ್ ಅಧಿಕಾರಿ ಶ್ರೀನಾಥ್, ಶಿಕ್ಷಕ ರಮೇಶ್, ಕೋಲಾರ ನಗರಸಭೆ ಸದಸ್ಯರಾದ ಸತೀಶ್, ಶಬರೀಶ್, ವ್ಯಾಪಾರಿ ಸುಧಾಕರ್ ಸೇರಿ 84 ಮಂದಿಯನ್ನು ಬಂಧಿಸಲಾಗಿದೆ. ಬಹುತೇಕ ಕರ್ನಾಟಕ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರದವರೇ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬಂಧಿತರಿಂದ 23 ಲಕ್ಷ ರೂಪಾಯಿ, 20 ವಿಲಾಸಿ ಕಾರುಗಳು, 1 ಟ್ರಕ್ ಹಾಗೂ ಹುಕ್ಕಾ ಪಾಟ್, 100 ವಿದೇಶಿ ಲಿಕರ್ ಬಾಟೆಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ | Loan App Fraud | 100 ಲೋನ್ ಅಪ್ಲಿಕೇಷನ್ ಬಳಸಿ 500 ಕೋಟಿ ರೂ. ವಂಚನೆ, ಕರ್ನಾಟಕದಲ್ಲೂ ಇತ್ತು ಈ ಜಾಲ!
ತಲಾ ೨ ಲಕ್ಷ ರೂಪಾಯಿ ಶುಲ್ಕ
ಜೈಪುರ ಜಿಲ್ಲೆಯ ಜೈಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಹೀಪುರ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಜೂಜಾಟ ಹಾಗೂ ಅಶ್ಲೀಲ ನೃತ್ಯ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಜತೆ ಜೈಪುರ ಸ್ಪೆಷಲ್ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಪಾರ್ಟಿಯಲ್ಲಿದ್ದವರನ್ನು ಬಂಧಿಸಿದ್ದಾರೆ. ದೆಹಲಿ ಮೂಲದ ಇವೆಂಟ್ ಕಂಪನಿ ಆಯೋಜಿಸಿದ್ದ ಹೈಪ್ರೊಫೈಲ್ ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿತ್ತು.
ಮದ್ಯ ಪೂರೈಕೆಗೆ ಯುವತಿಯರಿದ್ದರು
ಕರ್ನಾಟಕದ ಪೊಲೀಸ್ ಇನ್‌ಸ್ಪೆಕ್ಟರ್, ತಹಸೀಲ್ದಾರ್, ಕಾಲೇಜು ಉಪನ್ಯಾಸಕ ಸೇರಿ ಹಲವರನ್ನು ಬಂಧಿಸಲಾಗಿದೆ. ಅಕ್ರಮ ಪಾರ್ಟಿಯಲ್ಲಿ ಹೆಚ್ಚಾಗಿ ಯುವಕ, ಯುವತಿಯರು ಇದ್ದರು. ಇವರಿಗೆ ಕ್ಯಾಸಿನೋ ಗೇಮ್‌ಗಳ ಜತೆಗೆ ನೃತ್ಯ ಮಾಡಲು, ಮದ್ಯ ಪೂರೈಸಲು ಯುವತಿಯರನ್ನು ವ್ಯವಸ್ಥೆ ಮಾಡಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಪಾಲ್ ಲಂಬಾ ತಿಳಿಸಿದ್ದಾರೆ.
ರೆಸಾರ್ಟ್‌ನ ಮ್ಯಾನೇಜರ್ ಮೋಹಿತ್ ಸೋನಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪಾರ್ಟಿಯನ್ನು ದೆಹಲಿಯ ನರೇಶ್ ಮಲ್ಹೋತ್ರಾ, ಪುತ್ರ ಮನ್ವೇಶ್ ಹಾಗೂ ಮೀರತ್ ನಿವಾಸಿ ಮನೀಶ್ ಶರ್ಮ ಎಂಬುವವರು ಪಾರ್ಟಿ ಆಯೋಜಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ಆಂಜಿನಪ್ಪ ಅಮಾನತು
ಜೈಪುರದ ರೇವು ಪಾರ್ಟಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿರುವ ಕೋಲಾರ ಸೈಬರ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಆಂಜಿನಪ್ಪ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Cow Slaughter | ಗೋಮಾಂಸ ಅಡ್ಡೆಗಳ ಮೇಲೆ ಪೊಲೀಸ್ ದಾಳಿ