ಬೆಳಗಾವಿ: ಸಂಗಮೇಶ್ವರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಇಡ್ಲಿ, ಸಾಂಬಾರಿನಲ್ಲಿ ನುಸಿ-ಜಿರಳೆ ಕಂಡುಬಂದಿವೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಉಪಾಹಾರ ಸೇವಿಸದೆ ಬುಧವಾರ ಹಾಸ್ಟೆಲ್ ಎದುರು ಪ್ರತಿಭಟನೆ ನಡೆಸಿ, ನಿತ್ಯ ಕಳಪೆ ಆಹಾರ ನೀಡಲಾಗುತ್ತಿದ್ದು, ಪರಿಶುದ್ಧತೆ ಪಾಲಿಸುತ್ತಿಲ್ಲ ಎಂದು ಸಿಬ್ಬಂದಿ ವಿರುದ್ಧ ಆರೋಪಿಸಿದರು.
ಉಪಾಹಾರ ತಯಾರಿಸಿದ್ದ ಪಾತ್ರೆಗಳ ಸಮೇತ ಹಾಸ್ಟೆಲ್ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಮಗೆ ಆಹಾರ ಬೇಡ, ವಿಷ ನೀಡಿ ಎಂದು ಆಕ್ರೋಶ ಹೊರಹಾಕಿದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ್ ಬೆನಕೆ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು, ಅಡುಗೆ ಕೋಣೆ ಹಾಗೂ ದಾಸ್ತಾನಿದ್ದ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ | ರಾಜಧಾನಿ ಅವ್ಯವಸ್ಥೆ ಬಗ್ಗೆ ಮತ್ತೆ ಮೋಹನ್‌ದಾಸ್ ಪೈ ಗರಂ, ಬೆಂಗಳೂರು ಉಳಿಸಿ ಎಂದು ಮೋದಿಗೆ ಮನವಿ
ಈ ವೇಳೆ ವಿದ್ಯಾರ್ಥಿಗಳು, ನಿತ್ಯ ಕಳಪೆ ಆಹಾರ ನೀಡಲಾಗುತ್ತಿದೆ. ಸರ್ಕಾರ ಅಗತ್ಯ ಸೌಲಭ್ಯ ನೀಡುತ್ತಿದೆ. ಆದರೆ ಅಧಿಕಾರಿಗಳು, ಸಿಬ್ಬಂದಿ ಮಾತ್ರ ನಮಗೆ ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ. ನುಸಿ-ಜಿರಳೆ ಮಿಶ್ರಿತ ಆಹಾರವನ್ನು ಸೇವಿಸುವುದಾರೂ ಹೇಗೆ, ಒಳ್ಳೆಯ ಆಹಾರ ಕೊಡಲಾಗದಿದ್ದರೆ ವಿಷವಾದರೂ ನೀಡಿ ಎಂದು ಅಳಲು ತೋಡಿಕೊಂಡರು.
ವಸತಿ ನಿಲಯದ ಅಡುಗೆ ಕೊಣೆಯಲ್ಲಿ ಆರು ತಿಂಗಳಿಗೆ ಬೇಕಾಗುವಷ್ಟು ಆಹಾರ ಪದಾರ್ಥ ಒಮ್ಮೆಲೆ ಸಂಗ್ರಹಿಸಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಡಿಸಿ ನಿತೇಶ ಪಾಟೀಲ್, 6 ತಿಂಗಳಿಗೆ ಬೇಕಾಗುವ ಆಹಾರ ಪದಾರ್ಥ ಒಮ್ಮೆಲೆ ಸಂಗ್ರಹಿಸಿದ್ದರಿಂದ ನುಸಿ ತಾಗಿದೆ. ಎಲ್ಲವನ್ನು ಬದಲಿಸಿ, ಬೇರೆ ಆಹಾರ ಪದಾರ್ಥ ತರಿಸಿಕೊಳ್ಳಲು ಸೂಚಿಸಿದ್ದೇನೆ. ವಸತಿ ನಿಲಯದ ಮಕ್ಕಳಿಗೆ ಅಗತ್ಯ ಸೌಕರ್ಯ ಒದಗಿದಲಾಗುವುದು ಎಂದರು.
ಈ ವೇಳೆ ಮಾತನಾಡಿದ ಶಾಸಕ ಅನಿಲ್ ಬೆನಕೆ, ಸಮಸ್ಯೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ. ವಸತಿ ನಿಲಯಕ್ಕೆ ಡಿಜಿಟಲ್ ಲೈಬ್ರರಿ ಅವಶ್ಯಕತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಕ್ಕಳ ಜತೆ ಊಟ ಸವಿದ ಶಾಸಕ, ಡಿಸಿ
ಹಾಸ್ಟೆಲ್ ಅಡುಗೆ ಕೋಣೆ ಹಾಗೂ ಆಹಾರ ಪದಾರ್ಥಗಳ ದಾಸ್ತಾನು ಪರಿಶೀಲನೆ ನಡೆಸಿದ ಬಳಿಕ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮನವೊಲಿಸಿದ ಡಿಸಿ ನಿತೇಶ ಪಾಟೀಲ್ ಹಾಗೂ ಶಾಸಕ ಅನಿಲ್ ಬೆನಕೆ ಅವರು, ಮಕ್ಕಳನ್ನು ಹಾಸ್ಟೆಲ್ ಒಳಗೆ ಕರೆದೊಯ್ದು, ಅವರ ಜತೆ ಹುಗ್ಗಿ, ಅನ್ನ, ಸಾಂಬಾರ್ ಸವಿದರು. ನಂತರ ಗುಣಮಟ್ಟದ ಆಹಾರ ವಿತರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಾಕೀತು ಮಾಡಿದರು.
ಇದನ್ನೂ ಓದಿ | Ganesh Chaturthi | ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಶಾಂತ, ಮೂರು ದಿನ ಪೂಜೆ, ದರ್ಶನಕ್ಕೆ ಅವಕಾಶ