ಬೆಂಗಳೂರಿನ ಪ್ರಾಣ ಫೌಂಡೇಶನ್ (Praana Foundation)ನಿಂದ ಆಂಬ್ಯುಲೆನ್ಸ್ ಸೇವೆ ಪ್ರಾರಂಭಗೊಂಡಿದೆ. ಆದರೆ ಇದು ಮನುಷ್ಯರ ಸೇವೆಗಾಗಿ ಅಲ್ಲ, ಬದಲಿಗೆ ಪ್ರಾಣಿಗಳಿಗಾಗಿ. ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಅಪಾಯ-ಅಪಘಾತ ಉಂಟಾಗುತ್ತದೆ. ನಗರದಾದ್ಯಂತ ಅದೆಷ್ಟೋ ಪ್ರಾಣಿಗಳು ಅನಾರೋಗ್ಯದಿಂದ ಬಿದ್ದಿರುತ್ತವೆ, ಗಾಯಗೊಂಡು ಎಲ್ಲೆಲ್ಲೋ ನರಳಾಡುತ್ತಿರುತ್ತವೆ. ಪ್ರಾಣಿಗಳಿಗೂ ಮೆಡಿಕಲ್ ಎಮರ್ಜನ್ಸಿ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆಯಾದ ಪ್ರಾಣ ಫೌಂಡೇಶನ್ ಹೀಗೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ನಟ, ರಾಜಕಾರಣಿ ಪ್ರಕಾಶ್ ರಾಜ್ ಅವರು ಈ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಪ್ರಾಣ ಫೌಂಡೇಶನ್ನ ಸಂಸ್ಥಾಪಕಿ ಸಂಯುಕ್ತಾ ಹೊರನಾಡ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಪ್ರಾಣ ಸಂಸ್ಥೆಯಿಂದ ಆಂಬ್ಯುಲೆನ್ಸ್ ಸೇವೆ ಮತ್ತು ಸಹಾಯವಾಣಿ ಶುರುವಾಗಿದ್ದು ‘ನನ್ನ ಹೃದಯ ತುಂಬಿದ ಕ್ಷಣ’ ಎಂದು ಹೇಳಿಕೊಂಡಿದ್ದಾರೆ. ಪ್ರಾಣಿಗಳಿಗಾಗಿ ಆಂಬ್ಯುಲೆನ್ಸ್ ಸೇವೆ ಉದ್ಘಾಟಿಸಿದ ಹೊತ್ತಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಅಜೀಂ ಪ್ರೇಮ್ ಜಿ ಹೇಳಿದ ಮೊಲದ ಕಥೆ! ಶಾಲೆಗೂ ಮೊಲಕ್ಕೂ ಏನು ಸಂಬಂಧ?
ಪ್ರಾಣಿ ರಕ್ಷಣಾ ಕೇಂದ್ರಗಳು ಬೆಂಗಳೂರಿನಲ್ಲಿ ಕಡಿಮೆ ಇವೆ. ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಒಂದೋ ಬೆಂಗಳೂರಿನ ಪೂರ್ವಭಾಗದಲ್ಲಿರುವ ಕೇಂದ್ರಕ್ಕೋ ಅಥವಾ ನಗರದ ಉತ್ತರ ಭಾಗದಲ್ಲಿರುವ ಕೇಂದ್ರಕ್ಕೋ ಹೋಗಬೇಕು. ಆದರೆ ಅಷ್ಟರಲ್ಲಿ ತಡವಾಗುತ್ತಿದೆ. ಹೀಗಾಗಿ ಪ್ರಾಣಿಗಳನ್ನು ಎಷ್ಟಾಗತ್ತೋ, ಅಷ್ಟು ಬೇಗ ರಕ್ಷಿಸಬೇಕು. ಅವರ ಜೀವವೂ ಅಮೂಲ್ಯವೇ ಎಂಬ ಕಾರಣದಿಂದಲೇ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಲಾಗಿದೆ ಎಂದು ಸಂಯುಕ್ತಾ ಹೊರನಾಡ್ ತಿಳಿಸಿದ್ದಾರೆ.
ನಟ ಪ್ರಕಾಶ್ ರಾಜ್ ಅವರು ಈ ಬಗ್ಗೆ ಪ್ರಾಣ ಫೌಂಡೇಶನ್ನ್ನು ಹೊಗಳಿದ್ದಾರೆ. ‘ಪ್ರೀತಿಯ ಸಂಯುಕ್ತಾ ಹೊರನಾಡು ಮತ್ತು ಪ್ರಾಣ ತಂಡದ ಸದಸ್ಯರು ಒಂದು ಅದ್ಭುತವಾದ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ನಾವೆಲ್ಲರೂ ಒಟ್ಟಾಗಿ ಪ್ರೀತಿ, ಸಂತೋಷ, ಕರುಣೆಯನ್ನು ಹಂಚೋಣ ಎಂದು ಹೇಳಿದ್ದಾರೆ.