Site icon Vistara News

Prabhas statue: ಟ್ರೋಲ್‌ ಆದ ಮೈಸೂರಿನ ಬಾಹುಬಲಿ ಮೇಣದ ಪ್ರತಿಮೆ; ಪ್ರಭಾಸ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವೇನು?

baahubali

baahubali

ಮೈಸೂರು: ತೆಲುಗಿನ ʼಬಾಹುಬಲಿʼ (Baahubali) ಚಿತ್ರಗಳ ಸರಣಿ ಬಳಿಕ ಪ್ರಭಾಸ್‌ (Prabhas) ಪ್ಯಾನ್‌ ಇಂಡಿಯಾ ನಾಯಕರಾಗಿ ಬದಲಾಗಿದ್ದಾರೆ. ಬಾಹುಬಲಿ ಸರಣಿ ಪ್ರಭಾಸ್‌ಗೆ ಎಷ್ಟರ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿತು ಎಂದರೆ 2017ರಲ್ಲಿ ಅವರ ಮೇಣದ ಪ್ರತಿಮೆ (wax statue) ಯನ್ನು ಬ್ಯಾಂಕಾಕ್‌ನ ಮೇಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿ (Madame Tussauds museum) ಸ್ಥಾಪಿಸಲಾಗಿತ್ತು. ಆ ಮೂಲಕ ಈ ಗೌರವ ಪಡೆದ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದರು. ಆಗ ಅವರ ಮೇಣದ ಪ್ರತಿಮೆಯ ಫೋಟೊ ವೈರಲ್‌ ಆಗಿದ್ದವು. ಆದರೆ ಇದೀಗ ಪ್ರಭಾಸ್‌ ಅವರ ಇನ್ನೊಂದು ಮೇಣದ ಪ್ರತಿಮೆ ಟ್ರೋಲ್‌ ಆಗುತ್ತಿದೆ. ಇತ್ತೀಚೆಗೆ ಮೈಸೂರಿನ ಮ್ಯೂಸಿಯಂನಲ್ಲಿ ಪ್ರತಿಷ್ಠಾಪಿಸಲಾದ ಬಾಹುಬಲಿ ಪ್ರತಿಮೆ ಬಗ್ಗೆ ಪ್ರಭಾಸ್‌ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಮಾಧಾನ ಹೊರ ಹಾಕಿದ ʼಬಾಹುಬಲಿʼ ನಿರ್ಮಾಪಕ

‘ಬಾಹುಬಲಿ’ ಚಿತ್ರಗಳ ನಿರ್ಮಾಪಕ ಶೋಭು ಯರ್ಲಗಡ್ಡ ಈ ಬಗ್ಗೆ ಎಕ್ಸ್‌ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಬಾಹುಬಲಿ ಅವತಾರದಲ್ಲಿರುವ ಪ್ರಭಾಸ್‌ ಅವರ ಪ್ರತಿಮೆ ನಿರ್ಮಿಸುವ ಮುನ್ನ ತಮ್ಮ ಒಪ್ಪಿಗೆ ಪಡೆಯಲಿಲ್ಲ ಎಂದು ಅವರು ಮ್ಯೂಸಿಯಂ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಈ ಪ್ರತಿಮೆಯನ್ನು ನಮ್ಮ ಒಪ್ಪಿಗೆ ಪಡೆಯದೆ ನಿರ್ಮಿಸಲಾಗಿದ್ದು, ಕೂಡಲೇ ಮ್ಯೂಸಿಯಂನಿಂದ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಭಿಮಾನಿಯೊಬ್ಬರು ಈ ಪ್ರತಿಮೆಯ ಚಿತ್ರವನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅವರು ಈ ರೀತಿಯ ಪೋಸ್ಟ್‌ ಮಾಡಿದ್ದಾರೆ.

ಎಲ್ಲಿದೆ?

ಮೈಸೂರಿನ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್‌ ಮ್ಯೂಸಿಯಂನಲ್ಲಿ ಈ ಬಾಹುಬಲಿ ಪ್ರಭಾಸ್‌ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕನ್ನಡಿಗರು ಸೇರಿ ಹಲವು ಅಭಿಮಾನಿಗಳು ಈ ಪ್ರತಿಮೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪ್ರಭಾಸ್‌ ಅನ್ನು ಹೋಲುತ್ತಿಲ್ಲ, ಬಾಹುಬಲಿ ಅವತಾರ ನೋಡಿಯಷ್ಟೇ ಪ್ರಭಾಸ್‌ ಎಂದು ಗುರುತಿಸಬಹುದು ಎಂದು ಹಲವರು ಹೇಳಿದ್ದಾರೆ.

ಟ್ರೋಲ್

ಸದ್ಯ ಈ ಪ್ರತಿಮೆ ಟ್ರೋಲ್‌ಗೆ ಆಹಾರವಾಗುತ್ತಿದೆ. ಅನೇಕರು ಗೇಲಿ ಮಾಡುತ್ತಿದ್ದಾರೆ. ಪ್ರತಿಮೆ ಟಾಲಿವುಡ್‌ ನಟ ರಾಮ್‌ ಚರಣ್‌ ಅವರನ್ನು ಹೋಲುತ್ತದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರಿಗೆ ಆಸ್ಟ್ರೇಲಿಯನ್‌ ಕ್ರಿಕೆಟರ್‌ ಡೇವಿಡ್‌ ವಾರ್ನರ್‌ ರೀತಿ ಕಾಣಿಸಿದೆಯಂತೆ. ಬಾಹುಬಲಿ ಅವತಾರ ಬಿಟ್ಟರೆ ಇದು ಪ್ರಭಾಸ್‌ ಅಲ್ಲವೇ ಅಲ್ಲ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಸಂತಸ ಹಂಚಿಕೊಂಡ ಅಭಿಮಾನಿ

ಇದಕ್ಕೆ ವ್ಯತಿರಿಕ್ತವಾಗಿ ಅಭಿಮಾನಿಯೊಬ್ಬ ಪ್ರಭಾಸ್‌ ಪ್ರತಿಮೆ ಸ್ಥಾಪನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಶೋಭು ಯರ್ಲಗಡ್ಡ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದಲ್ಲಿ ಬಾಹುಬಲಿ ಪ್ರತಿಮೆ ಸ್ಥಾಪಿಸಿರುವುದಕ್ಕೆ ಖುಷಿ ಪಡೋಣ ಎಂದಿದ್ದಾರೆ.

ಇದನ್ನೂ ಓದಿ: Pooja Hegde: ಖ್ಯಾತ ಕ್ರಿಕೆಟಿಗನ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪೂಜಾ ಹೆಗ್ಡೆ?

ದಾಖಲೆ ಬರೆದಿದ್ದ ʼಬಾಹುಬಲಿʼ ಸರಣಿ

ತೆಲುಗಿನ ಯಶಸ್ವಿ ನಿರ್ದೇಶಕ ರಾಜಮೌಳಿ ಅವರ ಕನಸಿನ ಕೂಸು ʼಬಾಹುಬಲಿʼ ಚಿತ್ರ. ಎರಡು ಭಾಗಗಳಲ್ಲಿ ಈ ಚಿತ್ರ ತೆರೆಕಂಡಿತ್ತು. ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ, ಮಲೆಯಾಳಂ ಮುಂತದ ಭಾಷೆಗಳಲ್ಲಿ ತೆರೆಕಂಡು ದಾಖಲೆಯ ಗಳಿಕೆ ಮಾಡಿತ್ತು. ಮೊದಲ ಭಾಗ 2015ರಲ್ಲಿ ಬಿಡುಗಡೆಯಾಗಿದ್ದರೆ ಎರಡನೇ ಭಾಗ 2017ರಲ್ಲಿ ತೆರೆಗೆ ಅಪ್ಪಳಿಸಿತ್ತು. ʼಬಾಹುಬಲಿ 2ʼ ವಿಶ್ವಾದ್ಯಂತ ಸುಮಾರು 1,700 ಕೋಟಿ ರೂ.ಗಳಿಕೆ ಮಾಡಿತ್ತು. ಪ್ರಭಾಸ್‌ ಜೊತೆಗೆ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾ ಕೃಷ್ಣ, ನಾಸರ್‌, ಸತ್ಯರಾಜ್‌ ಮತ್ತಿತರರು ಮುಖ್ಯಪಾತ್ರದಲ್ಲಿ ನಟಿಸಿದ್ದರು. ವಿಶೇಷ ಎಂದರೆ ಮೊದಲ ಭಾಗದಲ್ಲಿ ಕನ್ನಡ ನಟ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದರು.

Exit mobile version