ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟವಾಗಿ ಒಂದೇ ದಿನಕ್ಕೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ (Prabhuling Navadgi) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿಂದೆ ಅವರು ಬಾರ್ & ಬೆಂಚ್ ವೆಬ್‌ಸೈಟ್‌ಗೆ ನೀಡಿದ್ದ ಸಂದರ್ಶನದಲ್ಲಿ, ರಾಜಕೀಯ ಸ್ಥಾನ ಪಲ್ಲಟವಾದ ತಕ್ಷಣ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದರು. ಆದರೆ, ಈಗ ಸರ್ಕಾರ ಬದಲಾಗುತ್ತಿದ್ದಂತೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಭಾನುವಾರ ರಾಜಭವನಕ್ಕೆ ತೆರಳಿದ ಪ್ರಭುಲಿಂಗ ನಾವದಗಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. 2018ರ ಮೇ 18ರಂದು ನಾವದಗಿ ಅವರು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು.
2018ಕ್ಕೂ ಮುನ್ನ ಮಧುಸೂದನ್ ನಾಯಕ್ ಅವರು ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಣೆ ಮಾಡಿದ್ದರು. ಬಳಿಕ ಉದಯ್ ಹೊಳ್ಳ ಅವರು ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು (ಜೆಡಿಎಸ್ ಹಾಗೂ ಕಾಂಗ್ರೆಸ್) 2019ರಲ್ಲಿ ಪತನಗೊಂಡ ನಂತರ ಅವರೂ ರಾಜೀನಾಮೆ ನೀಡಿದ್ದರು.
ರಾಜೀನಾಮೆ ಬಗ್ಗೆ ಏನು ಹೇಳಿದ್ದರು?
ಈ ಹಿಂದೆ ಸಂದರ್ಶನದಲ್ಲಿ ಪ್ರಭುಲಿಂಗ ನಾವದಗಿ ಮಾತನಾಡುತ್ತಾ, ರಾಜಕೀಯ ಸ್ಥಾನ ಪಲ್ಲಟವಾದ ತಕ್ಷಣ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ. ಆದರೆ, ಅಡ್ವೊಕೇಟ್ ಜನರಲ್ ಎಂಬುವವರು ಆಯಾ ಸರ್ಕಾರದ ಆಯ್ಕೆಯಾಗಿರುವುದರಿಂದ ಆಯಾ ಸರ್ಕಾರವೇ ಅವರನ್ನು ಆಯ್ಕೆ ಮಾಡುತ್ತದೆ. ಅದರಲ್ಲಿ ನನಗೇನೂ ತಪ್ಪು ಕಾಣಿಸುವುದಿಲ್ಲ, ಏಕೆಂದರೆ ಅಂತಿಮವಾಗಿ, ಆಯಾ ಸರ್ಕಾರದ ನೀತಿ ನಿರ್ಧಾರಗಳು ನ್ಯಾಯಾಲಯದ ಮುಂದೆ ತಾರತಮ್ಯ ಇಲ್ಲದೇ ಪ್ರಶ್ನೆಗೊಳಗಾಗುತ್ತವೆ. ಅಡ್ವೊಕೇಟ್ ಜನರಲ್ ಅವರು ರಾಜ್ಯದ ಪ್ರಥಮ ಕಾನೂನು ಅಧಿಕಾರಿಯಾಗಿದ್ದು, ಆ ನಿರ್ಧಾರಗಳನ್ನು ಸಮರ್ಥಿಸಲು ಮಾತ್ರವಲ್ಲ, ಸರ್ಕಾರಕ್ಕೆ ಸೂಕ್ತವಾಗಿ ಸಲಹೆ ನೀಡಲು ಸಹ ಬದ್ಧರಾಗಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: Karnataka Election Results: ವಿಧಾನಸಭೆಯಲ್ಲಿ ಅಪ್ಪ ಮಕ್ಕಳ ಜೋಡಿ, ಸಹೋದರರ ಸಂಭ್ರಮ
ಇಡೀ ರಾಜಕೀಯ ವರ್ಣಪಟಲದಲ್ಲಿ, ಒಂದು ಆಡಳಿತ ಹಿಂದಿನ ಆಡಳಿತಕ್ಕೆ ಸಂಪೂರ್ಣ ವಿರುದ್ಧವಾದ ದೃಷ್ಟಿಕೋನ ತೆಗೆದುಕೊಳ್ಳಬಹುದು. ಆದ್ದರಿಂದ, ಹಿಂದಿನ ಆಡಳಿತದಿಂದ ನೇಮಕಗೊಂಡ ಅಡ್ವೊಕೇಟ್ ಜನರಲ್ ಮುಂದುವರಿಯಬೇಕಾದರೆ, ಆತ ಹಿಂದಿನ ಎಜಿ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಬೇಕಾದ ಸ್ಥಿತಿಗೆ ಬರಬಹುದು. ಈ ರೀತಿಯ ಮುಜುಗರದ, ಸಂಘರ್ಷದ ಸಂದರ್ಭಗಳನ್ನು ತಪ್ಪಿಸಲು, ಅಡ್ವೊಕೇಟ್ ಜನರಲ್ ಅವರನ್ನು ನಂತರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಹೊಸದಾಗಿ ನೇಮಿಸುತ್ತದೆ. ಇದರಲ್ಲಿ ತಪ್ಪೇನಿಲ್ಲ ಎಂದು ಅವರು ಆ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದರು.