ಶಿವಮೊಗ್ಗ: ಯಾರೇ ಆಗಲಿ ಜಾತಿ, ಧರ್ಮದ ಆಧಾರದ ಮೇಲೆ ಆಡಳಿತ ನಡೆಸಬಾರದು, ಸರ್ವರಿಗೂ ಸಮಬಾಳು, ಸಮಪಾಲು ಎಂದು ಸಂವಿಧಾನದ ಪ್ರಕಾರ ಆಡಳಿತ ನಡೆಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ (Prajadhwani Yatra) ಎಲ್ಲ ಧರ್ಮಗಳಿಗೂ ರಕ್ಷಣೆ ಕೊಡುತ್ತಾ ಬಂದಿದೆ. ಇಲ್ಲಿ ಜಾತಿ ಆಧಾರದಲ್ಲಿ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ, ನೀತಿ ರಾಜಕಾರಣ ಮಾಡಬೇಕು ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಜಿಲ್ಲೆಯ ಭದ್ರಾವತಿಯಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ಆಡಳಿತ ಕೊಟ್ಟಿದ್ದೆವು. ಅವರಿಗೆ ಸರ್ಕಾರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಜೆಡಿಎಸ್ ಮತ್ತೆ ಅಧಿಕಾರ ಬರಲಿಕ್ಕೆ ಸಾಧ್ಯವೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶಾಸಕ ಸಂಗಮೇಶ್ ಹಸು ಇದ್ದಂತೆ, ಹಾಯುವುದೂ ಇಲ್ಲ, ಒದೆಯುವುದೂ ಇಲ್ಲ. ನಾವು ಕಾರ್ಯಕರ್ತರಿಗೆ ಶಿಸ್ತು ಕಲಿಸಬೇಕು, ದೊಡ್ಡ ಪಕ್ಷದಲ್ಲಿ ಗೌರವವಿರಬೇಕು. ಕಳೆದ ಬಾರಿ 80 ಸೀಟ್ ಗೆದ್ದಿದ್ದೆವು. ಮುಂದೆ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹಗರಣಗಳ ಪುಸ್ತಕವನ್ನೇ ಬರೆಯಬಹುದು. ಅಡಿಕೆ ಬೆಳೆಯುವುದನ್ನು ರೈತರು ಬಿಡಿ ಎನ್ನುತ್ತಿದ್ದಾರೆ. ನಿವು ಯಾಕೆ ರಾಜಕಾರಣ ಮಾಡುತ್ತೀರಾ ಬಿಟ್ಟು ಬಿಡಿ ಎಂದ ಅವರು, ಈ ಸರ್ಕಾರ ರೈತರಿಗೆ ಬೆಂಬಲ ಬೆಲ ನೀಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಜೆಗಳ ನೋವು ಕೇಳಲು ಬಂದಿದ್ದೆವು. ಈ ಸರ್ಕಾರ ಇನ್ನೂ 50 ದಿನ ಮಾತ್ರ ಇರುತ್ತದೆ. ನಾವು 140 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್ ಅನ್ನು ಬಿಜೆಪಿಯವರೇ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ನಾವು ಯಾಕೆ ತೆಗೆದುಕೊಳ್ಳಬೇಕು. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ ಎಂದಿದ್ದರು. ಈಗ ಪ್ರಧಾನಿ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ ಎನ್ನುತ್ತಿದ್ದಾರೆ. ರಾಜ್ಯ ಬಿಜೆಪಿಗೆ ನಾಯಕತ್ವವೇ ಇಲ್ಲ ಎಂದು ವ್ಯಂಗ್ಯವಾಡಿದರು.
ನಾವು ರಾಷ್ಟ್ರೀಕರಣ ಮಾಡಿದರೆ, ಇವರು ಖಾಸಗೀಕರಣ ಮಾಡುತ್ತಿದ್ದಾರೆ
ವಿಐಎಸ್ಎಲ್ ಕಾರ್ಖಾನೆ ಮುಚ್ಚಲು ಕಾರ್ಮಿಕರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಜತೆ ಸಭೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.
ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಅನ್ನು ಖಾಸಗಿಯವರು ನಡೆಸಿ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಯಾರೂ ಮುಂದೆ ಬರುತ್ತಿಲ್ಲ. ನಾವು ಎಲ್ಲ ಕಾರ್ಖಾನೆಯನ್ನು ರಾಷ್ಟ್ರೀಕರಣ ಮಾಡಿದರೆ, ಇವರು ಖಾಸಗೀಕರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಇದನ್ನೂ ಓದಿ | D.K. Shivakumar: ಆಸ್ತಿಯಲ್ಲಿ ಏರಿಕೆ ಪ್ರಕರಣ; ಮಗಳು ಐಶ್ವರ್ಯಳಿಗೂ ಬಂದಿದೆ ಸಿಬಿಐ ನೋಟಿಸ್ ಎಂದ ಡಿಕೆಶಿ
ಈ ರಾಜ್ಯದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಇದೆ. ಭದ್ರಾವತಿ, ಶಿವಮೊಗ್ಗದಲ್ಲಿ ಕಾರ್ಮಿಕರು, ರೈತರು ವ್ಯಾಪಾರಸ್ಥರು ಬದುಕುವ ಹಾಗಿಲ್ಲ. ವಿಐಎಸ್ಎಲ್ ಖರೀದಿಗೆ ಖಾಸಗಿಯವರು ಬಾರದ ಹಿನ್ನೆಲೆಯಲ್ಲಿ ಮುಚ್ಚಲು ಮುಂದಾಗಿದ್ದಾರೆ. ಇಲ್ಲಿನ ಕಾರ್ಖಾನೆಗಳು ಸರ್ಕಾರದ ಸುಪರ್ದಿಯಲ್ಲಿರಬೇಕು ಮುಚ್ಚಬಾರದು ಎಂದು ಹೇಳಿದರು.