Site icon Vistara News

Gommata Media Award : ಕೆಯುಡಬ್ಲ್ಯೂಜೆ ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಆಯ್ಕೆ

Prajavani Executive Editor Ravindra Bhat selected for KUWJ Gommata Media Award

#image_title

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ʼಗೊಮ್ಮಟ ಮಾಧ್ಯಮ ಪ್ರಶಸ್ತಿʼಗೆ (Gommata Media Award) ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಆಯ್ಕೆಯಾಗಿದ್ದಾರೆ.

ವರದಿಗಾರರಾಗಿ ವೃತ್ತಿ ಆರಂಭಿಸಿ ಸಂಪಾದಕ ಹುದ್ದೆಯ ತನಕ ಮೂರು ದಶಕಗಳ ಕಾಲ ಅವರು ಪತ್ರಿಕೋದ್ಯಮದಲ್ಲಿ ಮಾಡಿರುವ ಸುದೀರ್ಘ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಗೊಮ್ಮಟ ಮಾಧ್ಯಮ ಪ್ರಶಸ್ತಿಯನ್ನು ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ಥಾಪಿಸಿದ್ದಾರೆ. ಮೈಸೂರಿನಲ್ಲಿ ನಡೆಯುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದನ್ನೂ ಓದಿ | Govt. Employees strike : 17% ವೇತನ ಹೆಚ್ಚಳ ಯಾರ‍್ಯಾರಿಗೆ ಅನ್ವಯ, ಸರ್ಕಾರಿ ಆದೇಶದಲ್ಲಿ ಏನೇನಿದೆ?

ರವೀಂದ್ರ ಭಟ್ಟ ಅವರ ಪರಿಚಯ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಐನಕೈಯಲ್ಲಿ 1967ರಲ್ಲಿ ಗಜಾನನ ಭಟ್ಟ ಮತ್ತು ಮೀನಾಕ್ಷಿ ಭಟ್ಟ ಅವರ ಪುತ್ರನಾಗಿ ರವೀಂದ್ರ ಭಟ್ಟ ಜನಿಸಿದರು. ಶಿರಸಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವ್ಯಾಸಂಗ ಮುಗಿಸಿದರು. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು, ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದರು. 1995ರಿಂದ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು

ʼಇವರೇ ಬರಮಾಡಿಕೊಂಡ ಬರ, ಹೆಜ್ಜೇನು (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ʼಬದುಕು ಮರದ ಮೇಲೆʼ, ಮೂರನೇ ಕಿವಿ, ಸಂಪನ್ನರು, ಅಕ್ಷಯ ನೇತ್ರ, ಮೈಸೂರೆಂಬ ಬೆರಗು, ಸಹಸ್ರಪದಿ, ಇಂಥವರೂ ಇದ್ದಾರೆ ಜಗದೊಳಗೆ, ಜನಕಂಜಿ ನಡೆಯದವರ ಸಂತೆ, ರಾಜಕಾರಣದಲ್ಲಿ ನಿಂಬೆ, ಹಾಗಲ ಕೃತಿಗಳನ್ನು ರವೀಂದ್ರ ಭಟ್ಟ ಅವರು ರಚಿಸಿದ್ದಾರೆ.

ಇದನ್ನೂ ಓದಿ | Govt Employees Strike : ಸರ್ಕಾರದಿಂದ ವೇತನ ಹೆಚ್ಚಳದ ಆದೇಶ; ಮುಷ್ಕರ ಹಿಂದಕ್ಕೆ ಪಡೆದ ಸರ್ಕಾರಿ ನೌಕರರು

ಪ್ರಶಸ್ತಿಗಳು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮಹಾತ್ಮ ಗಾಂಧಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ನಾರಾಯಣಸ್ವಾಮಿ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಬೆಂಗಳೂರಿನ ಸಿಡಿಎಲ್ ಸಂಸ್ಥೆ ನೀಡುವ ಚರಕ ಪ್ರಶಸ್ತಿ, ಎಚ್.ಎಸ್.ಕೆ. ಪ್ರತಿಷ್ಠಾನದ ಎಚ್.ಎಸ್.ಕೆ. ಪ್ರಶಸ್ತಿ, ರೋಟರಿ ಸಿಲಿಕಾನ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿ, ಡಾ. ಶಾಂತಾ ರಾಧಾಕೃಷ್ಣ ಎಂಡೋಮೆಂಟ್ ಪ್ರಶಸ್ತಿ. ಕರ್ನಾಟಕ ಅಕ್ಷರ ಪ್ರಶಸ್ತಿ, ಎಚ್.ಕೆ.ವೀರಣ್ಣ ಗೌಡ ಪತ್ರಿಕೋದ್ಯಮ ಪ್ರಶಸ್ತಿ. ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಪಾ.ವೆಂ.ಆಚಾರ್ಯ ಮಾಧ್ಯಮ ಪ್ರಶಸ್ತಿ, ಅಂಕಣ ಬರಹಗಳಿಗೆ ಮಾಸ್ತಿ ಪ್ರಶಸ್ತಿ ದೊರೆತಿದೆ.

Exit mobile version