Site icon Vistara News

Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

Basavaraj Bommai

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಮಾಹಿತಿ ಕೊಟ್ಟವರನ್ನೇ ಬಂಧನ ಮಾಡುತ್ತಿದ್ದಾರೆ. ಎಸ್ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಸರಿಯಾದ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಎಸ್‌ಐಟಿಯವರು ಅಪರಾಧಿಗಳನ್ನು ಬಂಧಿಸುತ್ತಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಚಾರಣೆಯನ್ನೂ ಮಾಡಬೇಕು ಎಂಬ ಕೆಲವರ ಆಗ್ರಹದ ಕುರಿತು ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ‌ ಯಾರ ಹೆಸರು ಕೇಳಿಬರುತ್ತಿದೆಯೋ ಅವರ ವಿಚಾರಣೆಯನ್ನು ಮಾಡಬೇಕು. ಆ ಕಾರಣಕ್ಕಾಗಿಯೇ ನಾವು ಪ್ರಕರಣ ಸಿಬಿಐಗೆ ಕೊಡಲಿ ಅಂತ ಕೇಳುತ್ತಿದ್ದೇವೆ ಎಂದು ಹೇಳಿದರು.

ಎಲ್ಲವೂ ಸರಿ ಹೋಗುತ್ತದೆ

ಪರಿಷತ್ ಚುನಾವಣೆಗೆ ಟಿಕೆಟ್ ಘೋಷಣೆಯಾದ ಮೇಲೆ ಕೆಲವರಲ್ಲಿ ಅಸಮಧಾನವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಚುನಾವಣೆಗೆ ಹಲವರು ಆಕಾಂಕ್ಷಿಗಳು ಇದ್ದರು. ಟಿಕೆಟ್ ಕೈತಪ್ಪಿದಾಗ ಸಹಜವಾಗಿ ಬೇಸರ ಆಗುತ್ತದೆ. ಎಲ್ಲವೂ ಸರಿ ಹೋಗುತ್ತದೆ. ಈಗಾಗಲೇ ಮೈತ್ರಿ ಬಗ್ಗೆ ವರಿಷ್ಠರು ಯಾವ ರೀತಿ ತೀರ್ಮಾನ ಮಾಡಿದ್ದಾರೋ ಅದರಂತೆ ನಡೆಯುತ್ತದೆ ಎಂದು ಹೇಳಿದರು.

ಸಿಬಿಐಗೆ ಏಕೆ ಕೊಡಲ್ಲ ಎಂದು ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಮತ್ತು ಜೆಡಿಎಸ್‌ ಆಗ್ರಹವನ್ನು ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ನಮ್ಮ ಪೊಲೀಸರ ಮೇಲೆ ಇವರಿಗೆ ನಂಬಿಕೆ ಇಲ್ಲವೇ? ಎಂದು ಇವರಿಗೆ? ಎಂದು ಹೇಳುವ ಮೂಲಕ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಸಿಬಿಐ ಬಗ್ಗೆ ಬಿಜೆಪಿಯವರು ಏನು ಹೇಳಿದ್ದಾರೆ ಗೊತ್ತಾ? ಸಿಬಿಐ ಅಂದರೆ ಕರಪ್ಶನ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್‌ ಅಂತ ಹೇಳಿದರು. ಈ ಹಿಂದೆ ಅವರ ಸರ್ಕಾರ ಇದ್ದಾಗ ನಾವು ಎಷ್ಟು ಸಾರಿ ಕೇಳಿದ್ದೇವೆ ಸಿಬಿಐಗೆ ಕೊಡಿ ಅಂತ. ಯಾವತ್ತಾದರೂ ಒಂದು ಪ್ರಕರಣವನ್ನು ಅವರು ಸಿಬಿಐಗೆ ಕೊಟ್ಟಿದ್ದಾರಾ? ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಈ ಪ್ರಕರಣವನ್ನು ಸಿಬಿಐಗೆ ಕೊಡುವುದಕ್ಕೆ ಆಗ್ರಹ ಮಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.

ಈ ಹಿಂದೆ ನಾನು ಸಿಎಂ ಆಗಿದ್ದಾಗ ಸಿಬಿಐಗೆ 7 ಕೇಸ್ ಕೊಟ್ಟಿದ್ದೆ. ಆ ಕೇಸ್‌ಗಳಲ್ಲಿ ಏನಾಯಿತು? ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ಯಾಕೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ ಇವರಿಗೆ? ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಐಗೆ ಕೊಟ್ಟ ಮೇಲೆ ಏನಾಯ್ತು ಆ ಕೇಸ್?

ಸಂತ್ತಸ್ತೆಯ ದೂರಿನ ಮೇಲೆ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಅರೆಸ್ಡ್ ಮಾಡಲಾಗಿದೆ. ನಾವು ಪೊಲೀಸ್ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುತ್ತಿಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಪ್ರಲ್ಹಾದ್ ಜೋಶಿ ಜವಾಬ್ದಾರಿಯಿಂದ ಮಾತನಾಡಲಿ. ಉತ್ತರ ಕನ್ನಡ ಜಿಲ್ಲೆಯ ಪರೇಶ್‌ ಮೇಸ್ತಾ ಕೇಸಲ್ಲಿ ಏನ್ರೀ ಆಯ್ತು? ಸಿಬಿಐಗೆ ಕೊಟ್ಟ ಮೇಲೆ ಏನಾಯ್ತು ಆ ಕೇಸ್? ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಎಸ್ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

ಪೆನ್‌ಡ್ರೈವ್‌ ಹಂಚಿಕೆಯ ಪ್ರಮುಖ ಆರೋಪ ಹೊತ್ತಿರುವ ನವೀನ್‌ ಗೌಡ ಈ ಸಂಬಂಧ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಅರಕಲಗೂಡು ಶಾಸಕ ಎ. ಮಂಜು ಮೇಲೆ ಬೊಟ್ಟು ಮಾಡಿದ್ದಾನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಮಹಾ ನಾಯಕ ಇವರೇ ಎಂದು ಆರೋಪ ಮಾಡಿದ್ದಾನೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ನಲ್ಲಿ ನವೀನ್‌ ಗೌಡ ಹಾಕಿರುವ ಪೋಸ್ಟ್‌ನಲ್ಲಿ ಜೆಡಿಎಸ್‌ ಶಾಸಕ ಎ. ಮಂಜು ವಿರುದ್ಧ ನೇರವಾಗಿ ಆರೋಪ ಮಾಡಿದ್ದಾನೆ. ಆದರೆ, ನವೀನ್‌ ಗೌಡ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಎಸ್‌ಐಟಿಯವರು ಶೋಧ ಕಾರ್ಯ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ. ಈ ಮಧ್ಯೆ ನವೀನ್‌ ಗೌಡ ಮಾತ್ರ ರಾಜಾರೋಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳತೊಡಗಿದ್ದಾನೆ.

ನವೀನ್‌ ಗೌಡನ ಪೋಸ್ಟ್‌ನಲ್ಲೇನಿದೆ?

ನನಗೆ ಏಪ್ರಿಲ್20 ರಂದು ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಕೊಟ್ಟಿದ್ದೇನೆ. ಏಪ್ರಿಲ್ 21 ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಅವರಿಗೆ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ಎ. ಮಂಜುಗೂ ಸಂಕಷ್ಟ?

ಈಗಾಗಲೇ ಎಸ್‌ಐಟಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಮಧ್ಯೆ ಪೆನ್‌ಡ್ರೈವ್‌ ಅನ್ನು ಹಾಸನ ಜಿಲ್ಲಾದ್ಯಂತ ಹಂಚಿಕೆ ಮಾಡಿರುವ ಆರೋಪವನ್ನು ಹೊತ್ತಿರುವ ನವೀನ್‌ ಗೌಡ ಮಾಡಿರುವ ಪೋಸ್ಟ್‌ ಈಗ ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ಈತನ ಪೋಸ್ಟ್‌ ಅನ್ನು ಆಧಾರವಾಗಿಟ್ಟುಕೊಂಡು ಎಸ್‌ಐಟಿಯವರು ಮುಂದಿನ ಕ್ರಮವನ್ನು ಕೈಗೊಂಡು ಮಂಜು ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರಾ? ಇಲ್ಲವೇ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಿದ್ದಾರಾ? ಅಥವಾ ಈ ಪೋಸ್ಟ್‌ ಅನ್ನು ನವೀನ್‌ ಗೌಡ ಯಾವ ಐಪಿ ಅಡ್ರೆಸ್‌ನಿಂದ ಮಾಡಿದ್ದಾನೆ ಎಂಬುದನ್ನು ತಿಳಿದುಕೊಂಡು ಶೋಧ ಕಾರ್ಯ ನಡೆಸಲಿದ್ದಾರೋ? ಎಂಬುದನ್ನು ನೋಡಬೇಕಿದೆ.

ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

ಇದು ಸೂಕ್ಷ್ಮ ವಿಷಯವಾಗಿದೆ. ಮಾತನಾಡುವಾಗ ಈ ಬಗ್ಗೆ ಎಚ್ಚರಿಕೆ ಇರಬೇಕು. ಬಾಯಿಗೆ ಬಂದಂತೆ ಹೇಳಿಕೆ ನೀಡಿದರೆ ಕಾನೂನು ಪ್ರಕಾರ ನಿಮ್ಮನ್ನೂ ಕರೆಸಿ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರು ಯಾರೋ, ಏನೇನನ್ನೋ ಹೇಳುತ್ತಾರೆ. ಪ್ರತಿಯೊಂದು ಸಾರ್ವಜನಿಕ ಹೇಳಿಕೆಗಳಿಗೆ ನಾವು ಉತ್ತರ ಕೊಡುವುದಕ್ಕೆ ಆಗಲ್ಲ. ಇದು ಗಂಭೀರವಾದ ಪ್ರಕರಣ ಆಗಿರುವುದರಿಂದ ಇದರ ಇನ್ವೆಸ್ಟಿಗೇಶನ್ ಆಗುವವರೆಗೂ ಕೂಡ ಯಾವುದೇ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ತಿಳಿಸಲು ಆಗುವುದಿಲ್ಲ. ಈ ಕೇಸ್‌ ಬಗ್ಗೆ ಸಾರ್ವಜನಿಕರಾಗಲೀ ಅಥವಾ ರಾಜಕೀಯ ನಾಯಕರಗಾಲೀ, ಯಾವುದೇ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕು. ಈ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವವರ ಮೇಲೆಯೂ ಕ್ರಮ ಆಗುತ್ತದೆ. ಯಾವುದೇ ರೀತಿಯ ಹೇಳಿಕೆ ಕೊಟ್ಟರೆ 41A ಪ್ರಕಾರ ಅವರನ್ನು ಕೂಡ ವಿಚಾರಣೆಗೆ ಕರೆಯಬೇಕಾಗುತ್ತದೆ. ಎಚ್.ಡಿ. ಕುಮಾರಸ್ವಾಮಿ ಪದೇ ಪದೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ವಿಷಯವನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಪ್ರಜ್ವಲ್‌ ಬಂಧನಕ್ಕೆ ಎಸ್‌ಐಟಿ ಟೀಂ ವಿದೇಶಕ್ಕೆ ಹೋಗಲ್ಲ

ಪ್ರಜ್ವಲ್ ರೇವಣ್ಣ ಬಂಧನಕ್ಕಾಗಿ ಎಸ್‌ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗುವ ಅವಕಾಶವಿಲ್ಲ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದೇವೆ. ಇಂಟರ್ ಪೋಲ್‌ನವರು ಅವರಿಗೆ ಇನ್ಫಾರ್ಮೇಷನ್ ಕೊಡುತ್ತಾರೆ. ಯಾವ ದೇಶದಲ್ಲಿ ಇದ್ದಾರೆ ಎಂಬುದನ್ನು ಗುರುತಿಸಿ ಸಿಬಿಐಗೆ ಮಾಹಿತಿಯನ್ನು ನೀಡಲಾಗುತ್ತದೆ. ಸಿಬಿಐನವರು ನಮಗೆ ಮಾಹಿತಿಯನ್ನು ನೀಡುತ್ತಾರೆ. ಆಮೇಲೆ ನಮ್ಮ ಏಜನ್ಸಿಗಳಿಗೂ ಈ ಬಗ್ಗೆ ಗೊತ್ತಾಗುತ್ತದೆ ಎಂದು ಡಾ. ಜಿ. ಪರಮೇಶ್ವರ್‌ ವಿವರಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸಲಾಗುತ್ತದೆ. ಯಾವುದೇ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಸದ್ಯ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಯನ್ನು ನಡೆಸುತ್ತಿದೆ. ತನಿಖೆ ನಡೆಯುತ್ತಿರುವಾಗ ನಾನು ಹೇಳಿಕೆ ಕೊಡುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಬಿಜೆಪಿಗೆ ಸೋಲಿನ ಭಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್‌, ಬಿಜೆಪಿ ನಾಯಕರಿಗೆ ಸೋಲಿನ ಭಯ ಶುರುವಾಗಿದೆ. ಅದಕ್ಕೆ ಪದೇ ಪದೆ ಈ ರೀತಿ ಹೇಳುತ್ತಿದ್ದಾರೆ. ಫಲಿತಾಂಶ ಬಂದ ಮೇಲೆ ನೋಡೋಣ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

ಮೈಸೂರಿನ ಕೆ.ಆರ್. ನಗರದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ (HD Revanna) ಅವರು ಕಳೆದ ಮೂರು ದಿನಗಳಿಂದಲೂ ಕುಟುಂಬಸ್ಥರನ್ನು ಭೇಟಿಯಾಗದೆ ಪರದಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ (ಮೇ 12) ಬೆಳಗ್ಗೆ ವೆಜ್‌ ಪಲಾವ್‌ ಸೇವಿಸಿದ ರೇವಣ್ಣ, ಕಾಫಿ ಕುಡಿದು, ಪೇಪರ್‌ ಓದಿದ್ದಾರೆ. ಕುಟುಂಬಸ್ಥರು, ಆಪ್ತರನ್ನು ಭೇಟಿಯಾಗದ ಕಾರಣ ಪತ್ರಿಕೆಯೇ ಅವರಿಗೆ ಸಂಗಾತಿಯಾದಂತಾಗಿದೆ. ಇದರ ಮಧ್ಯೆಯೇ, ರೇವಣ್ಣ ಅವರಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಚ್‌.ಡಿ.ರೇವಣ್ಣ ಅವರು ಯಾರನ್ನೂ ಭೇಟಿಯಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಜೈಲಿನ ಬ್ಯಾರಕ್‌ನಲ್ಲಿ ಕೆಲ ಹೊತ್ತು ವಾಕ್‌ ಮಾಡಿದ ರೇವಣ್ಣ, ಬಳಿಕ ದೀರ್ಘ ಅವಧಿಗೆ ಪೇಪರ್‌ ಓದುತ್ತಲೇ ಕುಳಿತಿದ್ದರು ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ. ರೇವಣ್ಣ ಅವರು ಸೋಮವಾರ (ಮೇ 13) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅವರು ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

ಲೈಂಗಿಕ ದೌರ್ಜನಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸಲ್ಲಿಸಿದ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ಜಾಮೀನು ನೀಡದೆ ಮೇ 13ಕ್ಕೆ ವಿಚಾರಣೆ ಮುಂದೂಡಿತ್ತು. ಹಾಗಾಗಿ, ಸೋಮವಾರ ಮತ್ತೆ ವಿಚಾರಣೆ ನಡೆಯಲಿದ್ದು, ರೇವಣ್ಣ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.

Exit mobile version