ಮಂಗಳೂರು: ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೆವು. ಈ ವರ್ಷವೂ ಅಭಿಯಾನವನ್ನು ಮುಂದುವರಿಸುತ್ತಿದ್ದೇವೆ. ʼಜಟ್ಕಾ ಕಟ್ ಮುಂದುವರಿಸಿ-ಹಲಾಲ್ ಕಟ್ ಬಹಿಷ್ಕರಿಸಿʼ (Boycott Halal) ಅಭಿಯಾನ ಮಾಡುತ್ತಿದ್ದೇವೆ. ಹಲಾಲ್ ಇಸ್ಲಾಂನದ್ದು, ಹಿಂದುಗಳಿಗೆ ಸಂಬಂಧಿಸಿರುವುದಲ್ಲ. ಮುಸ್ಲಿಮರು ಹಿಂದುಗಳು ಕತ್ತರಿಸಿದ ಮಾಂಸ ತಿನ್ನುವುದಿಲ್ಲ. ನಾವು ಯಾಕೆ ಅವರ ಹಲಾಲ್ ಮಾಂಸ ತಿನ್ನಬೇಕು. ಹೀಗಾಗಿ ಹಿಂದುಗಳು ಹಲಾಲ್ ಕಟ್ ಬಹಿಷ್ಕರಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಮ್-ಉಲೇಮಾ ಟ್ರಸ್ಟ್‌ಗೆ ಎರಡು ಲಕ್ಷ ಕೋಟಿ ರೂಪಾಯಿ ಆದಾಯವಿದೆ. ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ? ಹಲಾಲ್‌ನ ದುಡ್ಡು ಟೆರರಿಸ್ಟ್‌ಗಳಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ 5 ಲಕ್ಷ ರೂಪಾಯಿ ನೀಡಿದೆ. ರಾಜ್ಯದಲ್ಲಿ ನಡೆದ ಗಲಭೆಯ ಹಿಂದೆ ಹಲಾಲ್ ಹಣವಿದೆ. ಹಲಾಲ್ ಸೇವಿಸಿ ಹಿಂದುಗಳು ಹಿಂದುಗಳ ವಿರುದ್ಧವೇ ಷಡ್ಯಂತ್ರಕ್ಕೆ ಕಾರಣವಾಗುತ್ತಿದ್ದೇವೆ ಎಂದರು.
ಸಚಿವ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ
ಹಿಂದು ಸಂಘಟನೆಯ ಕಾರ್ಯಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಡೆಗಣಿಸಿದ್ದಾರೆ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್, ಸಚಿವ ಸುನಿಲ್ ಕುಮಾರ್ ಈ ಸ್ಥಾನಕ್ಕೇರಲು ಕೇಸರಿ ಶಾಲು, ಹಿಂದುತ್ವ ಕಾರಣ. ರಾಮಮಂದಿರ ಹಿಂದುತ್ವದ ಪ್ರತೀಕ, ವಿಜಯದ ಸಂಕೇತ. ಹಿಂದುತ್ವ ಎಂದರೆ ದುಡ್ಡು ಮಾಡುವುದು, ಸೊಕ್ಕು ತೋರಿಸುವುದಲ್ಲ. ಹಿಂದು ಕಾರ್ಯಕರ್ತರನ್ನು ಕಡೆಗಣಿಸಿರುವ ಸುನಿಲ್ ಕುಮಾರ್‌ಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಕೇಸರಿ ಶಾಲು ಹಾಕಿ ದತ್ತಪೀಠಕ್ಕೆ ಹೋರಾಟ ಮಾಡಿರುವುದು ಮರೆತು ಹೋಯ್ತಾ? ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Tipu Sultan: ಉರಿಗೌಡ-ನಂಜೇಗೌಡ ಕಾಲ್ಪನಿಕ ಅಲ್ಲ; ಸ್ವಾಮೀಜಿ ಹೇಳಿದ್ದು ಸಿನಿಮಾಗೆ ಸೀಮಿತ ಎಂದ ಸಚಿವ ಆರ್. ಅಶೋಕ್
ಬ್ರಹ್ಮಾಂಡ ಭ್ರಷ್ಟಾಚಾರದ 3ನೇ ಭಾಗ ಬಿಚ್ಚಿಡುವೆ
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಗೋಕಳ್ಳತನ ಕಾರ್ಕಳದಲ್ಲಿ ನಡೆದಿದೆ. ಹಿಂದು ಸಂಘಟನೆಗಳ 300ಕ್ಕೂ ಅಧಿಕ ಕಾರ್ಯಕರ್ತರ ಮೇಲೆ ಕೇಸ್‌ಗಳಿವೆ, ಇನ್ನೂ ವಾಪಸ್ ಪಡೆದುಕೊಂಡಿಲ್ಲ. 26 ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಹಿಂದುಗಳ ಮೇಲಿನ ಕೇಸ್‌ಗಳನ್ನು ಕಾರ್ಕಳದಲ್ಲಿ ಹಿಂದೆ ತೆಗೆದುಕೊಂಡಿಲ್ಲ. ಸುನಿಲ್ ಕುಮಾರ್ ಬ್ರಹ್ಮಾಂಡ ಭ್ರಷ್ಟಾಚಾರದ ಮೂರನೇ ಭಾಗವನ್ನು ನಾಳೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ.