ಶಿವಮೊಗ್ಗ: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ (Pratibha Karanji) ಕಾರ್ಯಕ್ರಮವು ಜ.7ರಿಂದ 9ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ (ಜ.೫) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.7ರಂದು ಕುವೆಂಪು ರಂಗಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಉಸ್ತುವಾರಿ ಸಚಿವರು, ಸಂಸದರು ಜಿಲ್ಲೆಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು, ಇಲಾಖೆಯ ಎಲ್ಲ ಅಧಿಕಾರಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ / ಕಲೋತ್ಸವ ಕಾರ್ಯಕ್ರಮದಲ್ಲಿ ೮ರಿಂದ ೧೨ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಜಿಲ್ಲಾ ಮಟ್ಟದಲ್ಲಿ ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ ೨೩ ಸ್ಪರ್ಧೆಗಳು ಹಾಗೂ ಸಾಮೂಹಿಕ ವಿಭಾಗದಲ್ಲಿ ೩ ಸ್ಪರ್ಧೆಗಳು ಶಿವಮೊಗ್ಗ ನಗರದ ಡಿ.ವಿ.ಎಸ್ ವಿದ್ಯಾ ಸಂಸ್ಥೆ ಹಾಗೂ ಕುವೆಂಪು ರಂಗಮಂದಿರದಲ್ಲಿ ನಡೆಯಲಿವೆ. ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು ೧೩೦೦ ವಿದ್ಯಾರ್ಥಿಗಳು ಹಾಗೂ ೧೦೦ ಜನ ಮೇಲ್ವಿಚಾರಕರು ಭಾಗವಹಿಸಲಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದ ಪ್ರತಿ ಸ್ಪರ್ಧೆಗೆ ೩ ಜನರಂತೆ ಒಟ್ಟು ೭೮ ತೀರ್ಪುಗಾರರನ್ನು ನೇಮಿಸಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ | Bengaluru-Mysuru Expressway ವೈಮಾನಿಕ ಸಮೀಕ್ಷೆ ಕೈಗೊಂಡ ಕೇಂದ್ರ ಸಚಿವ ಗಡ್ಕರಿ
ವಸತಿ ವ್ಯವಸ್ಥೆ
ಸ್ಪರ್ಧಾರ್ಥಿಗಳಿಗೆ ಮತ್ತು ಮೇಲ್ವಿಚಾರಕರಿಗೆ ಶಿವಮೊಗ್ಗ ನಗರದ ಮೂಲಭೂತ ಸೌಕರ್ಯಗಳನ್ನು ಹೊಂದಿದ ೨೧ ವಸತಿ ಸಮುದಾಯ ಭವನ ಹಾಗೂ ಶಾಲೆಗಳನ್ನು ನಿಗದಿಗೊಳಿಸಲಾಗಿದ್ದು, ಬಾಲಕರಿಗೆ ೮, ಬಾಲಕಿಯರಿಗೆ ೭ ಎಂದು ಕಾಯ್ದಿರಿಸಲಾಗಿದೆ. ತೀರ್ಪುಗಾರರಿಗೆ ಹಾಗೂ ನೋಡಲ್ ಅಧಿಕಾರಿಗಳಿಗೆ ಅಗಮುಡಿ ಮತ್ತು ಚೈತನ್ಯ ಸಮುದಾಯ ಭವನ (ಮಹಿಳೆಯರಿಗೆ) ವೀರಶೈವ ಸಾಂಸ್ಕೃತಿಕ ಭವನ, ವೀರಶೈವ ಸಮುದಾಯ ಭವನ, ಭೋವಿ ಸಮುದಾಯ ಭವನ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಸಮುದಾಯ ಭವನ(ಪುರುಷರಿಗೆ) ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಸಾರಿಗೆ ವ್ಯವಸ್ಥೆ
ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾರ್ಥಿಗಳಿಗಾಗಿ ಸ್ಥಳೀಯ ಶಾಲೆಗಳ ಸುಸಜ್ಜಿತವಾದ ೨೭ ಶಾಲಾ ಬಸ್‌ಗಳನ್ನು ನಿಗದಿಗೊಳಿಸಲಾಗಿದ್ದು, ಪ್ರತಿಯೊಂದು ಶಾಲಾ ಬಸ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಈ ನೋಡಲ್ ಅಧಿಕಾರಿಗಳು ಬೇರೆ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಿಗಳು ಹಾಗೂ ಮೇಲ್ವಿಚಾರಕರನ್ನು ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರು ಆಗಮಿಸುವ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಹಾಜರಿದ್ದು, ಸಂಬಂಧಿಸಿದ ವಸತಿ ನಿಲಯಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಭೋಜನ ವ್ಯವಸ್ಥೆ
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಗಮಿಸುವ ಎಲ್ಲ ಸ್ಪರ್ಧಾರ್ಥಿಗಳಿಗೆ, ಮೇಲ್ವಿಚಾರಕರಿಗೆ, ತೀರ್ಪುಗಾರರಿಗೆ ಮತ್ತು ಸ್ವಯಂ ಸೇವಕರಿಗೆ ಊಟ ಹಾಗೂ ತಿಂಡಿಗಳಿಗೆ ಜ.6ರ ರಾತ್ರಿಯಿಂದ ಜ.9 ರ ಮಧ್ಯಾಹ್ನದವರೆಗೆ ಊಟ ಹಾಗೂ ತಿಂಡಿಯ ವ್ಯವಸ್ಥೆಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಪರ್ಧೆಗಳು ನಡೆಯುವ ಡಿ.ವಿ.ಎಸ್. ಆವರಣದಲ್ಲಿ ವ್ಯವಸ್ಥಿತವಾಗಿ 10 ಕೌಂಟರ್‌ಗಳನ್ನು ತೆರೆದು, ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಜ.6ರ ರಾತ್ರಿ 1೦೦೦ ಜನಕ್ಕೆ ಊಟ ವ್ಯವಸ್ಥೆ ಮಾಡಲಾಗಿದ್ದು, ಶಾವಿಗೆ ಪಾಯಸ, ಅನ್ನ-ಸಾಂಬಾರು, ಮೊಸರು & ಪಲ್ಯ ಇರಲಿದೆ. ಜ.7ರ ಬೆಳಗ್ಗೆ 2೦೦೦ ಜನಕ್ಕೆ ಕೇಸರಿ ಬಾತ್, ಉಪ್ಪಿಟ್ಟು, ಟೀ & ಕಾಫಿ, ಮಧ್ಯಾಹ್ನ 2೦೦೦ ಜನಕ್ಕೆ ರೊಟ್ಟಿ & ಎಣ್ಣೆಗಾಯಿ ಪಲ್ಯ, ಹೋಳಿಗೆ & ತುಪ್ಪ, ಪಲಾವ್ & ಮೊಸರು ಬಜ್ಜಿ, ಅನ್ನ & ಹುರುಳಿಕಟ್ಟು ಸಾರು, ತಿಳಿಸಾರು ಹಾಗೂ ಮೊಸರು, ರಾತ್ರಿ ೧೮೦೦ ಜನಕ್ಕೆ ಊಟ , ಗೋಧಿಕಡಿ ಪಾಯಸ, ಅನ್ನ & ಸಾಂಬಾರು, ಮಜ್ಜಿಗೆ ಕೊಡಲಾಗುತ್ತದೆ. ಜ.8ರ ಬೆಳಗ್ಗೆ ೧೮೦೦ ಜನಕ್ಕೆ ಪೂರಿ & ಸಾಗು, ಸಿಹಿ ಪೊಂಗಲ್, ಟೀ & ಕಾಫಿ, ಮಧ್ಯಾಹ್ನ ೧೫೦೦ ಜನಕ್ಕೆ ಕಜ್ಜಾಯ, ಮೊಸರನ್ನ, ಕೂರ್ಮ, ಆಂಧ್ರ ಪಪ್ಪು, ಕಡ್ಲೆಬೇಳೆ ಪಾಯಸ, ಅನ್ನ, ತಿಳಿ ಸಾರು, ಮೊಸರು, ರಾತ್ರಿ ೮೦೦ ಜನಕ್ಕೆ ಊಟ – ಹೆಸರುಬೇಳೆ, ಪಾಯಸ, ಅನ್ನ, ಸಾಂಬಾರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ | Asia Cup | ಏಷ್ಯಾಕಪ್; ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಂಡ ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನ!
ವೇದಿಕೆಯ ಸಿದ್ಧತೆ
ಉದ್ಘಾಟನಾ ಸಮಾರಂಭವನ್ನು ನಗರದ ಕುವೆಂಪು ರಂಗ ಮಂದಿರದಲ್ಲಿ ನಡೆಸಲು ತೀರ್ಮಾನಿಸಿ ಈಗಾಗಲೇ ವೇದಿಕೆ ನಿರ್ಮಾಣದ ಎಲ್ಲ ರೂಪು-ರೇಷೆೆಗಳನ್ನು ಅಂತಿಮಗೊಳಿಸಲಾಗಿರುತ್ತದೆ. ಕುವೆಂಪು ರಂಗ ಮಂದಿರದಲ್ಲಿ ಒಂದು ಹಾಗೂ ಡಿ.ವಿ.ಎಸ್. ಶಾಲಾ ಆವರಣದಲ್ಲಿ ಮೂರು ವೇದಿಕೆಗಳನ್ನು ಸಿದ್ಧಪಡಿಸಲು ತೀರ್ಮಾನಿಸಿದೆ. ಸ್ಪರ್ಧೆಗಳು ನಡೆಯವ ಪ್ರತಿ ಕೊಠಡಿಗಳಲ್ಲಿ ವೇದಿಕೆಗಳನ್ನು ನಿರ್ಮಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಸಂಪರ್ಕ ಅಧಿಕಾರಿಗಳು
ಬೇರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ೫ ಜಿಲ್ಲೆಗಳಿಗೆ ಒಬ್ಬರಂತೆ ೭ ಜನ ಸಂಪರ್ಕಾಧಿಕಾರಿಗಳನ್ನು ನೇಮಿಸಿದ್ದು, ಈಗಾಗಲೇ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಪೂರ್ಣಗೊಂಡ ಎಲ್ಲ ಜಿಲ್ಲೆಗಳಿಂದ ಸ್ಪರ್ಧಿಗಳ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಿ ಕ್ರೋಢೀಕರಿಲಾಗಿದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪೂರ್ಣಗೊಳ್ಳುವವರಗೆ ಸಂಬಂಧಿಸಿದ ಜಿಲ್ಲೆಗಳ ಮೇಲ್ವಿಚಾರಕರು ಹಾಗೂ ಸ್ಪರ್ಧಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯಾವುದೇ ಕುಂದುಕೊರತೆಗಳು ಆಗದಂತೆ ಕ್ರಮವಹಿಸಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ೧೯ ಸಮಿತಿಗಳನ್ನು ರಚಿಸಿದ್ದು, ಈಗಾಗಲೇ ಪೂರ್ಣ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಂಡಿರುತ್ತಾರೆ ಎಂದರು.
ಇದನ್ನೂ ಓದಿ | Karnataka politics | ಹೌದು, ಸಿಎಂ ಬೊಮ್ಮಾಯಿ ಆರು ಕೋಟಿ ಜನರ ನಿಯತ್ತಿನ ನಾಯಿ ಎಂದ ಸಚಿವ ಸುಧಾಕರ್!
ನೋಂದಣಿ
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾರ್ಥಿಗಳನ್ನು ಹಾಗೂ ತೀರ್ಪುಗಾರರನ್ನು ನೋಂದಣಿ ಮಾಡಿಕೊಳ್ಳಲು ಒಟ್ಟು ೮ ಕೌಂಟರ್‌ಗಳನ್ನು ತೆರೆಯಲು ಪೂರ್ವಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ಜಿಲ್ಲೆಗೆ ಇಬ್ಬರು ಶಿಕ್ಷಕರಂತೆ ನೋಂದಣಿ ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲಾವಾರು ಪ್ರತ್ಯೇಕ ನೋಂದಣಿ ಕೌಂಟರ್‌ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ. 6ರಿಂದಲೇ ನೋಂದಣಿ ಕಾರ್ಯ ಹಾಗೂ ಆಗಮಿಸುವ ಎಲ್ಲ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವಿಶಾಲವಾದ ಶಾಮಿಯಾನ ಹಾಗೂ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಾದೂ ಪ್ರದರ್ಶನ ಕಾರ್ಯಕ್ರಮ
ಜ.7 ರಂದು ಸಂಜೆ ೬.೩೦ ಗಂಟೆಯಿಂದ ಕುವೆಂಪು ರಂಗ ಮಂದಿರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರಶಾಂತ್ ಹೆಗ್ಡೆ ಅವರ ಮ್ಯಾಜಿಕ್ ವಿಸ್ಮಯ ತಂಡದಿಂದ ಜಾದೂ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪ್ರಕಾಶ್, ಡಿಡಿಪಿಐ ಪರಮೇಶ್ವರಪ್ಪ, ಶಿಕ್ಷಣಾಧಿಕಾರಿ ಲೋಕೇಶಪ್ಪ ಇತರರು ಇದ್ದರು.
ಇದನ್ನೂ ಓದಿ | Illegal cash found : ವಿಧಾನಸೌಧದಲ್ಲಿ 10 ಲಕ್ಷ ಪತ್ತೆ; 40% ಕಮಿಷನ್‌ಗೆ ಇನ್ನೇನು ಸಾಕ್ಷಿ ಬೇಕು: ಡಿಕೆಶಿ ಪ್ರಶ್ನೆ