Site icon Vistara News

Praveen Nettaru | ಪ್ರವೀಣ್‌ ಮನೆಗೆ ಹೋದ ಕಾಂಗ್ರೆಸ್‌ ನಾಯಕರಿಗೆ ತೀವ್ರ ತರಾಟೆ, ಧಿಕ್ಕಾರದ ಕೂಗು

Congress praveen

ಬೆಳ್ಳಾರೆ(ಸುಳ್ಯ ತಾಲೂಕು, ದಕ್ಷಿಣ ಕನ್ನಡ): ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಹೋದ ಕಾಂಗ್ರೆಸ್‌ ನಿಯೋಗ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಮನೆಯ ಸದಸ್ಯರು, ಊರಿನವರು ಎಲ್ಲರೂ ಸೇರಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಧಿಕ್ಕಾರವನ್ನೂ ಕೂಗಿ ವಾಪಸ್‌ ಕಳುಹಿಸಿದ್ದಾರೆ.

ಕಾಂಗ್ರೆಸ್‌ ಎಂಎಲ್‌ಸಿ ಬಿ.ಕೆ ಹರಿಪ್ರಸಾದ್‌, ಮಾಜಿ ಸಚಿವ ರಮಾನಾಥ ರೈ, ಶಕುಂತಲಾ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಭಾನುವಾರ ಮಧ್ಯಾಹ್ನ ಪ್ರವೀಣ್‌ ನೆಟ್ಟಾರ್‌ ಅವರ ಮನೆಗೆ ಹೋಗಿದ್ದರು. ಈ ವೇಳೆ ಮನೆಯ ಮಂದಿ ಏನೂ ಮಾತನಾಡಲಿಲ್ಲ. ಅವರ ಕುಟುಂಬಿಕರು ಸೇರಿ ತರಾಟೆಗೆ ತೆಗೆದುಕೊಂಡರು.

ನಿಮಗೆ ಮನೆಗೆ ಬರಲು ಇವತ್ತು ದಿನ ಸಿಕ್ಕಿತಾ? ಏನು ಚಂದ ನೋಡ್ಲಿಕೆ ಬಂದದ್ದಾ ನೀವು? ನೀವು ಕಾಂಗ್ರೆಸ್‌ನವರು ಹಿಂದುತ್ವದವರನ್ನು ತೆಗೆಯಲು ಇರುವವರು, ನೀವು ಹಿಂದುತ್ವದವರನ್ನು ಎಷ್ಟು ಸಪೋರ್ಟ್‌ ಮಾಡ್ತೀರಿ? ಎಂದು ವ್ಯಕ್ತಿಯೊಬ್ಬರು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೊ ವೈರಲ್‌ ಆಗಿದೆ. ಒಂದು ಹಂತದಲ್ಲಿ ನಾಯಕರೊಬ್ಬರು ʻಮನೆಯವರು ಮಾತಾಡಲಿ.. ನೀವ್ಯಾಕೆ ಮಾತನಾಡುತ್ತೀರಿʼ ಎಂದು ಕೇಳಿದಾಗ ಆ ವ್ಯಕ್ತಿ ಇನ್ನಷ್ಟು ಕೆರಳುವುದು ಕಂಡುಬಂದಿದೆ.

ಮನೆಯ ಒಳಗೆ ನಾಯಕರು ಭೇಟಿ ಮಾಡುತ್ತಿದ್ದರೆ ಹೊರಗೆ ಸೇರಿದ ನೂರಾರು ಜನರು ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕೊಲೆಗಾರರಿಗೆ ಕೊನೆಗೆ ಜಾಮೀನು ನೀಡುವವರು ಕೂಡಾ ಕಾಂಗ್ರೆಸ್‌ನವರೇ ಎಂದು ಅವರೆಲ್ಲ ಜೋರಾಗಿ ಹೇಳುತ್ತಿದ್ದರು. ʻಇವರದೆಲ್ಲ ಮೊಸಳೆ ಕಣ್ಣೀರು” ಎಂದು ಕೆಲವರು ಹೇಳುತ್ತಿದುದು ಕೇಳಿಸಿದೆ. ಈ ನಡುವೆ, ಮನೆಯ ಸಮೀಪ ಎತ್ತರದ ಜಾಗದಲ್ಲಿ ನಿಂತು ಕೆಲವರು ಕಾಂಗ್ರೆಸ್‌ಗೆ ಧಿಕ್ಕಾರ ಎನ್ನುತ್ತಿರುವ ವಿಡಿಯೊ ಕೂಡಾ ಬಿಡುಗಡೆ ಆಗಿದೆ.

ಬಿಜೆಪಿ ವಿರುದ್ಧದ ಆಕ್ರೋಶ, ಕೈಗೆ ಲಾಭವಿಲ್ಲ!
ಪ್ರವೀಣ್‌ ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರು ಪಕ್ಷದ ನಾಯಕರ ವಿರುದ್ಧ ತೀವ್ರ ಆಕ್ರೋಶ ಹೊಂದಿರುವುದು ನಿಜವಾದರೂ ಅವರು ಬೇರೆ ಪಕ್ಷವನ್ನು ಬೆಂಬಲಿಸುವ ಸಾಧ್ಯತೆಗಳು ಕಡಿಮೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡ ರೀತಿಯಿಂದ ಇದು ಇನ್ನಷ್ಟು ಸ್ಪಷ್ಟವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕರನ್ನೂ ಇದೇ ರೀತಿಯಲ್ಲಿ ಜನರು ತರಾಟೆಗೆ ತೆಗೆದುಕೊಂಡಿದ್ದರು ಎನ್ನುವುದು ಕೂಡಾ ಗಮನಾರ್ಹ.

ಇದನ್ನೂ ಓದಿ| Praveen Murder ಬಳಿಕ ಕ್ಷೇತ್ರದಲ್ಲಿ ಓಡಾಡಲೂ ಹಿಂದೇಟು ಹಾಕುತ್ತಿರುವ ಬಿಜೆಪಿ ಶಾಸಕರು, ಮಂತ್ರಿಗಳು!

Exit mobile version