ಬೆಂಗಳೂರು: ಹಿಂದು ಸಮಾಜ ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲು, ಪ್ರವೀಣ್ ನೆಟ್ಟಾರು (Praveen Nettaru) ಅವರನ್ನು ಕೊಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಈ ಸರ್ಕಾರದಲ್ಲಿ ಮುಂದುವರಿಯುತ್ತೇನೆ. ಇಲ್ಲವಾದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಪ್ರವೀಣ್ ನೆಟ್ಟೂರು ಹತ್ಯೆಗೆ ಟ್ಟಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಅವರು, ಪದೇಪದೆ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿರುವುದರಿಂದ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಬರ್ಬರ ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ನಡುರಸ್ತೆಯಲ್ಲಿ ಎನ್‌ಕೌಂಟರ್ ಮಾಡಬೇಕು. ಹಿಂದು ಕಾರ್ಯಕರ್ತರ ಹತ್ಯೆಗಳು ಇಲ್ಲಿಗೆ ಕೊನೆಯಾಗಬೇಕು. ದುಷ್ಕರ್ಮಿಗಳು ಭಯ ಬೀಳುವ ರೀತಿಯಲ್ಲಿ ಕಠಿಣ ಶಿಕ್ಷೆ ನೀಡಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರವೀಣ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದ ರೇಣುಕಾಚಾರ್ಯ, ಈ ಬರ್ಬರ ಹತ್ಯೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕವಾಗಿ ₹1 ಲಕ್ಷ ರೂ. ಧನಸಹಾಯ ನೀಡಲಿದ್ದೇನೆ. ನಾವು ಎಷ್ಟು ಕೊಟ್ಟರೂ ಪ್ರವೀಣ್‌ರ ಜೀವ ವಾಪಸ್ ತರಲು ಸಾಧ್ಯವಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಆದರೆ ಪ್ರವೀಣ್ ಕುಟುಂಬದ ದುಃಖದಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Praveen Nettaru | ಜನಸಾಗರ ನಡುವೆ ಪ್ರವೀಣ್ ಅಂತ್ಯ ಸಂಸ್ಕಾರ, ಮುಗಿಲು ಮುಟ್ಟಿದ ಆಕ್ರಂದನ