ಪುತ್ತೂರು: ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದ್ದರೂ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯುತ್ತಿರುವ ಬಗ್ಗೆ ವ್ಯಕ್ತವಾಗುತ್ತಿರುವ ಆಕ್ರೋಶಕ್ಕೆ ಪ್ರವೀಣ್ ಕುಟುಂಬದ ಬಂಧುಗಳೂ ಧ್ವನಿಗೂಡಿಸಿದ್ದಾರೆ.
ಸುಳ್ಳಯ ತಾಲೂಕಿನ ನೆಟ್ಟಾರಿನಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ಅವರ ಮೇಲೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ೯ ಗಂಟೆಯ ಹೊತ್ತಿಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಅವರು ಪುತ್ತೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಂಗಳವಾರ ರಾತ್ರಿ ಕೊಲೆ ನಡೆದಿದ್ದರೂ ಬುಧವಾರ ಬೆಳಗ್ಗೆ ೯ ಗಂಟೆವರೆಗೂ ಹಿರಿಯ ಬಿಜೆಪಿ ನಾಯಕರು ಸ್ಥಳಕ್ಕಾಗಲೀ, ಆಸ್ಪತ್ರೆಗಾಗಲೀ ಬಂದಿಲ್ಲ ಎಂಬ ಅಂಶ ಕುಟುಂಬದ ಸಿಟ್ಟಿಗೆ ಕಾರಣವಾಗಿದೆ.
ʻʻನಿನ್ನೆ ರಾತ್ರಿಯಿಂದ ಮೃತದೇಹ ಶವಾಗಾರದಲ್ಲಿದೆ. ನಾಯಕರು ಆಗಮಿಸಲು ಇಷ್ಟು ಹೊತ್ತು ಬೇಕಾ? ರಾತ್ರಿಯೇ ಮಾಹಿತಿ ಸಿಕ್ಕಿದರೂ ಕೆಲವು ನಾಯಕರು ಇನ್ನೂ ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಬಡವರು ಸತ್ತರೆ ನೀವು ತೋರಿಸುವ ಹಿಂದುತ್ವ ಇದುವೆನಾʼ ಎಂದು ಪ್ರವೀಣ್ ನೆಟ್ಟಾರು ಅವರ ಮಾವ ಜಯರಾಮ ಅವರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಬೆಳಗ್ಗೆ ೯ ಗಂಟೆ ಹೊತ್ತಿಗೆ ಅವರು ಪುತ್ತೂರು ಆಸ್ಪತ್ರೆ ಬಳಿ ಮಾತನಾಡಿದರು.
ಈ ನಾಯಕರು ಮೆರವಣಿಗೆಗೆ ಬರುವುದು ಬೇಕಾಗಿಲ್ಲ ಎಂದು ಹೇಳಿರುವ ಅವರು, ʻʻಅಂತಿಮ ಸಂಸ್ಕಾರ ನಡೆಸುವುದು ನಮಗೆ ಗೊತ್ತಿದೆ. ಯಾರೂ ಮೃತದೇಹದ ಜತೆಗೆ ಬರುವ ಅವಶ್ಯಕತೆ ಇಲ್ಲʼʼ ಎಂದು ಆಕ್ರೋಶದಿಂದ ಮಾತನಾಡಿದ್ದಾರೆ.
ಹಿರಿಯ ನಾಯಕರು ನೇರ ನೆಟ್ಟಾರಿನ ಮನೆಗೇ ಬರಲಿದ್ದಾರೆ ಎಂದು ಸ್ಥಳದಲ್ಲಿದ್ದ ಬಿಜೆಪಿ ನಾಯಕರು ಸಮಾಧಾನಪಡಿಸಿದ ಮೇಲೆ ಶವ ಮೆರವಣಿಗೆಗೆ ಕುಟುಂಬ ಸಮ್ಮತಿಸಿದೆ.
ಇದನ್ನೂ ಓದಿ | Praveen Murder| ಕೇಂದ್ರವೂ ನಮ್ಮದೇ, ರಾಜ್ಯವೂ ನಮ್ಮದೇ ಕೊನೆಗೆ ಸಾವೂ ನಮ್ಮದೇ: ಕಾರ್ಯಕರ್ತರ ಆಕ್ರೋಶ