Praveen Nettaru| ಕೊಲೆ ಸಂಚಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಭಾಗಿ ಆರೋಪ, ತನಿಖೆಗೆ ಆಗ್ರಹ
ಪುತ್ತೂರು (ದಕ್ಷಿಣ ಕನ್ನಡ): ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಮೂರನೇ ವ್ಯಕ್ತಿ ಅಬೀದ್ನನ್ನು ಕೇರಳದ ತಲಶ್ಶೇರಿಯಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಇದ್ದು ಪೊಲೀಸರು ಇನ್ನಷ್ಟೇ ಅಧಿಕೃತಗೊಳಿಸಬೇಕಾಗಿದೆ. ಈ ನಡುವೆ, ಈ ಕೊಲೆಯ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂಬ ಕೂಗು ಕೇಳಿಬಂದಿದೆ. ಅವುಗಳಲ್ಲಿ ಪ್ರಮುಖ ಹೆಸರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಬಾಲಕೃಷ್ಣ ಅವರದು.
ಬಾಲಕೃಷ್ಣ ಅವರು ಪ್ರವೀಣ್ ಹಂತಕರಿಗೆ ಮಾಹಿತಿ ನೀಡಿದ್ದಾರೆ, ಸಂಚುಕೋರರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಹಿಂದೂ ಸಂಘಟನೆಗಳ ಆರೋಪ. ಅವರನ್ನು ಕೂಡಲೇ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಶನಿವಾರ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಬೆಳ್ಳಾರೆಯಿಂದ ಮಂಗಳೂರಿನ ಎಸ್ಪಿ ಕಚೇರಿ ವರೆಗೆ
ಬೈಕ್ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಬಾಲಕೃಷ್ಣ ಅವರ ಮೇಲಿರುವ ಪ್ರಮುಖ ಆರೋಪಗಳು
1. ಬಾಲಕೃಷ್ಣ ಅವರಿಗೆ ಹತ್ಯೆಯ ಸುಳಿವು ಮೊದಲೇ ಇತ್ತು. ಹಾಗಾಗಿಯೇ ಅವರು ಘಟನೆ ನಡೆದು ಎರಡೇ ನಿಮಿಷದಲ್ಲಿ ಸ್ಥಳಕ್ಕೆ ಬಂದಿದ್ದಾರೆ.
2.. ಸಂಚು ರೂಪಿಸಿದವನು ಸವಣೂರಿನ ಝಾಕಿರ್. ಅವನಿಗೆ ಬಾಲಕೃಷ್ಣ ಅವರ ನೆರವು ಇತ್ತು.
3. ಪ್ರವೀಣ್ಗೆ ಹಿಂದೆ ಬೆದರಿಕೆ
ಬಂದಾಗ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸಿಲ್ಲ. ಬೈದು ಕಳುಹಿಸಿದ್ದರು.
4. ಗಾಯಾಳು ಪ್ರವೀಣ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಸರಕಾರಿ ೧೦೮ ಆಂಬ್ಯುಲೆನ್ಸ್ಗೆ ಕರೆ ಮಾಡದೆ
ಎಸ್ಡಿಪಿಐಗೆ ಸೇರಿದ ವಾಹನಕ್ಕೆ ಕರೆ ಮಾಡಿದ್ದು ಯಾಕೆ ಎನ್ನುವುದು ಹಿಂದೂ ಸಂಘಟನೆಗಳ ಪ್ರಶ್ನೆ.
ಹೀಗೆ ಹಲವು ಪ್ರಶ್ನೆ ಮತ್ತು ಅನುಮಾನಗಳನ್ನು ಮುಂದಿಟ್ಟು ತನಿಖೆಗೆ ಆಗ್ರಹಿಸಲಾಗಿದೆ. ಬಾಲಕೃಷ್ಣ ಅವರ ಹೆಸರು ಬೆಳ್ಳಾರೆಯಲ್ಲಿ ಸಾವಿನ ಮರುದಿನ ನಡೆದ ಲಾಠೀಚಾರ್ಜ್ನಲ್ಲೂ ಕೇಳಿಬಂದಿತ್ತು. ಹೀಗಾಗಿ ಅವರನ್ನು ಸದ್ಯ ಬೇರೆ ಠಾಣೆಗೆ ವರ್ಗಾಯಿಸಲಾಗಿದೆ. ಆದರೆ, ಬರೀ ವರ್ಗಾವಣೆ ಸಾಲದು. ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಹಿಂದು ಸಂಘಟನೆಗಳು ಒತ್ತಾಯಿಸಿವೆ.