ಮಂಗಳೂರು: ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವ ಮೋರ್ಚಾ (BJP Yuva Morcha) ಪದಾಧಿಕಾರಿ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಬಿಜೆಪಿ ಸರ್ಕಾರವು ಮಾನವೀಯತೆ ಆಧಾರದ ಮೇಲೆ ಉದ್ಯೋಗ ನೀಡಿ ಆದೇಶ ಹೊರಡಿಸಿತ್ತು.
ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಮಾನವೀಯ ದೃಷ್ಟಿಯಿಂದ ಬಸವರಾಜ ಬೊಮ್ಮಾಯಿ ಸರ್ಕಾರವು ತಾತ್ಕಾಲಿಕ ನೆಲೆಯ ನೇಮಕಾತಿ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನೂತನ ಕುಮಾರಿ ಕೆಲಸ ನಿರ್ವಹಿಸುತ್ತಿದ್ದರು. 2022ರ ಸೆ. 22ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಹೊಸ ಸರ್ಕಾರ ಬಂದ ಕೂಡಲೇ ನೆಟ್ಟಾರ್ ಪತ್ನಿ ನೂತನ ಕೆಲಸದಿಂದ ವಜಾ ಮಾಡಲಾಗಿದೆ.
ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿತ್ತು. ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ, 30,350 ರೂ. ವೇತನ ನಿಗದಿಪಡಿಸಲಾಗಿತ್ತು. ಇನ್ನು ಈ ಹುದ್ದೆಯ ಅವಧಿಯು ಈಗ ಇರುವ ಮುಖ್ಯಮಂತ್ರಿಗಳ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿತ್ತು. ಈಗ ಹೊಸ ಸರ್ಕಾರ ರಚನೆಯಾಗಿರುವುದರಿಂದ ಕೆಲಸದ ಅವಧಿ ಮುಕ್ತಾಯವಾಗಿದೆ.
ಇದನ್ನೂ ಓದಿ: Karnataka Cabinet expansion: ಭರ್ತಿ ಸಂಪುಟದೊಂದಿಗೆ ಅಗ್ನಿ ಪರೀಕ್ಷೆಗೆ ಇಳಿದ ಸಿದ್ದರಾಮಯ್ಯ!
ಬೈಕ್‌ನಲ್ಲಿ ಬಂದು ಹತ್ಯೆ ಮಾಡಿದ್ದ ದುಷ್ಕರ್ಮಿಗಳು
ಬೆಳ್ಳಾರೆಯಲ್ಲಿ ಹಿಂದು ಸಂಘಟನೆಯ ಸಕ್ರಿಯ ನಾಯಕರಾಗಿ ಗಮನ ಸೆಳೆದಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಸಂಬಂಧ ಪಿಎಫ್‌ಐ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆನ್ನಲಾದ 10ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಈ ನಡುವೆ, ಹಿಂದು ಕಾರ್ಯಕರ್ತರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ ಎಂದು ರಾಜ್ಯಾದ್ಯಂತ ಆಕ್ರೋಶವೂ ವ್ಯಕ್ತವಾಗಿತ್ತು. ಸದ್ಯ ಪ್ರಕರಣ ಸಂಬಂಧ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ