ಸುಳ್ಯ (ದಕ್ಷಿಣ ಕನ್ನಡ): ಕಳೆದ ವರ್ಷ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಹಿಂದು ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು (praveen nettaru) ಅವರ ಕನಸಿನ ಮನೆ ಸಾಕಾರವಾಗಿದೆ. ಗುರುವಾರ ಅದ್ಧೂರಿಯಾಗಿ ಗೃಹಪ್ರವೇಶ ಕಾರ್ಯಕ್ರಮ ನೆರವೇರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮನೆ ನಿರ್ಮಾಣವಾಗಿದೆ. 2022ರಲ್ಲಿ ನವೆಂಬರ್ 2ರಂದು ನಳಿನ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಈಗ ಗೃಹಪ್ರವೇಶ ನೆರವೇರಿದ್ದು, ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂದು ಬಿಜೆಪಿ ಸಂದೇಶ ನೀಡಿದೆ. ಹತ್ಯೆ ವೇಳೆ ಪಕ್ಷದ ವರ್ಚಸ್ಸಿಗೆ ಹಾನಿಯಾದರೂ ಕುಟುಂಬದ ಪರ ನಿಂತು ಡ್ಯಾಮೇಜ್ ಸರಿಪಡಿಸಿಕೊಳ್ಳಲು ಯತ್ನಿಸಿದೆ.
60 ಲಕ್ಷ ರೂಪಾಯಿ ವ್ಯಯ
2,700 ಚದರ ಅಡಿಯಲ್ಲಿ ಒಟ್ಟು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ. ಮನೆ ನಿರ್ಮಾಣದ ವೆಚ್ಚವನ್ನು ಪಕ್ಷ, ಸರ್ಕಾರ ಮತ್ತು ಯುವ ಮೋರ್ಚಾ ಭರಿಸಿದೆ. ಬಿಜೆಪಿಯಿಂದ 25 ಲಕ್ಷ ರೂ., ಸರ್ಕಾರದಿಂದ 25 ಲಕ್ಷ ರೂ. ಹಾಗೂ ಯುವ ಮೋರ್ಚಾದಿಂದ 15 ಲಕ್ಷ ರೂಪಾಯಿಯನ್ನು ಭರಿಸಲಾಗಿದೆ. ಅಲ್ಲದೆ, ಪ್ರವೀಣ್ ನೆಟ್ಟಾರ್ ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗುತ್ತಿದೆ ಎಂದು ಈ ಹಿಂದೆ ಕಟೀಲ್ ಹೇಳಿದ್ದರು. ಪ್ರವೀಣ್ ಪತ್ನಿಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿದೆ.
ಇದನ್ನೂ ಓದಿ: Karnataka Election : ಶಾಫಿ ಬೆಳ್ಳಾರೆ ಸ್ಪರ್ಧೆಗೆ ಪ್ರವೀಣ್ ನೆಟ್ಟಾರು ಮನೆಯವರ ವಿರೋಧ
2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಅದರ ಮರುದಿನ ನಡೆದ ಅಂತ್ಯಕ್ರಿಯೆಯ ವೇಳೆ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರನ್ನು ಅರ್ಧ ದಾರಿಯಲ್ಲೇ ತಡೆಯಲಾಗಿತ್ತು. ನಳಿನ್ ಕಟೀಲ್ ಮತ್ತು ಸುನೀಲ್ ಕುಮಾರ್ ಕಾರನ್ನು ಅಲುಗಾಡಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ನಾಯಕರು ಮಾತ್ರ ಮನೆಯವರನ್ನು ಸಮಾಧಾನ ಮಾಡಿ ಈಗ ಮನೆ ಕಟ್ಟಿಕೊಟ್ಟಿದ್ದಾರೆ.