Site icon Vistara News

Karnataka Election 2023: ಹಾಸನದಲ್ಲಿ ನಾಮಪತ್ರ ಸಲ್ಲಿಸಿದ ಪ್ರೀತಂ ಗೌಡ ಪತ್ನಿ ಕಾವ್ಯಾ; ಒಂದೇ ಕ್ಷೇತ್ರದಲ್ಲಿ ಪತಿ-ಪತ್ನಿ ಉಮೇದುವಾರಿಕೆ

Preetham Gowda's wife Kavya files nomination in Hassan

Preetham Gowda's wife Kavya files nomination in Hassan

ಹಾಸನ: ಬಿಜೆಪಿ ಶಾಸಕ, ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರ ಪತ್ನಿ ಕಾವ್ಯಾ ಎಚ್‌.ಜಿ. ಅವರು ಕೂಡ ಹಾಸನ ವಿಧಾನಸಭೆ ಕ್ಷೇತ್ರದಲ್ಲಿಯೇ (Karnataka Election 2023) ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕು ಕಚೇರಿಗೆ ಬೆಂಬಲಿಗರೊಂದಿಗೆ ತೆರಳಿದ ಅವರು ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ಪ್ರೀತಂ ಗೌಡ ಅವರು ಭರ್ಜರಿ ರೋಡ್‌ ಶೋ ಮೂಲಕ ನಾಮಪತ್ರ ಸಲ್ಲಿಸಿದ್ದು, ಈಗ ಅವರ ಪತ್ನಿ ಕಾವ್ಯಾ ಎಚ್‌.ಜಿ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಪ್ರೀತಂ ಗೌಡ ನಾಮಪತ್ರ ತಿರಸ್ಕೃತಗೊಂಡರೆ ಎಂಬ ಮುಂಜಾಗ್ರತಾ ಕ್ರಮವಾಗಿ ಕಾವ್ಯಾ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಾಮಪತ್ರ ಸಲ್ಲಿಸಿದ ಕಾವ್ಯಾ

ಹಾಸನದಲ್ಲಿ ಭಾರಿ ಪೈಪೋಟಿ

ಕರ್ನಾಟಕದ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲಿ ಹಾಸನ ಕೂಡ ಒಂದಾಗಿದ್ದು, ಬಿಜೆಪಿಯ ಪ್ರೀತಂ ಗೌಡ ಹಾಗೂ ಜೆಡಿಎಸ್‌ನ ಎಚ್‌.ಪಿ. ಸ್ವರೂಪ್‌ ಮಧ್ಯೆ ತೀವ್ರ ಪೈಪೋಟಿ ಇದೆ. ಭವಾನಿ ರೇವಣ್ಣ ಅವರ ಬದಲಾಗಿ ಸ್ವರೂಪ್‌ ಅವರಿಗೆ ಟಿಕೆಟ್‌ ಕೊಟ್ಟ ಎಚ್‌.ಡಿ.ಕುಮಾರಸ್ವಾಮಿ ಅವರು ಇಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ.

ಹಾಸನದ ಟಿಕಟ್‌ ತನಗೇ ಬೇಕೆಂದು ಭವಾನಿ ರೇವಣ್ಣ ಅವರು ಹಠ ಹಿಡಿದಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರು ಮಾತ್ರ ಈ ಟಿಕೆಟ್‌ ಎಚ್‌.ಪಿ. ಸ್ವರೂಪ್‌ ಅವರಿಗೇ ಟಿಕೆಟ್‌ ಎಂದು ಸ್ಪಷ್ಟಪಡಿಸಿದ್ದರು. ದೇವೇಗೌಡರ ಕುಟುಂಬವೇ ಒಡೆದು ಹೋಗಬಹುದೇ ಎನ್ನುವಷ್ಟು ಗಂಭೀರ ತಿರುವುಗಳನ್ನು ಪಡೆದ ಪ್ರಕರಣದಲ್ಲಿ ಅಂತಿಮವಾಗಿ ಎಚ್‌.ಡಿ ಕುಮಾರಸ್ವಾಮಿ ನಿಲುವಿಗೆ ಜಯವಾಗಿತ್ತು. ಎಚ್‌.ಪಿ. ಸ್ವರೂಪ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿತ್ತು. ಎಚ್‌.ಡಿ. ರೇವಣ್ಣ ಅವರು ಸ್ವಲ್ಪ ಬೇಸರದಿಂದಲೇ ಈ ನಿರ್ಧಾರವನ್ನು ಸ್ವೀಕರಿಸಿದ್ದರು.

ಇದನ್ನೂ ಓದಿ: Karnataka Election 2023: ಕೊರಟಗೆರೆಯಲ್ಲಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲೆಸೆತ; ಕುಸಿದು ಬಿದ್ದ ಮಹಿಳಾ ಪೇದೆ

ಆದರೆ, ಬುಧವಾರ ನಡೆದ ವಿದ್ಯಮಾನ ಈ ಎಲ್ಲ ಸಿಟ್ಟು, ಬೇಸರಗಳನ್ನು ಕರಗಿಸಿದಂತೆ ಕಂಡಿತು. ಹಾಸನದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್‌ ಮತ್ತು ರೇವಣ್ಣರ ಅವರ ಕುಟುಂಬಿಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ರೇವಣ್ಣ ಹಾಗೂ ಭವಾನಿ ಅವರ ಬೆಂಬಲ ಪಡೆಯುವಲ್ಲಿ ಸ್ವರೂಪ್‌ ಯಶಸ್ವಿಯಾಗಿದ್ದು, ಚುನಾವಣೆ ಕದನ ರಂಗೇರಿದೆ.

Exit mobile version