ಬೆಂಗಳೂರು: ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಲಾಲ್‌ಬಾಗ್ (Lalbagh) ಫ್ಲವರ್ ಶೋ ಸ್ಥಗಿತಗೊಂಡಿತ್ತು. ಈ ಬಾರಿ ಮತ್ತೆ ಆರಂಭವಾಗುತ್ತಿದೆ. ಲಾಲ್‌ಬಾಗ್‌ಗೆ ಶಕ್ತಿಧಾಮದ 200ಕ್ಕೂ ಹೆಚ್ಚು ಮಕ್ಕಳು ಶುಕ್ರವಾರ (ಜು.29) ಭೇಟಿ ನೀಡಿ ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಪುಷ್ಪ ಪ್ರದರ್ಶನದ ಸಿದ್ಧತೆಯನ್ನು ವೀಕ್ಷಿಸಿದರು. ಅವರಿಗೆ ನಟ ಶಿವರಾಜಕುಮಾರ್ ಮತ್ತು ಪತ್ನಿ ಗೀತಾ ಸಾಥ್ ನೀಡಿದರು.
ಕಳೆದ ಎರಡು ವರ್ಷಗಳಿಂದ ಲಾಲ್‌ಬಾಗ್ ಕಳೆಗುಂದಿತ್ತು. ಈ ವರ್ಷ ವಿವಿಧ ಬಗೆಯ ಹೂವುಗಳಿಂದ ಶೋಗೆ ತಯಾರಿ ನಡೆಸಲಾಗಿದೆ. ಫ್ಲವರ್ ಶೋನ ಹೂವುಗಳಲ್ಲಿ ನಟ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ನಟ ಶಿವರಾಜ್ ಕುಮಾರ್ ಮಾತನಾಡಿ ʻʻಶಕ್ತಿಧಾಮದ ಮಕ್ಕಳನ್ನು ನಂದಿಹಿಲ್ಸ್‌ಗೆ ಕಳೆದ ಬಾರಿ ಕರೆದುಕೊಂಡು ಹೋಗಿದ್ದೆವು. ಈ ಬಾರಿ ಲಾಲ್‌ಬಾಗ್‌ಗೆ ಕರೆದುಕೊಂಡು ಬಂದಿದ್ದೇವೆ. ಜತೆಗೆ ಪ್ಲಾನಿಟೋರಿಯಂಗೂ ಕರೆದುಕೊಂಡು ಹೋಗುತ್ತೇವೆ. ಈ ಬಾರಿಯ ಪ್ಲವರ್ ಶೋನಲ್ಲಿ ಅಪ್ಪು ಹಾಗೂ ಅಪ್ಪಾಜಿ ಅವರಿಗೆ ಮಕ್ಕಳು ಪುಷ್ಪ ನಮನ ಸಲ್ಲಿಸಲಿದ್ದಾರೆ. ಪ್ಲವರ್ ಶೋ ನೋಡಲು ನಾನು ಕಾತುರನಾಗಿದ್ದೇನೆʼʼ ಎಂದು ಹೇಳಿದರು.
ಇದನ್ನೂ ಓದಿ | Lalbagh Flower Show | ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಈ ಬಾರಿ ರಾಜ್, ಪುನೀತ್ ಫೋಕಸ್
ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಆಶಯದಂತೆ ಶುರುವಾದ ‘ಶಕ್ತಿಧಾಮ’ ನೂರಾರು ಮಕ್ಕಳಿಗೆ ಆಶ್ರಯ ನೀಡಿ, ಅವರನ್ನು ಸಮಾಜದಲ್ಲಿ ಸಶಕ್ತರನ್ನಾಗಿ ಮಾಡಿದೆ.
ಆಗಸ್ಟ್ ೫ರಿಂದ ೧೫ರವರೆಗೆ ಫಲಪುಷ್ಪ ಪ್ರದರ್ಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಸೀಮಿತ ಫ್ಲವರ್ ಶೋ ಆಯೋಜಿಸಲಾಗಿತ್ತು. ಈ ಬಾರಿ ಡಾ. ರಾಜ್‌ಕುಮಾರ್ ಹಾಗು ಪುನೀತ್ ರಾಜ್‍ಕುಮಾರ್ ಅವರ ಕಲಾಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣವಾಗಲಿವೆ.
ಪ್ರವೇಶ ಶುಲ್ಕ ಏರಿಕೆ
ಈ ಬಾರಿ ಫಲಪುಷ್ಪ ಪ್ರದರ್ಶನ ವೇಳೆ ಲಾಲ್‌ಬಾಗ್ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ೭೦ ರೂ. ಇರುವ ದರ ೮೦ ರೂ.ಗೆ ಹೆಚ್ಚಿಸಲಾಗಿದೆ. ವಾರಾಂತ್ಯದಲ್ಲಿ ೧೦೦ ರೂಪಾಯಿಗೆ ಶುಲ್ಕ ಏರಿಕೆಯಾಗಿದೆ.
ಇದನ್ನೂ ಓದಿ | ಲಾಲ್‌ಬಾಗ್ ಪುಷ್ಪ ಪ್ರದರ್ಶನ | ಪುನೀತ್ ರಾಜಕುಮಾರ್ ಸ್ಮರಣೆಗೆ ಸರ್ಕಾರದ ಸಿದ್ಧತೆ