Site icon Vistara News

Maharaja Trophy ಅನಾವರಣ ಮಾಡಿದ KSCA

Maharaja trophy

ಬೆಂಗಳೂರು: ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸುವ ಗುರಿಯೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ಮೈಸೂರಿನ ಮಹಾರಾಜರು, ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ಶ್ರಿಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಮರಣಾರ್ಥ ಮಹಾರಾಜ ಟ್ರೋಫಿ ಟಿ20 (Maharaja Trophy) ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲಿದೆ. ಟೂರ್ನಿಯು ಆಗಸ್ಟ್‌ 7 ರಿಂದ ಆಗಸ್ಟ್‌ 26ರ ವರೆಗೆ ನಡೆಯಲಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಯ ಗೌರವ ಅಧ್ಯಕ್ಷ ರೋಜರ್‌ ಬಿನ್ನಿ, ಗೌರವ ಕಾರ್ಯದರ್ಶಿ ಸಂತೋಷ್‌ ಮೆನನ್‌ ಹಾಗೂ ಗೌರವ ಖಜಾಂಚಿ ವಿನಯ್‌ ಮೃತ್ಯುಂಜಯ ಅವರು ಶನಿವಾರ ಟ್ರೋಫಿ ಹಾಗೂ ಲಾಂಛನ ಬಿಡುಗಡೆ ಮಾಡಿದರು.

ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ರೋಜರ್‌ ಬಿನ್ನಿ “ಕ್ರಿಕೆಟ್‌ನ ಎಲ್ಲ ಹೊಸ ಮಾದರಿಯನ್ನು ಪರಿಚಯಿಸುವಲ್ಲಿ ಕೆಎಸ್‌ಸಿಎ ಮುಂಚೂಣಿಯಲ್ಲಿದ್ದು, 2005ರಲ್ಲಿ ಬ್ರಾಡ್ಮನ್‌ ಕಪ್‌ ನಡೆಸುವ ಮೂಲಕ ಭಾರತಕ್ಕೆ ಟಿ20 ಕ್ರಿಕೆಟ್‌ನ ರುಚಿ ಹಿಡಿಸಿತು. ಅದೇ ರೀತಿ 2009ರಲ್ಲಿ ಕರ್ನಾಟಕ ಪ್ರೀಮಿಯರ್‌ ಲೀಗ್‌ ಆರಂಭಿಸಿ ಎಂಟು ಯಶಸ್ವಿ ವರ್ಷಗಳನ್ನು ಪೂರೈಸಲಾಗಿದೆ. ಅಂತೆಯೇ ಈ ಬಾರಿ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಆಯೋಜಿಸುತ್ತಿದ್ದೇವೆ,” ಎಂದರು.

ಆರು ತಂಡಗಳ ಟೂರ್ನಿ

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ ಸೆಣಸಾಡಲಿವೆ. “ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಆಗಸ್ಟ್‌7 ರಂದು ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಮೊದಲ ಹಂತದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್‌ ಸೇರಿ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ,” ಎಂದು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಮೆನನ್‌ ಹೇಳಿದರು.

“35 ವರ್ಷ ವಯೋಮಿತಿಯ ಎಲ್ಲ ಶ್ರೇಷ್ಠ ದರ್ಜೆಯ ಕ್ರಿಕೆಟಿಗರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಆಟಗಾರರನ್ನು ಡ್ರಾಫ್ಟ್‌ ಮೂಲಕ ಆಯ್ಕೆ ಮಾಡಲಾಗುವುದು. ತಂಡಗಳಿಗೆ ನಾಯಕರು ಮತ್ತು ಉಪನಾಯಕರನ್ನು ಕೆಎಸ್‌ಸಿಎ ಶಿಫಾರಸು ಮಾಡಲಿದೆ. ಸಹಾಯಕ ಸಿಬ್ಬಂದಿಯನ್ನೂ ಕೂಡ ಕೆಎಸ್‌ಸಿಎ ನಿಯೋಜಿಸಲಿದೆ,” ಎಂದು ಮೆನನ್‌ ಹೇಳಿದರು.

ಟೂರ್ನಿ ಸ್ಟಾರ್‌ ಸ್ಪೋರ್ಟ್ಸ್‌2 ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡದಲ್ಲಿ ನೇರ ಪ್ರಸಾರವಾಗೊಳ್ಳಲಿದೆ. ಫ್ಯಾನ್‌ಕೋಡ್‌ ಆಪ್‌ನಲ್ಲಿಯೂ ನೇರಪ್ರಸಾರವಾಗಲಿದೆ.

“ಆಡುವ XI ಆಯ್ಕೆಯಲ್ಲಿ ಅಥವಾ ಆಟಕ್ಕೆ ಸಂಬಂಧಿಸಿದ ಇನ್ನಾವುದೇ ವಿಷಯದಲ್ಲಿ ತಂಡದ ಪ್ರಾಯೋಜಕರ ಹಸ್ತಕ್ಷೇಪ ಇರುವುದಿಲ್ಲ. ಎಲ್ಲ ವ್ಯಾವಹಾರಿಕ ಮತ್ತು ಕ್ರಿಕೆಟಿಗೆ ಸಂಬಂಧಿತ ಹಕ್ಕುಗಳು ಕೇವಲ ಕೆಎಸ್‌ಸಿಎಗೆ ಸೇರಿರುತ್ತದೆ,” ಎಂದು ವಿನಯ್‌ ಮೃತ್ಯುಂಜಯ ಹೇಳಿದ್ದಾರೆ.

ಕರ್ನಾಟಕ ಶ್ರೇಷ್ಠ ಕ್ರಿಕೆಟಿಗರಾದ ದೇವದತ್ತ ಪಡಿಕ್ಕಲ್‌, ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಮನೀಶ್‌ ಪಾಂಡೆ, ಜೆ. ಸುಚಿತ್‌, ಕರುಣ್‌ ನಾಯರ್‌, ಮಯಾಂಕ್‌ ಅಗರ್ವಾಲ್‌, ಅಭಿನವ್‌ ಮನೋಹರ್‌, ಕೆ.ಸಿ. ಕಾರಿಯಪ್ಪ, ಪ್ರವೀಣ್‌ ದುಬೆ ಮತ್ತು ಅಭಿಮನ್ಯು ಮಿಥುನ್‌ ಮಹಾರಾಜ ಟ್ರೋಫಿಯಲ್ಲಿ ಆಡುವ ನಿರೀಕ್ಷೆ ಇದೆ.

ಇದನ್ನೂ ಓದಿ | Commonwealth Games ; ಇದೇ ಮೊದಲ ಬಾರಿಗೆ ಮಹಿಳೆಯರ ಕ್ರಿಕೆಟ್‌, ಭಾರತ ತಂಡ ಪ್ರಕಟ

Exit mobile version