ಬೆಂಗಳೂರು: ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು (1 ರಿಂದ 7 ಮತ್ತು 1 ರಿಂದ 8ನೇ ತರಗತಿಗೆ ನೇಮಕವಾದವರು) ಅನ್ನು 6 ರಿಂದ 8ನೇ ತರಗತಿಗೆ ಸೇವಾ ಜ್ಯೇಷ್ಠತೆಯೊಂದಿಗೆ ವಿಲೀನಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶಿಕ್ಷಕರ ದಿನವಾದ ಸೆ.5ರಂದು ʼನಮ್ಮ ದಿನ, ನಮ್ಮ ಹಕ್ಕೋತ್ತಾಯ ಪತ್ರʼ ಅಭಿಯಾನ ನಡೆಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ. ಒಂದು ವೇಳೆ ಶಿಕ್ಷಕರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿವರೆಗೆ ಬೋಧನೆ ಬಹಿಷ್ಕರಿಸಲಾಗುತ್ತದೆ ಎಂದು ಸಂಘ (Teachers Association) ಎಚ್ಚರಿಕೆ ನೀಡಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಸಕರು, ಸಚಿವರ ಮೂಲಕ ಸಿಎಂ, ಡಿಸಿಎಂ, ಶಿಕ್ಷಣ ಸಚಿವರಿಗೆ ಕಡ್ಡಾಯವಾಗಿ ಹಕ್ಕೊತ್ತಾಯ ಪತ್ರ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸಂಘದ ಅಧ್ಯಕ್ಷ ಕೆ. ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ಮನವಿ ಮಾಡಿದ್ದಾರೆ. ಇದರ ಜತೆಗೆ ಸರ್ಕಾರಕ್ಕೆ ಕಳುಹಿಸಲು ಮಾದರಿ ಮನವಿ ಪತ್ರವನ್ನು ಸಂಘದಿಂದ ಬಿಡುಗಡೆ ಮಾಡಲಾಗಿದೆ.
ನಮ್ಮ ದಿನ, ನಮ್ಮ ಹಕ್ಕೊತ್ತಾಯ ಪತ್ರದಲ್ಲಿ ಏನಿದೆ?
ಈ ಮೂಲಕ ತಮ್ಮಲ್ಲಿ (ರಾಜ್ಯ ಸರ್ಕಾರಕ್ಕೆ) ನ್ಯಾಯಯುತವಾಗಿ ಒತ್ತಾಯಿಸುವುದೇನೆಂದರೆ, ಕರ್ನಾಟಕ ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವುದರ ಮೂಲಕ ದೇಶದಲ್ಲಿ ಮಾದರಿಗಳನ್ನು ನಿರ್ಮಿಸಿದೆ. ಕಾಲಕಾಲಕ್ಕೆ ಆಗುವ ಶೈಕ್ಷಣಿಕ ಬದಲಾವಣೆಗಳನ್ನು ನಮ್ಮ ರಾಜ್ಯದಲ್ಲೂ ಶಾಲಾ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1,88,540 ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ 1 ರಿಂದ 7 ಮತ್ತು 1 ರಿಂದ 8ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.
NCTE ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರವನ್ನು ಪತ್ರಸಂಖ್ಯೆ:434 2017ರ ಮೇ 20ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ 1,12,467 ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8ಕ್ಕೆ 51,781 ಎಂದು ಪದನಾಮೀಕರಿಸಿದೆ. ತತ್ಪರಿಣಾಮವಾಗಿ 2016ಕ್ಕಿಂತ ಮೊದಲು 1ರಿಂದ 7, 1 ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5 ಎಂದು ಪರಿಗಣಿಸಲಾಯಿತು.
2017ರ ಹೊಸ ವೃಂದಬಲ ನಿಗದಿಯಾಗುವವರೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ -2 ವೃಂದಕ್ಕೆ ನಿಯಮಿತವಾಗಿ ಬಡ್ತಿ ನೀಡುವಲ್ಲಿ ಯಾವುದೇ ಸಮಸ್ಯೆಗಳು ಇದ್ದಿರಲಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದಬಲ ನಿಗದಿಯಿಂದಾಗಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್ -2 ವೃಂದಕ್ಕೆ ಬಡ್ತಿ ನೀಡುವಾಗ ಗೊಂದಲಗಳು ಉಂಟಾಗಿದ್ದನ್ನು ನಮ್ಮ ಸಂಘಟನೆಯು ಬಲವಾಗಿ ತಿಳಿಸುತ್ತಾ ಬಂದಿದ್ದರೂ, ಅದನ್ನು ಪರಿಹರಿಸದೇ ಮುಂದೂಡುತ್ತಾ ಬರಲಾಗಿತ್ತು.
ಇದನ್ನೂ ಓದಿ | Teachers Day 2023: 31 ಮಂದಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾರಿಗೆಲ್ಲಾ ಗೌರವ?
1 ರಿಂದ 5 ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮಿಕರಿಸಿರುವ 2016ಕ್ಕಿಂತ ಮೊದಲು ನೇಮಕವಾದ 1 ರಿಂದ 7 ಮತ್ತು 1 ರಿಂದ 8 ವೃಂದದ ಪ್ರಾಥಮಿಕ ಶಾಲಾ ಸಹ ಶಿಕ್ಷಕರಲ್ಲಿ ಸುಮಾರು 80000ಕ್ಕೂ ಅಧಿಕ ಶಿಕ್ಷಕರು ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿದ್ದರೂ ಇವರನ್ನು 6 ರಿಂದ 8ಕ್ಕೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸದೇ ಇರುವುದು ದುರದೃಷ್ಟಕರ. ಇದರ ನಡುವೆ 2016ರಿಂದ ಇತ್ತೀಚೆಗೆ 8 ವೃಂದದ 14500 ಶಿಕ್ಷಕರ ನೇಮಕಾತಿಯಾಗಿದ್ದು, 6ರಿಂದ ತತ್ಪರಿಣಾಮದಿಂದಾಗಿ ಅಷ್ಟೇ ಸಂಖ್ಯೆಯ 1 ರಿಂದ 5 ವೃಂದದ ಶಿಕ್ಷಕರ ಹೆಚ್ಚುವರಿ ಸಮಸ್ಯೆ ಸೃಷ್ಟಿಯಾಗಿತ್ತು. ಅದೇ ರೀತಿ ವರ್ಗಾವಣೆ ಪ್ರಕ್ರಿಯೆಯಲ್ಲೂ ಈ ವೃಂದ ಬಲದ ನಿಗದಿ ಸ್ಥಳಗಳ ಆಯ್ಕೆಯಲ್ಲಿ ತೀವ್ರವಾಗಿ ಶಿಕ್ಷಕರಿಗೆ ಸಮಸ್ಯೆ ಸೃಷ್ಟಿಸಿದೆ.
ಇದರ ಜತೆಯಲ್ಲಿ ವೃಂದಬಲ ನಿಗದಿಯಿಂದ ಶ್ರೇಣಿ ವ್ಯತ್ಯಾಸವಾಗಿ ಶಿಕ್ಷಕರ ಮನೋಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮವಾದಾಗ್ಯೂ ಈಗಿನವರೆಗೂ 1 ರಿಂದ 5 ಶಿಕ್ಷಕ ವೃಂದದವರೆಂದು ಪರಿಗಣಿತವಾದ 1 ರಿಂದ 7 ಮತ್ತು 1 ರಿಂದ 8ಕ್ಕೆ ನೇಮಕಾತಿಯಾದ ಶಿಕ್ಷಕರು ಯಾವುದೇ ಆರ್ಥಿಕ ಸೌಲಭ್ಯ ಬಯಸದೇ 6 ರಿಂದ 8ನೇ ತರಗತಿ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ 1 ರಿಂದ 8ನೇ ತರಗತಿಗೆ ನೇಮಕವಾದ 14500 ಶಿಕ್ಷಕರು ಕೇವಲ 6 ರಿಂದ 8ನೇ ತರಗತಿ ಬೋಧನೆ ಮಾತ್ರ ಮಾಡುತ್ತಿದ್ದು, 1 ರಿಂದ 5ನೇ ತರಗತಿ ಬೋಧನೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ನಮ್ಮ 1 ರಿಂದ 7 ಮತ್ತು 1 ರಿಂದ 8ಕ್ಕೆ ನೇಮಕಾತಿಯಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಇಲಾಖೆಗೆ ಮುಜುಗರವಾಗದಂತೆ 1 ರಿಂದ 8ರವರೆಗಿನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
2018ರ ಮೇ 12ರಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡಿರುವ ತೀರ್ಪಿನನ್ವಯ 2017ರಿಂದ ಇಲ್ಲಿಯವರೆಗೆ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್ -2 ವೃಂದಕ್ಕೆ ಬಡ್ತಿ ಹೊಂದಿರುವ 1 ರಿಂದ 7 ಮತ್ತು 1 ರಿಂದ 8ನೇ ತರಗತಿಗೆ ನೇಮಕಾತಿ ಹೊಂದಿದ, ಆದರೆ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮದನ್ವಯ 1 ರಿಂದ 5 ಪ್ರಾಥಮಿಕ ಶಾಲಾ ಸಹ ಶಿಕ್ಷಕರೆಂದು ಪರಿಗಣಿತವಾಗಿರುವವರಿಗೆ ಹಿಂಬಡ್ತಿ ನೀಡಬೇಕೆಂದು ಆದೇಶಿಸಿರುವುದರಿಂದ 1 ರಿಂದ 5 ವೃಂದಕ್ಕೆ ನಿಗದಿಯಾಗಿರುವ ಸೇವಾನಿರತ ಶಿಕ್ಷಕ ವೃಂದಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಇದಕ್ಕೆ ಸರ್ಕಾರವು ಪೂರಕ ದಾಖಲೆಗಳನ್ನು ಒದಗಿಸಿದ್ದು, ಇದರಿಂದ ಪ್ರೌಢ ಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಮೇಲಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆಯು ಹಲವಾರು ಬಾರಿ ಇಲಾಖೆಗೆ ಮನವಿ, ಸಲಹೆಗಳನ್ನು ನೀಡಿಯೂ ಪ್ರಯೋಜನಕ್ಕೆ ಬಾರದೇ ಹೋಗಿರುವುದು ಬಹಳ ಬೇಸರದ ಸಂಗತಿ. ಈ ಎಲ್ಲಾ ಸಂಗತಿಗಳಿಗೆ ಇಲಾಖೆಯ ನೀತಿ ನಿಯಮಗಳಲ್ಲಿನ ಸಮನ್ವಯತೆಯ ಮತ್ತು ದೂರದರ್ಶಿತ್ವದ ಕೊರತೆ ಎದ್ದು ಕಾಣುತ್ತಿದೆ.
ಪ್ರಮುಖ ಹಕ್ಕೊತ್ತಾಯಗಳು
- ತಿದ್ದುಪಡಿಗೆ ಒಳಪಡುತ್ತಿರುವ 2017ರ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದ C&R (ವೃಂದ ಮತ್ತು ನೇಮಕಾತಿ ನಿಯಮ) ದಲ್ಲಿ 2016ಕ್ಕಿಂತ ಮೊದಲು ನೇಮಕಾತಿಯಾದ 1 ರಿಂದ 7, 1 ರಿಂದ 9ಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು “6 ರಿಂದ 8ಕ್ಕೆ ಪದನಾಮಿಕರಿಸಿ” ಸೇವಾ ಜೇಷ್ಠತೆಯೊಂದಿಗೆ ವಿಲೀನ ಮಾಡಿ ಸೇವೆಯನ್ನು ಸಂರಕ್ಷಿಸಿ ಆರ್ಥಿಕ ಸೌಲಭ್ಯಗಳನ್ನು ನೀಡುವುದು.
- ಪ್ರೌಢಶಾಲಾ ಸಹ ಶಿಕ್ಷಕರ C&Rನಲ್ಲಿ ತಿದ್ದುಪಡಿ ಮಾಡಿ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವ ಸಂದರ್ಭದಲ್ಲಿ 2016ಕ್ಕಿಂತ ಮೊದಲು 1 ರಿಂದ 7 ಮತ್ತು 1 ರಿಂದ 8ಕ್ಕೆ ನೇಮಕಾತಿಯಾದ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಪದವಿ ಬಿ.ಇಡಿ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿಗೆ ಈ ಹಿಂದಿನಂತೆ ಶೇಕಡ 50 ಬಡ್ತಿ ಬಗ್ಗೆ ಪರಿಗಣಿಸಲು ಅವಕಾಶ ನೀಡಬೇಕು.
- ಶಿಕ್ಷಕರ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ. ಪ್ರಾಥಮಿಕ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ (1ರಿಂದ 5 ಎಂದು ಪರಿಗಣಿತವಾಗಿರುವ ಶಿಕ್ಷಕರು) ಸಮಸ್ಯೆಗಳು ಎಷ್ಟಿದ್ದರೂ ಕಳೆದ ನಾಲೈದು ವರ್ಷಗಳಿಂದ 6 ರಿಂದ 8ನೇ ತರಗತಿ ನಿರ್ವಹಣೆ ಮಾಡುತ್ತಾ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮವಹಿಸುತ್ತಿದ್ದಾರೆ. ಆದರೂ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ. ಸಂಘಟನೆಯು ನಿರಂತರವಾಗಿ ಶಿಕ್ಷಕರೊಂದಿಗೆ ಸ್ಪಂದಿಸುತ್ತಿದ್ದು, ಇಲಾಖೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಾ ಪರಿಹರಿಸಲು ಬಹಳಷ್ಟು ಪ್ರಯತ್ನಿಸಿದೆ. ಇಲಾಖೆಯು ಮೇಲಿನ ಬೇಡಿಕೆಗಳನ್ನು, ಸಲಹೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು.
ಸರ್ಕಾರವು ನಮ್ಮ ಸಮಸ್ಯೆಗಳನ್ನು 1 ತಿಂಗಳ ಕಾಲಮಿತಿಯೊಳಗೆ ಪರಿಹರಿಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡದೇ ಹೋದರೆ ಸೇವಾನಿರತ ಪದವೀಧರ ಶಿಕ್ಷಕರನ್ನು (ಸುಮಾರು 80000ಕ್ಕೂ ಅಧಿಕ) ಒಳಗೊಂಡಂತೆ ರಾಜ್ಯವ್ಯಾಪಿ ಕೆಲಸ ನಿರ್ವಹಿಸುತ್ತಿರುವ ಸುಮಾರು 1,43,000 ಶಿಕ್ಷಕರು 6 ರಿಂದ ತರಗತಿ ಬೋಧನೆಯನ್ನು ಅನಿರ್ಧಿಷ್ಟಾವಧಿಯವರೆಗೆ ಬಹಿಷ್ಕರಿಸುವ ನಿರ್ಧಾರವನ್ನು ಸಂಘಟನೆಯು ತೆಗೆದುಕೊಳ್ಳುವ ಸಂದರ್ಭ ಒದಗಿಬರಬಹುದು ಎಂಬ ವಿಚಾರವನ್ನು ಸ್ಪಷ್ಟಪಡಿಸುತ್ತಾ, ಈ ಅಸಹಕಾರದ ಆಂದೋಲನಕ್ಕೆ ಸಂಘಟನೆಯು ಜವಾಬ್ದಾರಿಯಾಗಿರದೇ, ಇಲಾಖೆಯೇ ಆಸ್ಪದ ನೀಡಿದಂತಾಗುತ್ತದೆ ಎಂಬ ಅಂಶವನ್ನು ಮತ್ತೊಮ್ಮೆ ಶಿಕ್ಷಕರ ದಿನಾಚರಣೆಯ ದಿನ ಹಕ್ಕೊತ್ತಾಯ ಪತ್ರದ ಮೂಲಕ ಒತ್ತಾಯಿಸುತ್ತಿದ್ದೇವೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಗುರು ಅಂದರೆ ನಮ್ಮ Identity, ಯಾರ ಶಿಷ್ಯ ಅನ್ನೋದೇ ಒಂದು ಹೆಮ್ಮೆ
ವಿಶೇಷವಾಗಿ ಕರ್ನಾಟಕದಲ್ಲಿ ಎನ್‌ಇಪಿಯನ್ನು ರದ್ದುಗೊಳಿಸುತ್ತೇವೆ ಎಂಬ ಹಿನ್ನೆಲೆಯಲ್ಲಿ ಈ ಹಿಂದಿನಂತೆ 1 ರಿಂದ 7ನೇ ತರಗತಿಯನ್ನು (ಪ್ರಾಥಮಿಕ ಹಂತ), 8 ರಿಂದ 10ನೇ ತರಗತಿಯನ್ನು (ಪ್ರೌಢ ಹಂತ ), 11 ರಿಂದ 12ನೇ ತರಗತಿಯನ್ನು ಕಾಲೇಜು ಹಂತಗಳಾಗಿಯೇ ಮುಂದುವರಿಸುವ ಬಗ್ಗೆ ಕೂಡ ಸಂಘಟನೆಯೊಂದಿಗೆ ಚರ್ಚಿಸಬೇಕೆಂದು ಒತ್ತಾಯಿಸುತ್ತೇವೆ.
ಈ ಮೇಲಿನ ಪ್ರಮುಖ ಅಂಶಗಳು ಅತ್ಯಂತ ಗಂಭೀರವಾಗಿದ್ದು, ಸಾಧ್ಯವಾದಷ್ಟು ಬೇಗನೇ ಬಗೆಹರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ʼನಮ್ಮ ದಿನ, ನಮ್ಮ ಹಕ್ಕೋತ್ತಾಯ ಪತ್ರʼದಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.