ಬೆಳಗಾವಿ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿಯನ್ನು ಪೊಲೀಸರು ತೆರವುಗೊಳಿಸಿರುವುದು ಬೆಳಗಾವಿ ತಾಲೂಕಿನ ಧಾಮನೆ ಗ್ರಾ.ಪಂ. ವ್ಯಾಪ್ತಿಯ ಕುರುಬರಹಟ್ಟಿಯಲ್ಲಿ ಸೋಮವಾರ ನಡೆದಿದೆ. ರಸ್ತೆ ಪಕ್ಕ ಪ್ರತಿಷ್ಠಾಪಿಸಿದ್ದ ಚೆನ್ನಮ್ಮನ ಮೂರ್ತಿಯನ್ನು (Chennamma Statue) ತೆರವುಗೊಳಿಸುವ ವೇಳೆ ಯುವಕರು ಹಾಗೂ ಮಹಿಳೆಯರ ಮೇಲೆ ಹಲ್ಲೆ ಮಾಡಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕನ್ನಡಪರ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರಹಾಕಿವೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಧಾಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಯುವಕರು, ಚೆನ್ನಮ್ಮ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಆದರೆ, ಅನುಮತಿ ಪಡೆಯದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೂರ್ತಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ | Independence Day 2023: ಈ ಸಂದೇಶಗಳ ಮೂಲಕ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಉಲ್ಲಾಸ ತುಂಬಿ!
ಇದೇ ವೇಳೆ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದ ಯುವಕರನ್ನು ಪೊಲೀಸರು ಅಟ್ಟಾಡಿಸಿದ್ದು, ಪ್ರಶ್ನಿಸಿದ ಮಹಿಳೆಯರ ಮೇಲೆ ಕೂಡ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರ ವಿರುದ್ಧ ಮಹಿಳೆಯರ ಮೇಲೆ ಹಲ್ಲೆ ಆರೋಪ
ರಾಣಿ ಚೆನ್ನಮ್ಮ ಮೂರ್ತಿ ತೆರವು ವಿಚಾರದಲ್ಲಿ ವಾಗ್ವಾದ ನಡೆಯುತ್ತಿದ್ದಾಗ ಪೊಲೀಸರ ವಿರುದ್ಧ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಂದೆಯನ್ನು ಬಿಡಿಸಲು ಹೋಗಿದ್ದಾಗ ಪೊಲೀಸರು ಎಳೆದಾಡಿದ್ದು, ಮನಬಂದಂತೆ ಹೊಡೆದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಾಲೇಜು ವಿದ್ಯಾರ್ಥಿನಿ ರೋಷನಿ ಆರೋಪಿಸಿದ್ದಾಳೆ.
ಚೆನ್ನಮ್ಮನ ಮೂರ್ತಿ ಕೂರಿಸಲು ಅನುಮತಿ ನೀಡುವಂತೆ 10 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಆದರೆ ನಮಗೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಕೊಟ್ಟಿಲ್ಲ. ಹೀಗಾಗಿ ಇವತ್ತು ಯುವಕರು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮೂರ್ತಿ ತೆರವು ಮಾಡಿ ನಮ್ಮ ಮೇಲೂ ಸಹ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.
ಇದನ್ನೂ ಓದಿ | Independence Day 2023 : ಟೆಲಿಫೋನ್, ಮೊಬೈಲ್ ಇಲ್ಲದ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂವಹನ ಹೀಗಿತ್ತು!
ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಚೆನ್ನಮ್ಮನ ಮೂರ್ತಿ ತೆರವು ಹಾಗೂ ಮಹಿಳೆಯರ ಹಲ್ಲೆ ಖಂಡಿಸಿ ಪೊಲೀಸರ ವಿರುದ್ಧ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಘೋಷಣೆ ಕೂಗಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರ ಮೇಲೆ ಕೈ ಮಾಡಿದ ಪೊಲೀಸರು ಬಂದು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.