ಕಲಬುರಗಿ: ಪುಸ್ತಕಗಳನ್ನು ಓದುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕಿದೆ. ಕತೆ, ಕಾದಂಬರಿಗಳು (Book Release) ಮನುಷ್ಯನ ಜೀವನಶೈಲಿ ಬದಲಿಸುವ ಶಕ್ತಿ ಹೊಂದಿದ್ದು, ಅವು ಜೀವ ಕೊಡುವ ಶಕ್ತಿ ಹೊಂದಿವೆ ಎಂದು ಧಾರವಾಡದ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಿಷ್ಣುತೆಗೆ ಹೆಸರಾದ ಭಾರತದಲ್ಲಿ ಇತ್ತೀಚೆಗೆ ಮೂಲಭೂತವಾದಿಗಳು ಶ್ರೇಷ್ಠವೆನ್ನುವ ಅತಿರೇಕಗಳನ್ನು ಕಾಣುತ್ತಿದ್ದೇವೆ. ಬಹುತ್ವ ಭಾರತದಲ್ಲಿ ಇಂತಹ ಬೆಳವಣಿಗೆಗಳು ನಡೆಯಬಾರದು. ಸಾಹಿತ್ಯ ಕೃತಿಗಳು ಮಾನವೀಯ ಗುಣ ಹಾಗೂ ಸಹಿಷ್ಣುತೆ ಬೆಳೆಸಬೇಕು ಎಂದು ಹೇಳಿದರು.
ಇದನ್ನೂ ಓದಿ | Awards : ಬಸವಶ್ರೀ, ಜಕಣಾಚಾರಿ ಸೇರಿ ಸಂಸ್ಕೃತಿ ಇಲಾಖೆಯ 14 ಪ್ರಶಸ್ತಿಗಳು ಪ್ರಕಟ
ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಸಂಸ್ಥಾಪಕ ಬಸವರಾಜ ಜಿ. ಕೊನೇಕ ಅವರು 46 ವರ್ಷಗಳಿಂದ ವಿವಿಧ ಪುಸ್ತಕಗಳನ್ನು ಪ್ರಕಟ ಮಾಡುವ ಮೂಲಕ ಹಲವರನ್ನು ಬೆಳಕಿಗೆ ತಂದಿದ್ದಾರೆ. ಇಂದು ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಅಖಿಲ ಕರ್ನಾಟಕದಾದ್ಯಂತ ಸಿದ್ಧಲಿಂಗೇಶ್ವರ ಪ್ರಕಾಶನ ಹೆಸರು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅತಿ ಪ್ರಾಚೀನ ಪರಂಪರೆ ಭಾರತದಲ್ಲಿದೆ. ವಿಜ್ಞಾನ, ಸಮಾಜ ವಿಜ್ಞಾನ, ಹೊಸ ಬಗೆಯ ಆವಿಷ್ಕಾರಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಿ ಇಡಲಾಗಿದೆ. ಅವುಗಳನ್ನು ನಾವು ಓದುವ ಮೂಲಕ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ಟಿ.ವಿ. ಚಾನೆಲ್‌ಗಳು ಪ್ರವರ್ಧಮಾನಕ್ಕೆ ಬಂದಾಗ ಪತ್ರಿಕೆಗಳು ಮುಚ್ಚಿ ಹೋಗಲಿವೆ ಎಂದೇ ಭಾವಿಸಲಾಗಿತ್ತು. ಆದರೆ, ಮುಚ್ಚಿ ಹೋಗುವ ಬದಲು ಪ್ರಸರಣ ಸಂಖ್ಯೆ ಜಾಸ್ತಿಯಾಯಿತು. ಇಂದಿಗೂ ಜನರು ಪತ್ರಿಕೆಗಳನ್ನೇ ಹೆಚ್ಚಾಗಿ ನಂಬುತ್ತಾರೆ. ಸಾಹಿತಿಗಳನ್ನು ಬೆಳೆಸುವ ಸಿದ್ಧಲಿಂಗೇಶ್ವರ ಬುಕ್ ಡಿಪೋ ಸಂಸ್ಥೆಯ ಕೊನೇಕ ಅವರ ಕಾರ್ಯ ಶ್ಲಾಘನೀಯ ಎಂದರು.
ಗುಲಬರ್ಗಾ ವಿ.ವಿ. ಕುಲಸಚಿವ ಬಿ. ಶರಣಪ್ಪ ಮಾತನಾಡಿ, 1990ರ ದಶಕದ ಅಂತ್ಯದಲ್ಲಿ ಕಲಬುರಗಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಬೇಕಾದ ಪತ್ರಿಕೆಗಳು ಸಿಗುತ್ತಿರಲಿಲ್ಲ. ಅದನ್ನು ಸಾಧ್ಯವಾಗಿಸಿದ್ದು ಹಾಗೂ ಗುಲಬರ್ಗಾ ವಿ.ವಿ.ಯ ಪಠ್ಯಪುಸ್ತಕ ಮುದ್ರಿಸಿದ್ದು ಸಿದ್ಧಲಿಂಗೇಶ್ವರ ಪ್ರಕಾಶನದ ಸಾಧನೆ ಎಂದು ತಿಳಿಸಿದರು.
ಪ್ರೊ. ಬಸವರಾಜ ಡೋಣೂರ ಮಾತನಾಡಿ, ವೇದ, ವಚನ ಎರಡೂ ಸೇರಿ ಕೆಲಸ ಮಾಡಬೇಕಿದೆ. ಎಲ್ಲ ವಿಚಾರ, ಸಿದ್ಧಾಂತಗಳು ಸೇರಿ ದೇಶವನ್ನು ಕಟ್ಟಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ | Sunday Read: ಹೊಸ ಪುಸ್ತಕ: ಎದೆಯ ದನಿ ಕೇಳಿರೋ
ಬಡದಾಳ ತೇರಿನಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಸಂಸ್ಥಾಪಕ ಬಸವರಾಜ ಜಿ. ಕೊನೇಕ, ಹಿರಿಯ ಸಾಹಿತಿ ಪ್ರೊ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಪ್ರೊ. ಸ್ವಾಮಿರಾವ ಕುಲಕರ್ಣಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಲೇಖಕ ಡಾ. ಚಿ. ಸಿ. ನಿಂಗಣ್ಣ, ನೇ. ತಿ. ಸೋಮಶೇಖರ ಹಾಗೂ ಪ್ರಕಾಶನದ ಸಿಬ್ಬಂದಿ, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
115 ಪುಸ್ತಕಗಳ ಲೋಕಾರ್ಪಣೆ
ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಈ ವರ್ಷ ಹೊರತಂದ 115 ಪುಸ್ತಕಗಳಲ್ಲಿ 40ಎನ್‌ಇಪಿ ಪಠ್ಯ ಪುಸ್ತಕ, 20 ವಿಮರ್ಶೆ, 12 ಕಥಾ ಸಂಕಲನ, 10 ಹೊಸ ಲೇಖಕರ ಕೃತಿ, 4 ಕಾದಂಬರಿ, 4 ವಚನ ಸಾಹಿತ್ಯ, 2 ಜಾನಪದ, ಕಾವ್ಯ ಸಂಪಾದನೆ, ಚಿಂತನೆ, ದೃಶ್ಯಕಲೆ ಸೇರಿ ವಿವಿಧ ಪ್ರಕಾರದ 1156 ಕೃತಿಗಳನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.