ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ಸ್ವೀಕಾರ ಮಾಡಿದ್ದು, 8 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಾ. ಜಿ. ಪರಮೇಶ್ವರ್ (Dr G Parameshwara Profile) ಸಹ ಒಬ್ಬರು.
ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ 1951ರ ಆಗಸ್ಟ್ 6ರಂದು ಎಚ್.ಎಂ. ಗಂಗಾಧರಯ್ಯ ಮತ್ತು ಗಂಗಮಾಳಮ್ಮ ಸಿ. ದಂಪತಿಗೆ ಜನಿಸಿದರು. ಕೃಷಿ ಕುಟುಂಬದಿಂದ ಬಂದಿರುವ ಇವರು ಕೃಷಿ ವಿಜ್ಞಾನದಲ್ಲಿ ಎಂ.ಎಸ್‌ಸಿ ಪದವೀಧರರಾಗಿದ್ದಾರೆ. ಇವರು ಕನ್ನಿಕಾ ಪರಮೇಶ್ವರಿ ಅವರನ್ನು ವಿವಾಹವಾಗಿದ್ದಾರೆ. ಒಬ್ಬರು ಪುತ್ರಿ ಇದ್ದಾರೆ.
ಇದನ್ನೂ ಓದಿ: K J George Profile : ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲೊಬ್ಬರು ಕೆ ಜೆ ಜಾರ್ಜ್
ರಾಜಕೀಯದಲ್ಲಿ ಹಲವು ಹುದ್ದೆಗಳ ನಿರ್ವಹಣೆ
1989ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಪ್ರವೇಶ ಮಾಡಿದ ಡಾ. ಜಿ. ಪರಮೇಶ್ವರ್ ಅವರು ರಾಜಕೀಯದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ. 1989ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರು. 1989, 1999 ಮತ್ತು 2004ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ, ತದ ನಂತರ ಕ್ಷೇತ್ರ ಪುನರ್ವಿಂಗಡಣೆಯಾಗಿದ್ದು, 2008ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.
ರೇಷ್ಮೆ ಖಾತೆಯಿಂದ ಡಿಸಿಎಂವರೆಗೆ
1993ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿ ಕಾರ್ಯನಿರ್ಹವಣೆ ಮಾಡಿದ್ದರು. 1999ರಲ್ಲಿ ಜೆಡಿಎಸ್‌ನ ಗಂಗಾಹನುಮಯ್ಯ ಅವರ ವಿರುದ್ಧ 55,802 ಮತಗಳ ದಾಖಲೆ ಅಂತರದಿಂದ ಜಯ ಸಾಧಿಸಿದ್ದರು.
1999-2004: ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕೆಲಸ ಮಾಡಿದ್ದರು. 2002ರಲ್ಲಿ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಹೊಂದುತ್ತಾರೆ.
2010-2018: ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷರಾಗಿ ಆಯ್ಕೆ
2014: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ
2015: ಗೃಹ ಸಚಿವರಾಗಿ ಕಾರ್ಯನಿರ್ವಹಣೆ
2018: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ. ಗೃಹ ಹಾಗೂ ನಗರಾಭಿವೃದ್ಧಿ ಖಾತೆ ಹೊಣೆ
2023: ಸಿದ್ದರಾಮಯ್ಯ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಆಯ್ಕೆ
ದಲಿತ ಸಮುದಾಯ ಡಾ. ಜಿ. ಪರಮೇಶ್ವರ್ ಅವರು, ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿಯನ್ನು ಹೊಂದಿದ್ದಾರೆ. ಅಲ್ಲದೆ, ಇವರು 2018ರಲ್ಲಿ ಉಪ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕದ 8ನೇ ಡಿಸಿಎಂ ಆಗಿ ಕಾರ್ಯನಿರ್ವಹಣೆ ಮಾಡಿದ್ದರು.
ಕ್ರೀಡೆಯಲ್ಲೂ ಆಸಕ್ತಿ
ಡಾ. ಜಿ. ಪರಮೇಶ್ವರ್ ಅವರು ಬಹಳ ಕ್ರಿಯಾಶೀಲರು. ವಿದ್ಯಾರ್ಥಿ ಜೀವನದಲ್ಲಿಯೇ ಎನ್‌ಸಿಸಿ ಸೇರ್ಪಡೆಯಾಗಿದ್ದರು. ಅಲ್ಲದೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 10.9 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದ್ದರು. ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದು, ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ ಪ್ರತಿನಿಧಿಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು. ಸಿದ್ಧಾರ್ಥ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾವಿದ್ಯಾಲಯವು ಪರಮೇಶ್ವರ್ ಒಡೆತನದಲ್ಲಿದ್ದು, ಹಾಲಿ ಆಡಳಿತಾಧಿಕಾರಿಯಾಗಿದ್ದಾರೆ.
ಇದನ್ನೂ ಓದಿ: Priyank Kharge Profile: ಮೂರನೇ ಬಾರಿಗೆ ಸಚಿವರಾದ ಪ್ರಿಯಾಂಕ್ ಖರ್ಗೆ; ಇಲ್ಲಿದೆ ಅವರ ರಾಜಕೀಯ ಪರಿಚಯ
ಸಂಪುಟ ದರ್ಜೆ ಸಚಿವ
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದು, ಯಾವ ಖಾತೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.