Site icon Vistara News

PSI Exam: ಪಿಎಸ್ಐ ಮರು ಪರೀಕ್ಷೆ; ಜ. 23ರಂದು ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

PSI Exam

ಬೆಂಗಳೂರು: ಪಿಎಸ್ಐ ನೇಮಕಾತಿ ಮರು ಪರೀಕ್ಷೆ (PSI Exam) ಹಿನ್ನೆಲೆಯಲ್ಲಿ ಜ.23ರಂದು ನಗರದ ಪರೀಕ್ಷಾ ಕೇಂದ್ರಗಳ ಸುತ್ತ144 ಸೆಕ್ಷನ್‌ (ನಿಷೇಧಾಜ್ಞೆ) ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ನಡೆದ ಪರೀಕ್ಷಾ ಅಕ್ರಮಗಳು ಮರುಕಳಿಸಬಾರದು ಎಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಂಗಳೂರು ನಗರದ 117 ಕೇಂದ್ರಗಳಲ್ಲಿ ಪಿಎಸ್ಐ ನೇಮಕಾತಿ ಮರು ಪರೀಕ್ಷೆ ನಡೆಯಲಿದೆ. ಇನ್ನು ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಸೆಂಟರ್‌ಗಳಿಗೆ ನಿಷೇಧ ವಿಧಿಸಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಪರೀಕ್ಷೆ ಮುಗಿಯೋವರೆಗೂ ಜೆರಾಕ್ಸ್ ಸೆಂಟರ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ | Job Alert: ಭಾರತೀಯ ರೈಲ್ವೆಯಲ್ಲಿದೆ 5,696 ಸಹಾಯಕ ಲೋಕೋ ಪೈಲಟ್‌ ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

ಪಿಎಸ್‌ಐ ಪರೀಕ್ಷೆ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಜಾರಿ

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆ ಜ. 23ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಳೆದ ಬಾರಿ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಸೂಚಿಸಲಾಗಿದ್ದು, ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲಾಗಿದೆ.

ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ

1.ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಕಾಲರ್‌ರಹಿತ ಶರ್ಟ್ ಧರಿಸಲು ಆದ್ಯತೆ ನೀಡುವುದು.

2.ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ / ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮವನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ.
ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟಗಳು ಇರಬಾರದು.

3.ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ.
ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ

1.ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ.

2.ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.

3.ಎತ್ತರವಾದ ಹಿಮ್ಮಡಿಯ ಶೂಗಳನ್ನು/ ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.

4.ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ).

ನಿಷೇಧಿತ ವಸ್ತುಗಳ ಪಟ್ಟಿ

1.ಡ್ರೆಸ್ ಕೋಡ್ ಅನ್ನು ಅನುಸರಿಸುವುದರ ಜೊತೆಗೆ, ಕೆಳಗೆ ಪಟ್ಟಿ ಮಾಡಲಾದ ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ, ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.

2.ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂ ಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ.

3.ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗು ತಿನ್ನುವುದನ್ನು ನಿಷೇಧಿಸಲಾಗಿದೆ, ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ಇರುವುದಿಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.

4.ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಗಳು ಮತ್ತು ಲಾಗ್ ಟೇಬಲ್ ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ/ HAT ಧರಿಸಿಬಾರದು. ಯಾವುದೇ ರೀತಿಯ ಮಾಸ್ಕ ಅನ್ನು ಧರಿಸುವಂತಿಲ್ಲ.

ಪರೀಕ್ಷೆಯ ದಿನದಂದು ಈ ಕೆಳಗಿನ ವಸ್ತುಗಳನ್ನು ಮಾತ್ರ ತರಲು ಅನುಮತಿಸಲಾಗಿದೆ.

  1. ಪ್ರವೇಶ ಪತ್ರವನ್ನು ಎಲ್ಲಾ ಅಭ್ಯರ್ಥಿಗಳು ಖಡ್ಡಾಯವಾಗಿ ತರುವುದು.
  2. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ತರುವುದು ಖಡ್ಡಾಯಗೊಳಿಸಲಾಗಿದೆ.
  3. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
  4. ಮೇಲೆ ಹೇಳಲಾಗಿರುವ ಕೆ.ಇ.ಎ ನಿಯಮಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು, ಇಲ್ಲವಾದಲ್ಲಿ ನಿಯಮಾನುಸಾರ ಅಭ್ಯರ್ಥಿಗಳ ಮೇಲೆ ಕ್ರಮವನ್ನು ಜರುಗಿಸಲಾಗುವುದು

ಇದನ್ನೂ ಓದಿ | Job Alert: ಸಿಆರ್‌ಪಿಎಫ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

ಅಕ್ರಮ ಹಿನ್ನೆಲೆ ಮರು ಪರೀಕ್ಷೆಗೆ ಸೂಚಿಸಿದ್ದ ಹೈಕೋರ್ಟ್‌

2021ರ ಜ. 21 ರಂದು ಕರ್ನಾಟಕ ಪೊಲೀಸ್‌ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕಟವಾಗಿತ್ತು. ಅದೇ ವರ್ಷ ಅಕ್ಟೋಬರ್‌ 3 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿಯ ಲಿಖಿತ ಪರೀಕ್ಷೆ ನಡೆಸಲಾಯಿತು. ಆದರೆ ನೇಮಕಾತಿಯಲ್ಲಿ ಭಾರಿ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಸೇರಿ ಹಲವರ ಬಂಧನವಾಗಿತ್ತು. ನಂತರ ಪಿಎಸ್​ಐ ಮರು ಪರೀಕ್ಷೆ ನಡೆಸಲು ಕರ್ನಾಟಕ ಹೈಕೋರ್ಟ್ ನ.10ರಂದು ಆದೇಶ ನೀಡಿತ್ತು. ಹೀಗಾಗಿ ಜ. 23ರಂದು ಪಿಎಸ್ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆ ನಿಗದಿಯಾಗಿದೆ.

Exit mobile version