Site icon Vistara News

ಪೂರ್ವ ಸಿದ್ಧತೆ ಇಲ್ಲದೆ ಯೋಜನೆ ಘೋಷಣೆ : ಪೂರೈಕೆಯಾಗದ ಕಲಿಕಾ ಚೇತರಿಕೆ

ಕಲಿಕಾ ಚೇತರಿಕೆ

ಮೌನೇಶ್ ಬಡಿಗೇರ್ ಕೊಪ್ಪಳ
ಕೊರೊನಾ‌ ಮಹಾಮಾರಿ ಹಾವಳಿಯಿಂದ‌ ಎರಡು ವರ್ಷ ಮಕ್ಕಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿತ್ತು. ಮಕ್ಕಳಲ್ಲಿನ ಕಲಿಕಾ ಗುಣಮಟ್ಟದಲ್ಲಿ ಕೊರತೆಯಾಗಿತ್ತು. ಹೀಗಾಗಿ ಈ ವರ್ಷ ಶಾಲೆಗಳಲ್ಲಿ ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿದೆ. ಆದರೆ ಪೂರ್ವ ಸಿದ್ಧತೆ ಇಲ್ಲದೆ ಯೋಜನೆ ಘೋಷಣೆ ಮಾಡಿರುವುದು ಹಿನ್ನಡೆಗೆ ಕಾರಣವಾಗಿದೆ.

ಏನಿದು ಕಲಿಕಾ ಚೇತರಿಕೆ ?

ಕೊರೊನಾ ಸೋಂಕಿನ ಹಾವಳಿಯಿಂದ ಎರಡು ವರ್ಷ ಶಾಲೆಗಳಿಗೆ ಬೀಗ ಜಡಿಯಲಾಗಿತ್ತು. ಇದರ ನಡುವೆ ಎರಡು ಶೈಕ್ಷಣಿಕ ವರ್ಷದಲ್ಲಿ ಒಂದು ಮತ್ತು ಎರಡನೇ ತರಗತಿಯ ಮಕ್ಕಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಯಿತು. ಕೊರೊನಾ ಕರಿಛಾಯೆಯ ಪರಿಣಾಮದಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಿಂದುಳಿಯುವಂತಾಯಿತು. ಈ ಕಾರಣದಿಂದಾಗಿ ಶಿಕ್ಷಣ ಇಲಾಖೆ ಈ ವರ್ಷ ಕಲಿಕಾ ಚೇತರಿಕೆ ವರ್ಷವೆಂದು ಘೋಷಣೆ ಮಾಡಿದೆ. ಈ ವರ್ಷ ಮಕ್ಕಳ ಶಿಕ್ಷಣ ಗುಣಮಟ್ಟದ ಆಧಾರಿತವಾಗಿ ಅವರಿಗೆ ಪಾಠ ಮಾಡುವುದು ಈ ಯೋಜನೆಯ ಹಿಂದಿರುವ ಉದ್ದೇಶ.

ದನ್ನೂ ಓದಿ | ಒಂದೇ ಬಾರಿಗೆ ಎರಡು ವರ್ಷಗಳ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಕುವೆಂಪು ವಿಶ್ವವಿದ್ಯಾಲಯ

ಕೈಪಿಡಿ ಮತ್ತು ಕಲಿಕಾ ಹಾಳೆ ಆಧರಿಸಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ. ಪ್ರತಿ ತರಗತಿಯಲ್ಲೂ ಹಿಂದಿನ ಎರಡು ವರ್ಷಗಳ ಅಗತ್ಯ ಕಲಿಕಾ ಫಲಗಳು, ಪ್ರಸ್ತುತ ತರಗತಿಯ ಅಗತ್ಯ ಕಲಿಕಾ ಫಲಗಳನ್ನು ಆಧರಿಸಿ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿ ವಿಷಯದ ಕಲಿಕಾ ಹಾಳೆ ಪುಸ್ತಕವು 150 ಪುಟಗಳನ್ನು ಒಳಗೊಂಡಿರುತ್ತವೆ. ಕಲಿಕಾ ಹಾಳೆಯಲ್ಲಿ ಹಿಂದಿನ ಎರಡು ವರ್ಷಗಳ ವಿಷಯಗಳು ಮಕ್ಕಳಿಗೆ ಎಷ್ಟು ಅರ್ಥವಾಗಿವೆ ಎಂಬುದನ್ನು ಮೌಲ್ಯಮಾಪನ ಮಾಡಿ ಶಿಕ್ಷಕರು ಅಂಕ ನೀಡುತ್ತಾರೆ.

ಹೀಗಾಗಿಯೇ ಈ ಬಾರಿ ಶಾಲೆಗಳನ್ನು ಮೇ 16 ಕ್ಕೆ ಆರಂಭಿಸಲಾಯಿತು. ಮೇ 16 ರಿಂದ ಮೇ 31 ರವರೆಗೆ ಮಳೆಬಿಲ್ಲು ಎಂಬ ಬ್ರಿಡ್ಜ್ ಕೋರ್ಸ್, ಜೂನ್ 1 ರಿಂದ ಜೂನ್ 30 ರವರೆಗೆ ಪರಿಹಾರ ಬೋಧನೆ ನಡೆಯಲಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸಿ ಅವರ ಶೈಕ್ಷಣಿಕ ಗುಣಮಟ್ಟ ಅಳೆಯಲಾಗುತ್ತದೆ.

ಪೂರೈಕೆಯಾಗದ ಕಲಿಕಾ ಚೇತರಿಕೆ

ಒಂದನೇ ತರಗತಿಯಿಂದ 9 ನೇ ತರಗತಿಯವರೆಗೂ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದೆ. ಈ ಕುರಿತಂತೆ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಕಲಿಕಾ ಚೇತರಿಕೆಯ ನೋಟ್ಸ್ ಗಳನ್ನು ಮಾಡಿಕೊಳ್ಳಲು ಪ್ರತಿ ಪಾಠಕ್ಕೆ, ಪ್ರತಿಯೊಂದು ವಿಷಯಕ್ಕೂ ಒಂದೊಂದು ಹಾಳೆಗಳು ಬೇಕು.

ಆದರೆ ಸರ್ಕಾರ ಕಲಿಕಾ ಚೇತರಿಕೆಯ ಹಾಳೆಗಳನ್ನು ಇಲ್ಲಿಯವರೆಗೂ ನೀಡಿಲ್ಲ. ಈವರೆಗೂ ಹಾಳೆಗಳು ಬಾರದೆ ಇರುವುದರಿಂದ ಕಲಿಕಾ ಚೇತರಿಕೆಗೆ ಹಿನ್ನೆಡೆಯಾಗಿದೆ. ಈಗ ಸದ್ಯ ಕಲಿಕಾ ಚೇತರಿಕೆ ಹಾಳೆಗಳ ಸಾಫ್ಟ್ ಕಾಪಿಗಳನ್ನು ಶಿಕ್ಷಕರ ಮೊಬೈಲ್ ಗಳಿಗೆ ಕಳುಹಿಸಲಾಗಿದೆ. ಈ ಹಾಳೆಗಳನ್ನು ಡೌನ್ ಲೋಡ್ ಮಾಡಿಕೊಂಡು, ಇಲ್ಲವೇ ಮೊಬೈಲ್ ನೋಡಿಕೊಂಡು ಶಿಕ್ಷಕರು ಬೋಧಿಸುತ್ತಿದ್ದಾರೆ. ಕಲಿಕಾ ಚೇತರಿಕೆ ಹಾಳೆಗಳು ಕೇವಲ ಶಿಕ್ಷಕರಿಗೆ ಮಾತ್ರ ಬೇಕಾಗದೆ ಮಕ್ಕಳಿಗೂ ಕಲಿಕಾ ಹಾಳೆಗಳು ಅಗತ್ಯವಾಗಿ ಬೇಕಾಗಿವೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಮುತ್ತರಡ್ಡಿ ರಡ್ಡೇರ್, ಕಲಿಕಾ ಚೇತರಿಕೆ ಕಾರ್ಯಕ್ರಮ ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದೆ. ಜುಲೈಯಿಂದ ಕಲಿಕಾ ಚೇತರಿಕೆ ಕಾರ್ಯಕ್ರಮ ಸಂಪೂರ್ಣವಾಗಿ ಆರಂಭವಾಗುತ್ತದೆ. ಆಗ ಕಡ್ಡಾಯವಾಗಿ ಕಲಿಕಾ‌ ಹಾಳೆಗಳು ಬೇಕಾಗುತ್ತವೆ. ಜುಲೈ ಮೊದಲ ವಾರದೊಳಗಾಗಿ ಕಲಿಕಾ ಹಾಳೆಗಳು ಬರುತ್ತವೆ ಎಂದು ತಿಳಿಸಿದ್ದಾರೆ.

ಯಾವುದೇ ಯೋಜನೆಯಾಗಲಿ ಪೂರ್ವ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಜಾರಿ ಮಾಡಿದರೆ ಆ ಯೋಜನೆಯನ್ನು ಅನೇಕ ನ್ಯೂನ್ಯತೆಗಳನ್ನು ಎದುರಿಸಿಬೇಕಾಗುತ್ತದೆ. ಅಲ್ಲದೆ ಯೋಜನೆಯ ಸಾಫಲ್ಯಕ್ಕೆ ಹಿನ್ನಡೆಯಾಗುತ್ತದೆ ಎಂಬುದಂತೂ ಸತ್ಯ.

ಇದನ್ನೂ ಓದಿ | ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಆದ್ಯತೆ: ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

Exit mobile version