Site icon Vistara News

Parashurama Theme Park : ಕರಾವಳಿಯ ಪ್ರವಾಸೋದ್ಯಮಕ್ಕೆ ಇಂಬು: ಸಿಎಂ ಬಸವರಾಜ ಬೊಮ್ಮಾಯಿ

ಉಡುಪಿ( ಕಾರ್ಕಳ): ಕರಾವಳಿ ಭಾಗದ ಸಾಂಸ್ಕೃತಿಕ ಹಾಗೂ ದೇಗುಲ ಪ್ರವಾಸೋದ್ಯಮಕ್ಕೆ ಇಂಬು ಕೊಡುವ ಮಾಸ್ಟರ್ ಪ್ಲಾನ್ ರೂಪಿಸಿ ಇಲ್ಲಿನ ಆರ್ಥಿಕತೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಅವರು ಇಂದು ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸ್ಥಾಪಿಸಿರುವ ಪರಶುರಾಮ ಥೀಮ್​ ಪಾರ್ಕ್​ನಲ್ಲಿ ಸ್ಥಾಪನೆಯಾಗಿರುವ (Parashurama Theme Park) ಮೂರ್ತಿ ಉದ್ಘಾಟಿಸಿ ಮಾತನಾಡಿದರು.

ಪ್ರವಾಸೊದ್ಯಮಕ್ಕೆ ವಿಪುಲ ಅವಕಾಶಗಳು ಕರಾವಳಿಯಲ್ಲಿವೆ. ಈಗಾಗಲೇ ಪ್ರವಾಸೋದ್ಯಮಕ್ಕೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇಲ್ಲಿನ ಜನ ಶ್ರಮಜೀವಿಗಳಾಗಿದ್ದು ಅವರ ಬದುಕು ಹಸನಾಗಲು ಪ್ರವಾಸೋದ್ಯಮದ ಜೊತೆಗೆ ಕೈಗಾರಿಕೋದ್ಯಮದ ಅಗತ್ಯವೂ ಇದೆ. ಇದಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಬಂದರು, ಲಾಜಿಸ್ಟಿಕ್ ಪಾರ್ಕ್, ರಸ್ತೆ ಸಂಪರ್ಕ ಆದಾಗ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು.

ಈಗಾಗಲೇ ಕರಾವಳಿಯಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಯೋಜನೆ ತಯಾರಾಗಿದೆ. ಇಂಧನ, ಹೈಡ್ರೋಜನ್, ಅಮೋನಿಯಾ ಉತ್ಪಾದನೆಗೆ ಜನ ಮುಂದಾಗಿದ್ದಾರೆ. ಅದನ್ನು ಶೀಘ್ರವಾಗಿ ನನಸು ಮಾಡಿದರೆ ಇಲ್ಲಿನ ಜನರ ಬದುಕು ಸಂಪೂರ್ಣ ಬದಲಾಗುತ್ತದೆ ಎಂದು ನುಡಿದರು.

ಕರಾವಳಿಗೆ ಸಣ್ಣಪುಟ್ಟ ಪ್ಯಾಕೇಜ್ ನೀಡಿದರೆ ಬದುಕು ಬದಲಾಗುವುದಿಲ್ಲ. ಇಲ್ಲಿನ ಬಂದರುಗಳ ಸಾಮರ್ಥ್ಯ ಹೆಚ್ಚಾಗಬೇಕು ಹಾಗೂ ಹೂಡಿಕೆ ಹೆಚ್ಚಾದರೆ ದೊಡ್ಡ ಪ್ರಾಮಾಣದ ಆರ್ಥಿಕ ಚಟುವಟಿಕೆಗಳು ನಡೆದು ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ಐತಿಹಾಸಿಕ ದಿನ

ಕರ್ನಾಟಕಕ್ಕೆ, ವಿಶೇಷವಾಗಿ ಕರಾವಳಿಗೆ ಐತಿಹಾಸಿಕ ದಿನವಿದು. ಪರಶುರಾಮನ ಥೀಮ್ ಪಾರ್ಕ್ ಹಾಗೂ ಅತ್ಯಂತ ಎತ್ತರದ ಸ್ಥಾನದಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆಯಾಗಿರುವುದು ಇತಿಹಾಸ ಕ್ಷಣ. ಪರಶುರಾಮ ವೀರ, ಶೂರ, ಶಿವನಿಂದ ವರ ಪಡೆದು ಅಗಾಧ ಶಕ್ತಿ ಹೊಂದಿದ್ದ. ಆತನ ಸೃಷ್ಟಿಯೇ ಕರಾವಳಿ. ಇಂದು ತುಳುನಾಡು, ಕರಾವಳಿಗೆ ಸೇರಿದವರು ಪರಶುರಾಮನನ್ನು ನೆನೆಯಬೇಕು ಎಂದರು.

ಇತಿಹಾಸ ಸೃಷ್ಟಿಸಬೇಕು

ಪರಶುರಾಮನ ಕತೆ ಪುರಾಣವಾದರೂ ಐತಿಹಾಸಿಕ ಪುರಾವೆಗಳಿವೆ. ಪರಶುರಾಮನ ಸಣ್ಣ ದೇವಸ್ಥಾನ ಕರಾವಳಿಯಲ್ಲಿದೆ. ಪುರಾಣಕ್ಕೆ ಐತಿಹಾಸಿಕ ಸಾಕ್ಷಿ ಇಂದು ದೊರೆತಿದೆ. ಸಾರ್ವಜನಿಕ ಜೀವನದಲ್ಲಿ ಹತ್ತು ಹಲವು ಕೆಲಸಗಳನ್ನು ಮಾಡುತ್ತೇವೆ. ಆದರೆ ಈ ರೀತಿ ಐತಿಹಾಸಿಕ ಕೆಲಸಗಳನ್ನು ಮಾಡಲು ಸಿಗುವ ಸಂದರ್ಭಗಳು ವಿರಳ. ಸುನಿಲ್ ಕುಮಾರ್ ಈ ಕೆಲಸವನ್ನು ಮಾಡಿದ್ದಾರೆ ಎಂದು ಹೊಗಳಿದರು.

ಭಕ್ತನಾಗಿ ಬಂದಿದ್ದೇನೆ

ಪರಶುರಾಮನ ಇಲ್ಲಿಗೆ ಭಕ್ತನಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದ ಮುಖ್ಯಮಂತ್ರಿಗಳು, ಸವದತ್ತಿಯಲ್ಲಿ ಪರಶುರಾಮ ದೇವಾಲವನ್ನು ದೊಡ್ಡ ಪ್ರಮಾನದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದರು. ಪರಶುರಾಮನ ಮೂರ್ತಿ ನೋಡಿದಾಗ ಇಲ್ಲಿಂದಲೇ ತನ್ನ ಖಡ್ಗ ಬೀಸಿದ್ದನೇನೋ ಎಂಬ ಭಾವನೆ ಬರುತ್ತದೆ ಎಂದು ನುಡಿದರು.

ಇದನ್ನೂ ಓದಿ : Hampi Utsav 2023 | ಐತಿಹಾಸಿಕ ಹಂಪಿಯಲ್ಲಿ ವೈಭವದ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್, ಮೀನುಗಾರಿಕೆ ಸಚಿವ ಎಸ್.ಅಂಗಾರ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್. ರಘುಪತಿ ಭಟ್, ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಉಪಸ್ಥಿತರಿದ್ದರು.

Exit mobile version