ರಾಯಚೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ (Congress Guarantee) ಮೊದಲ ಗ್ಯಾರಂಟಿ ‘ಶಕ್ತಿ ಯೋಜನೆ’ ಅನುಷ್ಠಾನಕ್ಕೆ ಬಂದಿದೆ. ಇಂದಿನಿಂದ ಮಹಿಳೆಯರು ರಾಜ್ಯದಲ್ಲಿ ಎಲ್ಲೇ ಹೋದರೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ. ನಗರ ಸಾರಿಗೆ, ವೇಗದೂತ, ಸಾಮಾನ್ಯ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಇನ್ನು ಹಣ ಕೊಡುವ ಅಗತ್ಯವೇ ಇಲ್ಲ. ಇಂದು ಬೆಂಗಳೂರಿನಲ್ಲಿ ಈ ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿಗೆ ಚಾಲನೆ ನೀಡಿದರು. ಅಷ್ಟೇ ಅಲ್ಲ, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಇಂದು ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿತು. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದರು.
ಆದರೆ ರಾಯಚೂರಲ್ಲಿ ಈ ಶಕ್ತಿ ಯೋಜನೆಗೆ ಪ್ರತಿಭಟನೆ ಬಿಸಿ ತಟ್ಟಿದೆ. ಇಲ್ಲಿನ ಉಸ್ತುವಾರಿ ಸಚಿವರಾಗಿರುವ, ಉನ್ನತ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಶಕ್ತಿ ಯೋಜನೆ ಉದ್ಘಾಟನೆಗಾಗಿ ಜಿಲ್ಲೆಗೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ರಾಯಚೂರು ನಾಗರಿಕ ವೇದಿಕೆ ಸದಸ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ,ಸಚಿವರು ಆಗಮಿಸಲಿರುವ ಮಾರ್ಗದಲ್ಲಿ ಇರುವ ಅಂಬೇಡ್ಕರ್ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಗೋ ಬ್ಯಾಕ್ ಶರಣಪ್ರಕಾಶ್ ಪಾಟೀಲ್ ಎಂಬ ಘೋಷಣೆ ಕೂಗಿದ್ದಾರೆ.
ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಆಗ್ರಹ ತಿಂಗಳುಗಳಿಂದಲೂ ಗಟ್ಟಿಯಾಗಿ ಕೇಳಿಬರುತ್ತಿದೆ. ಏಮ್ಸ್ನ್ನು ಹೇಗಾದರೂ ನಿರ್ಮಾಣ ಮಾಡಿಸಲೇಬೇಕು ಎಂಬ ಕಾರಣಕ್ಕೆ ಅಲ್ಲಿ ಏಮ್ಸ್ ಹೋರಾಟ ಸಮಿತಿಯೇ ಹುಟ್ಟಿಕೊಂಡಿದೆ. ಆದರೆ ಇತ್ತೀಚೆಗೆ ಡಾ.ಶರಣಪ್ರಕಾಶ್ ಪಾಟೀಲ್ ಅವರು ಏಮ್ಸ್ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ಕಟ್ಟುವ ಮಾತುಗಳನ್ನಾಡಿದ್ದರು. ಇದು ಈಗ ರಾಯಚೂರಿನ ಜನರನ್ನು ಕೆರಳಿಸಿದೆ. ಈ ಹಿಂದೆ ರಾಯಚೂರಲ್ಲಿ ನಿರ್ಮಾಣವಾಗಬೇಕಿದ್ದ ಐಐಟಿ ಕೈತಪ್ಪಿ, ಧಾರವಾಡದ ಪಾಲಾಯಿತು. ಈಗ ಸಚಿವರು ಏಮ್ಸ್ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ನಿರ್ಮಿಸುವ ಮಾತಾಡುತ್ತಿದ್ದಾರೆ ಎಂದು ರಾಯಚೂರಿನ ನಾಗರಿಕ ವೇದಿಕೆ, ಏಮ್ಸ್ ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸುತ್ತಿದೆ.
ಇದನ್ನೂ ಓದಿ: Raichur News: ರಾಯಚೂರು ಜಿಲ್ಲೆಗೆ ಡಾ. ಶರಣಪ್ರಕಾಶ್ ಪಾಟೀಲ್ ಉಸ್ತುವಾರಿ; ವಿರೋಧಿಸಿ ಪ್ರತಿಭಟನೆ
ರಾಯಚೂರಿನ ಉಸ್ತುವಾರಿ ಸಚಿವ ಸ್ಥಾನಕ್ಕೆ ಶರಣಪ್ರಕಾಶ್ ಪಾಟೀಲ್ ಆಯ್ಕೆಯೇ ತಪ್ಪು. ಬೇರೆಯವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಿ ಎಂದು ಈಗಾಗಲೇ ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಇಂದು ಅಂಬೇಡ್ಕರ್ ವೃತ್ತದಲ್ಲಿ ತೀವ್ರ ಪ್ರತಿಭಟನೆ ಶುರುವಿಟ್ಟುಕೊಂಡಿದ್ದರು. ಅಲ್ಲಿಗೆ ಬಂದ ಪೊಲೀಸರು ನಾಗರಿಕ ವೇದಿಕೆಯ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಉಳಿದವರೆಲ್ಲ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೆಲ್ಲದರ ಮಧ್ಯೆ ಶರಣಪ್ರಕಾಶ್ ಪಾಟೀಲ್ ಅವರು ರಾಯಚೂರಿಗೆ ತೆರಳಿ ಶಕ್ತಿ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ.