Site icon Vistara News

Protest at Belagavi | ಸುವರ್ಣ ಸೌಧದ ಎದುರು ವಿವಿಧ ಸಂಘಟನೆಗಳಿಂದ ಮುಂದುವರಿದ ಪ್ರತಿಭಟನೆ

Protest at Belagavi

ಬೆಳಗಾವಿ: ಸುವರ್ಣ ಸೌಧದ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಬುಧವಾರವೂ ಮುಂದುವರಿಯಿತು. ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟರೆ, ಮತ್ತೊಂದೆಡೆ ಹೆಸ್ಕಾಂ ಸಿಬ್ಬಂದಿ, ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಹೋರಾಟವೂ (Protest at Belagavi) ಜೋರಾಗಿತ್ತು.

ಹಲವಾರು ವರ್ಷಗಳಿಂದ ಪ್ರತಿಭಟನೆ ಮೂಲಕವೇ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ ಬಂದಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ನಿರಂತರವಾಗಿದೆ. ಮಂಗಳವಾರದಿಂದ ಆರಂಭವಾಗಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಎರಡನೇ ದಿನದಲ್ಲೂ ಜೋರಾಗಿ ನಡೆದಿದೆ. ಮೊದಲ ದಿನ ಬೆಳಗಾವಿ ಜಿಲ್ಲೆಯ ಕಾರ್ಯಕರ್ತೆಯರು ಭಾಗಿಯಾದ್ದರೆ, ಬುಧವಾರ ಒಟ್ಟು 7 ಜಿಲ್ಲೆಯ ಆಶಾ ಕಾರ್ಯಕರ್ತೆಯರು ಭಾಗಿಯಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಗೌರವಧನ 12 ಸಾವಿರ ರೂ.ಗಳಿಗೆ ನಿಗದಿ ಮಾಡಬೇಕು, ಸೇವಾ ನಿವೃತ್ತಿ ಬಳಿಕ 3 ಲಕ್ಷ ರೂಪಾಯಿ ಸೇವಾ ಹಣ ನೀಡಬೇಕು, ಆರ್‌ಸಿಎಚ್ ತೆಗೆದುಹಾಕಿ ನಿಶ್ಚಿತ ಹಣ 5 ಸಾವಿರ ರೂ.ಗಳಿಗೆ ನಿಗದಿ ಮಾಡಬೇಕು ಎಂದು ಒತ್ತಾಯ ಮಾಡಿದರು.

ಗ್ಯಾಂಗ್‌ಮನ್‌ಗಳ ಮರು ನೇಮಕಕ್ಕೆ ಒತ್ತಾಯ
ಇನ್ನು ಹುಬ್ಬಳ್ಳಿಯ ಹೆಸ್ಕಾಂ ನಿವೃತ್ತ ಸಿಬ್ಬಂದಿ ಸಹ ಪ್ರತಿಭಟನೆ ಮಾಡಿದ್ದಾರೆ. 2009ರಲ್ಲಿ ಗ್ಯಾಂಗ್‌ಮನ್‌ಗಳನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಹೀಗಾಗಿ ಮತ್ತೆ ತಾತ್ಕಾಲಿಕವಾಗಿ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಕಲ್ಲ ಕ್ವಾರಿ, ಕ್ರಷರ್‌ಗಳಿಗೆ ಎರಡು ಬಾರಿ ರಾಜಧನ ವಸೂಲಿ; ಮಾಲೀಕರ ಆಕ್ರೋಶ
ಮತ್ತೊಂದೆಡೆ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರು ಕೂಡ ಬೃಹತ್ ಪ್ರತಿಭಟನೆ ಮಾಡಿದರು. ಕಲ್ಲು ಗಣಿಗಾರಿಕೆಗೆ ಸರ್ಕಾರ ಎರಡೆರಡು ಬಾರಿ ಹಣ ವಸೂಲಿ ಮಾಡುತ್ತಿದೆ. ಕ್ವಾರಿ ಮಾಲೀಕರು ಹಾಗೂ ಕಂಟ್ರಾಕ್ಟರ್ ಮೂಲಕವೂ ಹಣ ವಸೂಲಿ ಮಾಡುತ್ತಿದ್ದು, ಈ ಸಮಸ್ಯೆಯನ್ನು ಸರ್ಕಾರ ಬೇಗ ಬಗೆಹರಿಸಬೇಕು. ಎರಡು ಬಾರಿ ರಾಜಧನ ವಸೂಲಿ ಮಾಡುವುದನ್ನು ತಡೆಯದಿದ್ದರೆ 7 ದಿನಗಳ ಕಾಲ ಗಣಿಗಾರಿಕೆ ನಿಲ್ಲಿಸಲಾಗುತ್ತದೆ ಎಂದು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಸಚಿವ ಹಾಲಪ್ಪ ಆಚಾರ್, ಮಾಜಿ ಸಚಿವ ಈಶ್ವರಪ್ಪ, ಶಾಸಕ ಶಿವಲಿಂಗೆಗೌಡ, ಕಳಕಪ್ಪ ಬಂಡಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಉಪಯೋಗವಾಗಲಿಲ್ಲ. ಈ ವೇಲೆ ಗಣಿ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ | ಶಿರಸಿ ಪ್ರತ್ಯೇಕ ಜಿಲ್ಲೆ | ಪಕ್ಷಾತೀತವಾಗಿ ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ ನಿಯೋಗ: ಸಕಾರಾತ್ಮಕ ಸ್ಪಂದನೆ

Exit mobile version