Site icon Vistara News

Protest at Belagavi | ಚಳಿಗಾಲ ಅಧಿವೇಶನ ವೇಳೆ ಪ್ರತಿಭಟನೆಗಳ ಅಬ್ಬರ; ಸುವರ್ಣ ಸೌಧದ ಬಳಿ ಟೆಂಟ್‍ಗಳು ಹೌಸ್‌ಫುಲ್

Protest at Belagavi

ಬೆಳಗಾವಿ: ಚಳಿಗಾಲ ಅಧಿವೇಶನ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕಲಾಪದೊಳಗೆ ಪ್ರತಿಪಕ್ಷಗಳ ಅಬ್ಬರ ಜೋರಾಗಿದ್ದರೆ ಹೊರಗೆ ವಿವಿಧ ಸಂಘಟನೆಗಳು ಪ್ರತಿಭಟನೆ (Protest at Belagavi) ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 9ಕ್ಕೂ ಅಧಿಕ ಸಂಘಟನೆಗಳು ಸುವರ್ಣ ಸೌಧ ಸಮೀಪದ ಬಸ್ತವಾಡ ಬಳಿಯ 8 ಪ್ರತಿಭಟನಾ ಟೆಂಟ್‍ಗಳು ಮಂಗಳವಾರ ಹೌಸ್‍ಫುಲ್ ಆಗಿದ್ದವು.

ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವಂತೆ ನೇಕಾರ ಸಮುದಾಯ, 1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜು ಆಡಳಿತ ಮಂಡಳಿ, ಸೇವಾ ಭದ್ರತೆ ಹಾಗೂ ವೇತನ ಹೆಚ್ಚಿಸುವಂತೆ ಜೆಒಸಿ ನೌಕರರ ಒಕ್ಕೂಟ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ದಾವಣಗೆರೆಯ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ನವಕರ್ನಾಟಕ ಗೌರವಧನ ಕಾರ್ಯಕರ್ತರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ವಿಕಲಚೇತನರ ಗೌರವ ಕಾರ್ಯಕರ್ತರ ಹುದ್ದೆಯನ್ನು ಕಾಯಂಗೊಳಿಸುವಂತೆ ನವ ಕರ್ನಾಟಕ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ವಿಕಲ ಚೇತನರ ಗೌರವ ಕಾರ್ಯಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ಪ್ರತಿಭಟನಾಸ್ಥಳಕ್ಕೆ ತೆರಳಿ ಮನವಿ ಪಡೆದು ಸಮಸ್ಯೆ ಪರಿಹರಿಸುವಂತೆ ಭರವಸೆ ನೀಡಿದರು.

ಇದನ್ನೂ ಓದಿ | Abolition of reservation | ಮೀಸಲಾತಿ ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿ: ಕೋಡಿಹಳ್ಳಿ ಚಂದ್ರಶೇಖರ್

ಇನ್ನು ಕುಂಡಸಕೊಪ್ಪ ಬಳಿ ಪ್ರತಿಭಟನಾ ಜಾಗದಲ್ಲಿ ರೈತ ಸಂಘಟನೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿ ಟನ್‌ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು 3500 ರೂಪಾಯಿ ಹಾಗೂ ರಾಜ್ಯ ಸರ್ಕಾರ 2000 ರೂ. ಸೇರಿ 5500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು. ಈ ವೇಳೆ ರಾಜ್ಯ ರೈತ ಸಂಘದ ಪ್ರತಿಭಟನೆ ವೇದಿಕೆ ಮೇಲೆ ಬರಲು ಮುಂದಾದ ರೈತ ಹೋರಾಟಗಾರ್ತಿ ಮಂಜುಳಾಗೆ ಸ್ಥಳೀಯ ಹೋರಾಟಗಾರರು ಅವಕಾಶ ನಿರಾಕರಿಸಿದರು. ಇದೆ ವೇಳೆ ಮಂಜುಳಾ ಹಾಗೂ ಸ್ಥಳೀಯ ಹೋರಾಟಗಾರರ ಮಧ್ಯೆ ವಾಗ್ವಾದವೂ ನಡೆಯಿತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿದರು.

ಸತೀಶ ಜಾರಕಿಹೊಳಿಗೆ ಮುಜಗರ
ಕುಂಡಸಕೊಪ್ಪದಲ್ಲೇ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾಒಕ್ಕೂಟ ಕೂಡ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಮರಾಠಾ ಸಮುದಾಯದ ಓಲೈಕೆಗಾಗಿ ಪ್ರತಿಭಟನಾ ವೇದಿಕೆ ಕಡೆಗೆ ಹೋದ ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು. ಸತೀಶ ಜಾರಕಿಹೊಳಿ ಅವರು ಇತ್ತೀಚೆಗೆ ಹಿಂದು ಧರ್ಮ ಹಾಗೂ ಸಂಭಾಜೀ ಮಹಾರಾಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಇದರಿಂದ ಆಕ್ರೋಶ ಹೊರಹಾಕಿದ ಹೋರಾಟಗಾರರು ಪ್ರತಿಭಟನಾ ವೇದಿಕೆ ಹತ್ತಲು ಉಭಯ ನಾಯಕರಿಗೆ ಅವಕಾಶ ನೀಡಲಿಲ್ಲ. ಇದರಿಂದ ಡ್ಯಾಮೇಜ್ ಕಂಟ್ರೊಲ್‍ಗೆ ಮುಂದಾಗಿದ್ದ ಸತೀಶ ಜಾರಕಿಹೊಳಿ ಮುಜಗರ ಅನುಭವಿಸಬೇಕಾಯಿತು.

ಪೊಲೀಸರ ಭದ್ರತೆಯೊಂದಿಗೆ ಉಭಯ ನಾಯಕರು ಹೊರಬಂದರು. ಈ ವೇಳೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ಜೈಕಾರವೂ ಇರಬೇಕು- ಧಿಕ್ಕಾರವೂ ಇರಬೇಕು. ಅಂದಾಗಲೇ ನಾಯಕನಾಗಿ ಬೆಳೆಯಲು ಸಾಧ್ಯ. ನನ್ನ ವಿರುದ್ಧ ಘೋಷಣೆ ಕೂಗಿದವರು ಬಿಜೆಪಿಯವರು ಇರಬಹುದು ಎಂದು ಆರೋಪಿಸಿದರು.

2ಎ ಮೀಸಲಾತಿಗಾಗಿ ಪಂಚಮಾಸಾಲಿ ಪಾದಯಾತ್ರೆ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲ‌ಸಂಗಮ‌ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ‌ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಕೂಡ ಶುರುವಾಗಿದೆ. ಸವದತ್ತಿಯಿಂದ ಸೋಮವಾರ ಆರಂಭವಾದ ಈ ಬೃಹತ್ ಪಾದಯಾತ್ರೆ ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ವಾಸ್ತವ್ಯ ಹೂಡಿತ್ತು.‌ ಮಂಗಳವಾರ ಎರಡನೇ ದಿನದಲ್ಲಿ ಬೆಳಗಾವಿ ವಿಧಾನಸೌಧದತ್ತ ನಡಿಗೆ ಮುಂದುವರಿಸಿದ್ದಾರೆ.

ಡಿ.22 ರಂದು ಬೆಳಗಾವಿಗೆ ಪಾದಯಾತ್ರೆ ಪ್ರವೇಶಿಸಲಿದೆ. ಈ ಬಾರಿಯ ನಮ್ಮ‌ ಹೋರಾಟಕ್ಕೆ ಸರ್ಕಾರ ಮಣಿಯುವ ಮೂಲಕ ಇದೇ ಅಧಿವೇಶನದಲ್ಲಿ ಸರ್ಕಾರ ಮೀಸಲಾತಿ ಕಲ್ಪಿಸುತ್ತದೆ ಎಂಬ ಭರವಸೆ ಇದೆ. ಒಂದು ವೇಳೆ ಮೀಸಲಾತಿಗೆ ಸರ್ಕಾರ ಅಸ್ತು ಎನ್ನದೇ ಹೋದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದು ಖಚಿತ. ಹೀಗಾಗಿ ಮುಂದಾಗುವ ಹೋರಾಟವನ್ನು ಎದುರಿಸಲು ಸಿದ್ಧರಾಗಿರಿ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ವಸಿಷ್ಠ ಸಹಕಾರ ಸಂಘ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಲು ಕಾಂಗ್ರೆಸ್‌ ಒತ್ತಾಯ

Exit mobile version