Site icon Vistara News

Raichur News: ಕ್ಷೌರಿಕ ವೃತ್ತಿಗೆ ಅವಮಾನ: ಶಾಮನೂರು ಶಾಸಕ ಸ್ಥಾನ ರದ್ದುಪಡಿಸಲು ಆಗ್ರಹ

Protest demanding dismissal of Shamanur Shivshankarappa from the post of MLA at lingasugur

ಲಿಂಗಸುಗೂರು: ಕ್ಷೌರಿಕ ವೃತ್ತಿಗೆ ಅವಮಾನ ಮಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ, ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ (Protest) ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ಚಿತ್ತಾಪುರ ಮಾತನಾಡಿ, ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಅಧಿವೇಶನ ಹೆಸರಿನಲ್ಲಿ ನಡೆಸಲು ಉದ್ದೇಶಿಸಿದ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡುವ ಸಮಯದಲ್ಲಿ ವೀರಶೈವ ಲಿಂಗಾಯತ ಒಳ ಪಂಗಡಗಳಲ್ಲಿ ಹಜಾಮರು ವೀರಶೈವ ಲಿಂಗಾಯತರಿದ್ದಾರೆ. ಅವರು ನಮ್ಮ ವೀರಶೈವ ಲಿಂಗಾಯತರ ಒಂದು ಭಾಗ ಎಂದು ಹೇಳುವ ಮೂಲಕ ನಮ್ಮ ಕ್ಷೌರಿಕ ವೃತ್ತಿಗೆ ಅಪಮಾನ ವಾಗುವ ರೀತಿ ಸಾರ್ವಜನಿಕ ಹೇಳಿಕೆ ನೀಡಿದ್ದು ಖಂಡನೀಯ ಎಂದು ಆರೋಪಿಸಿದರು.

ಇದನ್ನೂ ಓದಿ: Shortest Day: ಭಾರತದ ಪಾಲಿಗೆ ನಾಳೆ ಅತ್ಯಂತ ಕಿರಿಯ ದಿನ! ಏನು ಕಾರಣ?

ಈ ಹಿಂದೆ ತಮ್ಮದೇ ಕಾಂಗ್ರೆಸ್ ಸರ್ಕಾರವೇ ಕರ್ನಾಟಕ ಸರ್ಕಾರದ ನಡವಳಿಗಳಲ್ಲಿ ಹೊರಡಿಸಿದ ಹಜಾಮ ಎನ್ನುವ ವೃತ್ತಿ ನಿಂದನೆ ಸೂಚಕ ಪದವನ್ನು ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ವೃತ್ತಿ ನಿಂದನೆ ಪದ ಬಳಕೆ ಮಾಡಿದ ವ್ಯಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶವನ್ನು ಸರ್ಕಾರವು ನೀಡಿಲ್ಲ ಎಂಬ ನೆಪವಾಗಿಟ್ಟುಕೊಂಡು, ಪದೇ ಪದೇ ಅನೇಕ ಪ್ರಬಲ ಜನಪ್ರತಿನಿಧಿಗಳು ಕ್ಷೌರಿಕ ವೃತ್ತಿ ನಿಂದನೆ ಪದ ಬಳಕೆ ಮಾಡುತ್ತಿದ್ದಾರೆ, ಇದರಿಂದ ಕ್ಷೌರಿಕ ವೃತ್ತಿ ಬಾಂಧವರ ಆತ್ಮ ಗೌರವಕ್ಕೆ ದಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕ್ಷೌರಿಕ ವೃತ್ತಿಗೆ ಅವಮಾನ, ನಿಂದನೆ ಪದ ಬಳಕೆ ಮಾಡಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಶಾಸಕ ಸ್ಥಾನವನ್ನು ವಜಾಗೊಳಿಸಬೇಕು. ಜಾತಿ ನಿಂದನೆ ಸೂಚಕ ಪದ ಬಳಸಿದ ವ್ಯಕ್ತಿಗಳ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದನ್ನೂ ಓದಿ: Kalaburagi News: ರಕ್ತದಾನ ಮಾಡಿ, ಜೀವ ಉಳಿಸಿ: ಡಿಸಿ ಫೌಜಿಯಾ ತರನ್ನುಮ್

ಪ್ರತಿಭಟನೆಯಲ್ಲಿ ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಶರಣಬಸವ ಈಚನಾಳ, ಕುಮಾರಸ್ವಾಮಿ, ಮುತ್ತಣ್ಣ ಗುಡಿಹಾಳ,ಆದಪ್ಪ ಸರ್ಜಾಪುರ,ಗುಂಡಪ್ಪ ಮುದಗಲ್, ಅಮರಣ್ಣ,ಮಲ್ಲಿಕಾರ್ಜುನ, ಮಂಜು ಗಂಗಾವತಿ, ಹಾಗೂ ಇನ್ನಿತರಿದ್ದರು.

Exit mobile version