Site icon Vistara News

ಪಿಎಸ್ಐ ನೇಮಕ ಅಕ್ರಮ ಪ್ರಕರಣ; ಸಿಐಡಿ ತನಿಖೆ ವೈಖರಿಗೆ ಹೈಕೋರ್ಟ್ ಅಸಮಾಧಾನ

ಹೈಕೋರ್ಟ್‌

ಬೆಂಗಳೂರು: ಪಿಎಸ್ಐ ನೇಮಕ ಅಕ್ರಮ ಪ್ರಕರಣದ ಸಿಐಡಿ ತನಿಖೆಯ ಮೇಲೆ ಮತ್ತೆ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ಅಕ್ರಮದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಯಾವುದೇ ಹಿರಿಯ ಅಧಿಕಾರಿಗಳು ಅಥವಾ ರಾಜಕಾರಣಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿಪಿ ಪಿ.ಎಸ್‌. ಸಂಧು ಅವರಿಗೆ ಸೂಚಿಸಿದೆ.

ಪರೀಕ್ಷೆಗಳಲ್ಲಿ ಅಕ್ರಮ ಆಗಿರುವುದು ಮೊದಲ ಪ್ರಕರಣವಲ್ಲ. ಈ ಮೊದಲು ಸಾಕಷ್ಟು ಪರೀಕ್ಷೆಗಳಲ್ಲಿ ಅಕ್ರಮ ಆಗಿದೆ. ನೀವೇ ಸರಿಯಾಗಿ ತನಿಖೆ ಮಾಡ್ತೀರಾ? ಬೇರೆ ತನಿಖಾ ಸಂಸ್ಥೆಗೆ ನೀಡಬೇಕಾ? ನಿಮಗೆ ಸ್ವತಂತ್ರವಾದ ಅಧಿಕಾರವನ್ನು ಕೊಡಲಾಗಿದೆ. ಅಕ್ರಮದಲ್ಲಿ ಭಾಗಿಯಾದವರು ಸಚಿವರೇ ಇರಲಿ, ಅಧಿಕಾರಿಗಳೇ ಇರಲಿ. ಮೊದಲು ಕ್ರಮ ಕೈಗೊಳ್ಳಿ ಎಂದು ಸಿಐಡಿ ಅಧಿಕಾರಗಳ‌ ಮೇಲೆ ಹೈಕೋರ್ಟ್ ಗರಂ ಆಗಿದೆ.

ಮುಚ್ಚಿದ ಲಕೋಟೆಯಲ್ಲಿ ಸಿಐಡಿ ನೀಡಿರುವ ತನಿಖಾ ವರದಿಯನ್ನು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟ್‌ಗೆ ಗುರುವಾರ ಸಲ್ಲಿಸಿದ್ದು, ಯಾರೆಲ್ಲಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್ ಏಕಸದಸ್ಯ ಪೀಠ, ಪಿಎಸ್‌ಐ ಆಗಲು ವಿದ್ಯಾರ್ಥಿಗಳು ಜೀವನ ಪೂರ್ತಿ ಕಷ್ಟ ಪಟ್ಟಿರುತ್ತಾರೆ, ಇದು ಒಂದು ರೀತಿ ಭಯೋತ್ಪಾದನಾ ಕೃತ್ಯ. ಕೇವಲ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ, ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದೆ. ಕೆಲವು ಕ್ರಿಮಿನಲ್‌ಗಳೂ ರ‍್ಯಾಂಕ್ ಪಡೆದು ಹುದ್ದೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪರೀಕ್ಷೆ ರದ್ದು ಮಾಡುವುದು ಮಾತ್ರ ಇದಕ್ಕೆ ಪರಿಹಾರವಲ್ಲ, ಅಕ್ರಮದಲ್ಲಿ ಯಾವುದೇ ಮಿನಿಸ್ಟರ್ ಅಥವಾ ಅಧಿಕಾರಿಗಳ ಕೈವಾಡವಿದ್ದರೂ ಕ್ರಮ ಆಗಬೇಕು. ಪಿಎಸ್‌ಐ ನೇಮಕಾತಿ ಅಕ್ರಮ ಸಮಾಜಕ್ಕೆ ಒಂದು ರೀತಿಯ ಭಯೋತ್ಪಾದನೆಯಂತಹ ಕೃತ್ಯ. ಸಿಐಡಿ ಡಿಜಿಪಿ ಸಂಧು ಅವರ ಮೇಲೆ ಗೌರವ ಇದೆ, ಅವರು ತನಿಖೆ ಮೇಲ್ವಿಚಾರಣೆ ನಡೆಸಿ ಪ್ರಕರಣದ ತನಿಖೆಯ ಸಂಪೂರ್ಣ ವರದಿ ಕೋರ್ಟ್‌ಗೆ ನೀಡಬೇಕು. ಎಷ್ಟು ಒಎಂಆರ್ ಶೀಟ್‌ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಸೇರಿ ಎಫ್ಎಸ್ಎಲ್ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಪ್ರಕರಣದ ಸಂಪೂರ್ಣ ಪ್ರಗತಿ ವರದಿ ನೀಡಬೇಕು, ಈಗ ಸಲ್ಲಿಕೆಯಾಗಿರುವ ಆಗಿರುವ ವರದಿಯನ್ನು ನೋಡುತ್ತೇನೆ. ನಂತರ ಬೇರೆ ತನಿಖಾ ಸಂಸ್ಥೆಗೆ ಪ್ರಕರಣವನ್ನು ಹಸ್ತಾಂತರಿಸಬೇಕೆ, ಬೇಡವೇ ಎಂಬುವುದನ್ನು ನಿರ್ಧಾರ ಮಾಡಲಾಗುತ್ತದೆ ಎಂದ ಹೈಕೋರ್ಟ್ ನ್ಯಾಯಮೂರ್ತಿ, ಪ್ರಕರಣದ ವಿಚಾರಣೆಯನ್ನು ಜುಲೈ 7ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಹೈಕೋರ್ಟ್‌ಗೆ ಸಿಐಡಿ ಡಿಜಿ ಸಂಧು, ಎಡಿಜಿಪಿ ಉಮೇಶ್ ಕುಮಾರ್ ಹಾಗೂ ತನಿಖಾಧಿಕಾರಿಗಳು ಹಾಜರಾಗಿದ್ದರು.

ಇದನ್ನೂ ಓದಿ | ಪ್ರಾಮಾಣಿಕ ಪಿಎಸ್‌ಐ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ: ಗೃಹ ಸಚಿವರಿಗೆ 8 ಶಾಸಕರ ಪತ್ರ

Exit mobile version