ಚಿತ್ರದುರ್ಗ: ಕವಾಡಿಗರ ಹಟ್ಟಿ ಕಲುಷಿತ ನೀರಿನ ದುರಂತ ನಡೆದ ಮೂರು ದಿನಗಳ ಬಳಿಕ ಕೆ.ಸಿ. ಶಾಸಕ ವೀರೇಂದ್ರ ಪಪ್ಪಿ ಅವರು ಗುರುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಸೇವನೆಯಿಂದ (Contaminated water) ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಈ ವೇಳೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಇಷ್ಟು ದಿನ ಎಲ್ಲಿಗೆ ಹೋಗಿದ್ದಿರಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಜನರನ್ನು ಶಾಸಕರ ಬೆಂಬಲಿಗರು ಸಮಾಧಾನಪಡಿಸಿದರು.
ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸುವ ವೇಳೆ ವ್ಯಕ್ತಿಯೊಬ್ಬರು, ಹೆಂಡತಿ, ಮಕ್ಕಳು ಎಲ್ಲಾ ಆಸ್ಪತ್ರೆ ಸೇರಿದ್ದೇವೆ. ನಮಗೆ ಆರ್ಥಿಕ ಸಹಾಯ ಏನೂ ನೀಡಿಲ್ಲ. ನಮಗೆ ಪರಿಹಾರ ನೀಡಬೇಕು. ನನ್ನ ಹೆಂಡತಿ ಗರ್ಭಿಣಿ, ಏನಾದರೂ ಆದರೆ ಯಾರೂ ಹೊಣೆ ಸರ್ ಎಂದು ಅಳಲು ತೋಡಿಕೊಂಡರು.
ಶಾಸಕನ ಬೆಂಬಲಿಗರು-ಗ್ರಾಮಸ್ಥರ ನಡುವೆ ವಾಗ್ವಾದ
ಶಾಸಕ ವೀರೇಂದ್ರ ಪಪ್ಪಿ ಆಸ್ಪತ್ರೆಗೆ ಭೇಟಿ ನೀಡುವುದಕ್ಕೂ ಮೊದಲು ಶಾಸಕನ ಬೆಂಬಲಿಗರು ಹಾಗೂ ಕಾವಾಡಿಗರ ಹಟ್ಟಿ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಮಾನವೀಯತೆ ದೃಷ್ಟಿಯಿಂದ ಶಾಸಕರು ಬರಬೇಕಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಅದಕ್ಕೆ ಪಪ್ಪಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ನೂಕಾಟ ತಳ್ಳಾಟ ನಡೆದಿದೆ.
ಪಪ್ಪಿ ಅಭಿಮಾನಿ ಜಗದೀಶ್ ಎಂಬಾತ, ಶಾಸಕರು ಬರುತ್ತಾರೆ, ಅವರು ಬ್ಯುಸಿ ಇದ್ದಾರೆ. ನಾವು ಶಾಸಕರ ಪರವಾಗಿ ಕೆಲಸ ಮಾಡಿದ್ದೇವೆ. ಎಲ್ಲಾ ಸಮಯದಲ್ಲಿ ಜನರ ಜತೆಗೆ ಇದ್ದೇವೆ. ಶಾಸಕರೇ ಬರಬೇಕಾ ನಿಮಗೆ ಎಂದು ಶಾಸಕರ ನಡೆ ಬಗ್ಗೆ ಸಮರ್ಥಿಸಿಕೊಂಡರು.
ತಹಸೀಲ್ದಾರ್‌ಗೆ ವಿರುದ್ಧ ಆಕ್ರೋಶ
ಕವಾಡಿಗರಹಟ್ಟಿ ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದ ಕಾರಣ ಸ್ಥಳೀಯರ ಆಕ್ರೋಶ ಹೊರಹಾಕಿದ ಬಳಿಕ ಅಧಿಕಾರಿಗಳು ಎಚ್ಚೆತ್ತು ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿದ್ದಾರೆ. ನಂತರ ಗ್ರಾಮಕ್ಕೆ ಚಿತ್ರದುರ್ಗ ತಹಶಿಲ್ದಾರ್ ನಾಗವೇಣಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಜನರಿಗೆ ನೀರು, ಆಹಾರದ ವ್ಯವಸ್ಥೆ ಕಲ್ಪಿಸಿಲ್ಲ ಕಿಡಿಕಾರಿದರು.
ಇದುವರೆಗೂ ಯಾವ ಎಂಜಿನಿಯರ್ ಬಂದಿಲ್ಲ., ಡಿಸಿ, ಎಸ್‌ಪಿ ಬರುತ್ತಾರೆ ಹೋಗುತ್ತಾರೆ ಮೇಡಂ. ಈಗ ನೀವ್ಯಾಕೆ ಬಂದ್ರಿ? ಕೂಡಲೇ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡಿಸಿ. ಸಾಯುವವರು ಸಾಯಲಿ ಎಂದು ಸುಮ್ಮನಾಗಿದ್ದೀರಾ? ಎಂದು ಗ್ರಾಮಸ್ಥರ ತಹಸೀಲ್ದಾರ್ ನಾಗವೇಣಿಯನ್ನು ತರಾಟೆಗೆ ತೆಗೆದುಕೊಂಡರು.
ಮನೆಗಳಿಗೆ ಫುಡ್ ಕಿಟ್ ವಿತರಣೆ
ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕವಾಡಿಗರ ಹಟ್ಟಿಯಲ್ಲಿ ಮನೆ ಮನೆಗೂ ಸಮಾಜ ಕಲ್ಯಾಣ ಇಲಾಖೆಯಿಂದ ಫುಡ್ ಕಿಟ್ ವಿತರಣೆ ಮಾಡಲಾಗಿದೆ. ಅಕ್ಕಿ, ಬೇಳೆ, ಗೋಧಿ ಹಿಟ್ಟು, ಬೆಲ್ಲ, ಎಣ್ಣೆ, ರಾಗಿ ಹಿಟ್ಟು, ಸಕ್ಕರೆ, ಕಡ್ಲೆ ಬೇಳೆ, ಟೀ ಪುಡಿ, ಉಪ್ಪು, ಸೋಪು, ಬಟ್ಟೆ ಸೋಪು ಸೇರಿ 15 ವಸ್ತುಗಳಿರುವ ಫುಡ್ ಕಿಟ್ ಅನ್ನು ಸುಮಾರು 350 ಮನೆಗಳಿಗೆ ವಿತರಿಸಲಾಗಿದೆ.
ಎಸಿ ಮುಂದೆ ಗಳಗಳನೇ ಕಟ್ಟಿರಿಟ್ಟ ರಘು ತಾಯಿ
ಚಿತ್ರದುರ್ಗದ ಕವಾಡಿಗರಹಟ್ಟಿಗೆ ಎಸಿ ಕಾರ್ತಿಕ್ ಭೆಟಿ ನೀಡಿದಾಗ, ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದ ರಘು ಎಂಬ ಯುವಕನ ತಾಯಿ ವಿಮಲಮ್ಮ ಕಣ್ಣೀರಿಟ್ಟರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರಘು, ಕಳೆದ ವಾರ ಗ್ರಾಮಕ್ಕೆ ಬಂದಿದ್ದ. ಇಲ್ಲಿ ನೀರು ಕುಡಿದು ಬೆಂಗಳೂರಿಗೆ ತೆರಳಿದ್ದಾಗ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ನಮಗೆ ನ್ಯಾಯ ಕೊಡಿ ಸರ್ ಎಂದು ಬೇಡಿಕೊಂಡಿದ್ದಾರೆ.