ಶಿವಮೊಗ್ಗ: ಸಮೀಪದ ನಿದಿಗೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಪುನೀತ್ ರಾಜಕುಮಾರ್ (Puneeth Rajkumar) ಅವರ ೨೩ ಅಡಿ ಎತ್ತರದ ಪ್ರತಿಮೆ ಸಿದ್ಧಗೊಂಡಿದ್ದು, ನೈಜತೆಯಿಂದ ಕೂಡಿದಂತೆ ಆಕರ್ಷಣೀಯವಾಗಿ ಮೂಡಿಬಂದಿದೆ. ಇದೀಗ ಈ ಪ್ರತಿಮೆ ಬಳ್ಳಾರಿಯತ್ತ ಹೊರಟಿದೆ.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 21ರಂದು ಬಳ್ಳಾರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು ಸಂಜೆ ಗಂಟೆಗೆ ಪುನೀತ್ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು.
ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ ಶಿಲ್ಪಿ ನೇತೃತ್ವದ ತಂಡವು ಪುನೀತ್ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 23 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, 3 ತಿಂಗಳಲ್ಲಿ ನಿರ್ಮಾಣವಾಗಿದೆ. ಕಬ್ಬಿಣ, ಫೈಬರ್‌ನಿಂದ ನಿರ್ಮಿಸಲಾಗಿದ್ದು, ಒಟ್ಟು 3 ಸಾವಿರ ಕೆ.ಜಿ. ತೂಕವನ್ನು ಹೊಂದಿದೆ. ಕಬ್ಬಿಣವೇ 1 ಸಾವಿರ ಕೆ.ಜಿ. ಇದೆ. ಜೀವನ್ ಕಲಾ ಸನ್ನಿಧಿಯ ಜೀವನ್ ಮತ್ತು ಅವರ 15 ಜನ ಶಿಲ್ಪಿಗಳು ಈ ಪ್ರತಿಮೆಗಾಗಿ ಶ್ರಮವಹಿಸಿದ್ದಾರೆ. ಮೊದಲಿಗೆ ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡ್ ನಿರ್ಮಿಸಿಕೊಂಡು ಆನಂತರದಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಅದಕ್ಕಾಗಿ 16 ಜನರ ತಂಡ ದಿನದ 24 ಗಂಟೆಗಳ ಕಾಲ ಹಗಲು ರಾತ್ರಿ 3 ತಿಂಗಳ ಕಾಲ ಕೆಲಸ ಮಾಡಿದೆ. 40 ಅಡಿ ಉದ್ದದ ೨೦ ಚಕ್ರದ ಲಾರಿಯಲ್ಲಿ ಪುನೀತ್ ಪ್ರತಿಮೆಯನ್ನು ರವಾನೆ ಮಾಡಲಾಗುತ್ತಿದ್ದು, ಇದಕ್ಕೆ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.
ಅಪ್ಪು ಅಭಿಮಾನಿಗಳ ಬೇಡಿಕೆ
ಬಳ್ಳಾರಿಯ ಅಪ್ಪು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಚಿವ ಶ್ರೀರಾಮುಲು ಈ ಪ್ರತಿಮೆ ನಿರ್ಮಿಸಲು ಸೂಚಿಸಿದ್ದರು. ಈಗಾಗಲೇ ನಿರ್ಮಾಣಗೊಂಡಿರುವ ಅಪ್ಪು ಪ್ರತಿಮೆಗಳಿಗಿಂತ ದೊಡ್ಡ ಪ್ರತಿಮೆ ನಿರ್ಮಿಸಬೇಕೆಂಬ ಶ್ರೀರಾಮುಲು ಅವರ ಅಪೇಕ್ಷೆಯಂತೆ 23 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ರಾಜಕುಮಾರ್ ಅವರ ಕುಟುಂಬದವರು ಭಾಗವಹಿಸುವ ನಿರೀಕ್ಷೆಯಿದೆ.
ಜೂ.೨೧ರಂದು ಅನಾವರಣ- ಶ್ರೀರಾಮುಲು
ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ಅನಾವರಣ ಮಾಡಬೇಕೆಂಬ ಕೂಗು ಜಿಲ್ಲೆಯಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಡಿಸಲಾಗಿದ್ದು, ಜಿಲ್ಲಾ ಕ್ರೀಡಾಂಗಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗುವುದು. ಜತೆಗೆ ಅಲ್ಲಿಯೇ ಇರುವ ಕೆರೆ ಮತ್ತು ಪಾರ್ಕ್‌ಗೆ ಡಾ. ಪುನೀತ್ ರಾಜಕುಮಾರ್ ಹೆಸರನ್ನು ಇಟ್ಟು, ಅವರ ಪ್ರತಿಮೆಯನ್ನೂ ಅನಾವರಣ ಮಾಡಲಾಗುವುದು. ಈ ಮೂಲಕ ಬಳ್ಳಾರಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ ಎಂದು ಸಚಿವ ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಮನದ ಮಾತು With HPK | ನಾನು ಹಳ್ಳಿಯವನು, ನನ್ನ ಮಾತೇ ಹಾಗೆ; ಪ್ರೀತಿ ಮಾಡದವರು ಮನುಷ್ಯರೇ ಅಲ್ಲ: ಸಿದ್ದರಾಮಯ್ಯ ಮತ್ತೇನು ಹೇಳಿದರು?